ಕೋಲಾರ ಜಿಲ್ಲೆಯ ಅಭಿವೃದ್ದಿಗೆ ಅನುದಾನ ಮಂಜೂರು

| Published : Aug 16 2024, 12:51 AM IST

ಸಾರಾಂಶ

ಜಿಲ್ಲೆಯಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಸಂಸ್ಕಾರಣಾ ಘಟಕ ನಿರ್ಮಾಣಕ್ಕಾಗಿ ೨೫.೧೧ಕೋಟಿ ಅನುದಾನ ಮೀಸಲು ಇಡಲಾಗಿದೆ. ಅಮೃತ್ ೨.೦ಯೋಜನೆಯಡಿಯಲ್ಲಿ ನೀರು ಸರಬರಾಜು ಮತ್ತು ಹಸಿರು ವಲಯ ಹಾಗೂ ಪಾರ್ಕ್ ಗಳಿಗಾಗಿ ಜಿಲ್ಲೆಗೆ ೪೦ ಕೋಟಿ ಅನುದಾನ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರಸರ್ಕಾರ ಜನರಿಗೆ ನೀಡಿದ ಭರವಸೆಯ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲಾಗಿದೆ. ಕೋಲಾರ ಜಿಲ್ಲೆಗೆ ಭರಪೂರ ಅನುದಾನ ಒದಗಿಸಲು ಶ್ರಮ ವಹಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ ಹೇಳಿದರು.

ಸ್ವಾತಂತ್ರ್ಯ ದಿನದ ಅಂಗವಾಗಿ ಗುರುವಾರ ನಗರದ ಸರ್ ಎಂ ವಿಶ್ವೇಶ್ವರಯ್ಯ ಜಿಲ್ಲಾ ಆಟದ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಸಚಿವರು ಸಂದೇಶ ನೀಡಿದರು.

ವಿವಿಧ ಯೋಜನೆಗೆ ಅನುದಾನ

ಜಿಲ್ಲೆಯಲ್ಲಿ ಒಳಚರಂಡಿ ಜಾಲ, ಗೃಹ ಸಂಪರ್ಕ ಕ್ಕಾಗಿ ಕೋಲಾರ ನಗರಕ್ಕೆ ೬೦ಕೋಟಿಗಳ ಅನುದಾನ, ರಾಬರ್ಟ್ ಸನ್ ಪೇಟೆ ಅಭಿವೃದ್ಧಿಗೆ ೨೦ಕೋಟಿ ಅನುದಾನ ಅನುಮೋದನೆ ಮಾಡಲಾಗಿದೆ. ವೇಮಗಲ್ ಕುರಗಲ್ ನಲ್ಲಿ ವಿವಿಧ ಯೋಜನೆಗಳಿಗಾಗಿ ೩.೫೦ ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಸಂಸ್ಕಾರಣಾ ಘಟಕ ನಿರ್ಮಾಣಕ್ಕಾಗಿ ೨೫.೧೧ಕೋಟಿ ಅನುದಾನ ಮೀಸಲು ಇಡಲಾಗಿದೆ. ಅಮೃತ್ ೨.೦ಯೋಜನೆಯಡಿಯಲ್ಲಿ ನೀರು ಸರಬರಾಜು ಮತ್ತು ಹಸಿರು ವಲಯ ಹಾಗೂ ಪಾರ್ಕ್ ಗಳಿಗಾಗಿ ಜಿಲ್ಲೆಗೆ ೪೦ ಕೋಟಿ ಅನುದಾನ ನೀಡಲಾಗಿದೆ. ಯಾರಗೊಳ್ ಆಣೆಕಟ್ಟಿನಿಂದ ಬಂಗಾರಪೇಟೆ, ಕೋಲಾರ ಹಾಗೂ ಮಾಲೂರು ತಾಲೂಕುಗಳ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಇದಕ್ಕಾಗಿ ೩೦೮.೪೬ಕೋಟಿ ವೆಚ್ಚ ಮಾಡಲಾಗಿದೆ ಎಂದು ಹೇಳಿದರು.ಹೊರವರ್ತುಲ ರಸ್ತೆಗೆ ₹100 ಕೋಟಿ

