ಕ್ರೀಡಾಂಗಣದ ಕಾಮಗಾರಿ ಪೂರ್ಣಗೊಳಿಸಲು ಅನುದಾನ

| Published : Apr 08 2025, 12:34 AM IST

ಸಾರಾಂಶ

ಕೊಳ್ಳೇಗಾಲ ಪಟ್ಟಣದ ಶ್ರೀಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಸರ್ಕಾರದಿಂದ ಅನುದಾನ ತಂದು ಅಪೂರ್ಣಗೊಂಡಿರುವ ಒಳಾಂಗಣ ಕ್ರೀಡಾಂಗಣದ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮವಹಿಸಲಾಗುವುದು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಭರವಸೆ ನೀಡಿದರು.

ಪಟ್ಟಣದ ಶ್ರೀಮಹದೇಶ್ವರ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿರುವ ಒಳಾಂಗಣ ಕ್ರೀಡಾಂಗಣಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕ್ರೀಡಾಂಗಣವನ್ನು ಪರಿಶೀಲಿಸಿ ಬಳಿಕ ಮಾತನಾಡಿ, ಈ ಹಿಂದೆ ಕೊಳ್ಳೇಗಾಲ ನಗರಸಭೆ ವತಿಯಿಂದ 3.5 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಲಾಗಿದೆ. ಅನುದಾನದ ಕೊರತೆಯಿಂದಾಗಿ ಕ್ರೀಡಾಂಗಣ ಕಾಮಗಾರಿ ಅಪೂರ್ಣಗೊಂಡಿದ್ದು, ಈ ಸಂಬಂಧ ಸದನದಲ್ಲಿಯೂ ಚರ್ಚಿಸಿದ್ದು, ಮುಂದಿನ ದಿನಗಳಲ್ಲಿ ಸಿಎಂ ಜೊತೆ ಚರ್ಚಿಸಿ ಸೂಕ್ತ ಅನುದಾನ ಬಿಡುಗಡೆಗೆ ಮನವಿ ಮಾಡಲಾಗುವುದು ಎಂದರು.

ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಕ್ರೀಡಾ ಕೌಶಲ್ಯ ಅಭಿವೃದ್ಧಿಗಾಗಿ 56 ಕೋಟಿ ರು.ಗಳ ಸಮಗ್ರ ಪಟ್ಟಿಯನ್ನು ಸಿದ್ಧಪಡಿಸಿದ್ದು, ಕೊಳ್ಳೇಗಾಲ ತಾಲೂಕಿನ ಕ್ರೀಡಾಭಿವೃದ್ಧಿ ಕಾರ್ಯಕ್ರಮಗಳಿಗೆ 8 ಕೋಟಿ ಅನುದಾನ ಪಟ್ಟಿ ಮಾಡಲಾಗಿದ್ದು, ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಗುವ ಸಾಧ್ಯತೆಗಳಿವೆ ಎಂದು ತಿಳಿಸಿದರು.

ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್ ಮಾತನಾಡಿ, ಮಹದೇಶ್ವರ ಕಾಲೇಜು ಮೈದಾನದಲ್ಲಿ ನಿರ್ಮಾಣವಾಗುತ್ತಿರುವ ಬಾಸ್ಕೆಟ್‌ಬಾಲ್ ಕೋರ್ಟ್, ಒಳಾಂಗಣ ಕ್ರೀಡಾಂಗಣ ಕಾಮಗಾರಿಗಳ ಬಗ್ಗೆ ಕಾಲೇಜು ಆಡಳಿತ ಮಂಡಳಿಯಲ್ಲಿ ಕೆಲವು ಅಸ್ಪಷ್ಟ ನಿಲುವುಗಳಿದ್ದವು, ಈ ದಿನ ಶಾಸಕರ ಸಮ್ಮುಖದಲ್ಲಿ ಎಲ್ಲವೂ ಕೂಡ ಸ್ಪಷ್ಟವಾಗಿದೆ. ಕಾಮಗಾರಿ ಸ್ಥಳಗಳ ಸರ್ವೇ ಕಾರ್ಯಗಳು ಪೂರ್ಣಗೊಂಡು ವಿದ್ಯಾರ್ಥಿಗಳ ಅನುಕೂಲಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದರು.

ಬಳಿಕ ಶಾಸಕರು ಕಾಲೇಜು ಮೈದಾನದಲ್ಲಿ 35 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬಾಸ್ಕೆಟ್‌ಬಾಲ್ ಅಂಗಳದ ಕಾಮಗಾರಿ, ಹೈಟೆಕ್ ಜಿಮ್ ಕಟ್ಟಡದ ಕಾಮಗಾರಿಗಳನ್ನು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷೆ ರೇಖಾ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಸದಸ್ಯರಾದ ಶಾಂತರಾಜು, ಸುಮಾ ಸುಬ್ಬಣ್ಣ, ನಾಮನಿರ್ದೇಶಿತ ಸದಸ್ಯರಾದ ಅನ್ಸರ್‌ಬೇಗ್, ಸ್ವಾಮಿ, ನಂಜಪ್ಪ, ನರಸಿಂಹನ್, ತಹಸೀಲ್ದಾರ್ ಬಸವರಾಜು, ತಾಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಕಾಲೇಜಿನ ಪ್ರಾಂಶುಪಾಲೆ ಬಿ.ಜಯಲಕ್ಷಿ ನಗರಸಭೆ ಇಂಜಿನಿಯರ್ ನಾಗೇಂದ್ರ ಸೇರಿದಂತೆ ಇತರರಿದ್ದರು.