ಕೋಲಾರ ನಗರದ ಹೊರವಲಯದಲ್ಲಿ ಹೊರವರ್ತುಲ ರಸ್ತೆ ಅಭಿವೃದ್ಧಿಗೆ ೧೦೦ ಕೋಟಿ ಅನುದಾನ ಅಂದಾಜಿಸಲಾಗಿದೆ. ಈ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಲು ಕ್ರಮ ವಹಿಸಲಾಗುವುದು. ಹಳೇ ಬಸ್ ನಿಲ್ದಾನವನ್ನು ನವೀಕರಣ ಮಾಡಲು ೫ಕೋಟಿಗಳ ಅನುದಾನ ಮಂಜೂರು ಮಾಡಲಾಗಿದೆ. ಬಂಗಾರಪೇಟ್, ಕೋಲಾರ ನಗರಗಳಲ್ಲಿ ಪಾದಚಾರಿ ಮಾರ್ಗ ಹಾಗೂ ಕೋಲಾರ ಚಿಕ್ಕಬಳ್ಳಾಪುರ ರಸ್ತೆ ಪಾದಚಾರಿ ಮಾರ್ಗ ಅಭಿವೃದ್ಧಿಗೆ ೧೨ ಕೋಟಿ ಅನುದಾನ ಒದಗಿಸಲಾಗುವುದು. ಇಂತಹ ವಿಶೇಷ ಅನುದಾನಗಳನ್ನು ಜಿಲ್ಲೆಗೆ ಒದಗಿಸಲಾಗಿದೆ. ಎಂದರು.

ಜಿಲ್ಲೆಯಲ್ಲಿ ಇಲಾಖೆವಾರು ಪ್ರಗತಿಯನ್ನು ವಿವರಿಸಿದರು. ನಂತರ ವಿವಿಧ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ಒಂದು ವರ್ಷದ ಅಭಿವೃದ್ಧಿ ಕಾರ್ಯಕ್ರಮಗಳ ಸಾಧನಾ ಕೈಪಿಡಿ ಬಿಡುಗಡೆ ಮಾಡಲಾಯಿತು.

ಶಂಕುಸ್ಥಾಪನೆ, ಉದ್ಘಾಟನೆ

ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಕ್ರೀಡಾಂಗಣ ನವೀಕರಣ, ಕಾಮಗಾರಿ ಉದ್ಘಾಟನೆ,ತೋಟಗಾರಿಕೆ ಇಲಾಖೆಯ ೨೦೦೦ಮೇ. ಟನ್ ಸಾಮರ್ಥ್ಯದ ಶೀತಲ ಗೃಹ ಶಂಕುಸ್ಥಾಪನೆ, ನಿರ್ಮಿತಿ ಕೇಂದ್ರದ ಶಾಲಾ ಕಟ್ಟಡ, ಕೋದಂಡ ರಾಮಸ್ವಾಮಿ ದೇವಸ್ಥಾನ, ಸಾರ್ವಜನಿಕ ಸಂಪರ್ಕ ಕೇಂದ್ರ, ಕಂದಾಯ ನ್ಯಾಯಾಲಯ ಕಟ್ಟಡ, ಅಂಬೇಡ್ಕರ್ ಭವನ, ಅಟಲ್ ಜಿ ಜನಸ್ನೇಹಿ ಕೇಂದ್ರ ಕಟ್ಟಡ, ಕಂದಾಯ ಇಲಾಖೆಯ ೨ ಹೊಸ ನಾಡ ಕಚೇರಿ ಕಟ್ಟಡಗಳ ಉದ್ಘಾಟನೆ ಕಾರ್ಯಕ್ರಮ ನಡೆಯಿತು.ಸಮಾರಂಭದಲ್ಲಿ ಕೋಲಾರ ಕ್ಷೇತ್ರ ಶಾಸಕ ಡಾ. ಕೊತ್ತೂರ್ ಮಂಜುನಾಥ್ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಕೋಲಾರ ಸಂಸದ ಎಂ. ಮಲ್ಲೇಶ್ ಬಾಬು, ವಿಧಾನ ಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು, ಎಂ. ಎಲ್. ಅನಿಲ್ ಕುಮಾರ್, ಜಿಲ್ಲಾಧಿಕಾರಿ ಅಕ್ರಂ ಪಾಷ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ನಿಖಿಲ್ ಇದ್ದರು.