ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಂತ್ರಿಯಾದ ತಕ್ಷಣ ಅನೇಕ ಭರವಸೆಗಳನ್ನು ನೀಡಿದ್ದರು. ಅದ್ಯಾವುದೂ ಈಡೇರಿಲ್ಲ.

ಭರವಸೆಗಳು ಈಡೇರಿಲ್ಲ । ಮಧು ಬಂಗಾರಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು ದಾಖಲೆ ಕೊಡಿ: ಹರತಾಳು ಹಾಲಪ್ಪ ತಾಕೀತು

ಕನ್ನಡಪ್ರಭ ವಾರ್ತೆ ಸಾಗರ

ಸಚಿವ ಮಧು ಬಂಗಾರಪ್ಪ ಹಾಗೂ ಶಾಸಕ ಗೋಪಾಲಕೃಷ್ಣ ಬೇಳೂರು ಬಾಯಿ ಮಾತಿನಲ್ಲಿ ಅಭಿವೃದ್ಧಿಗೆ ಅಷ್ಟು ಕೋಟಿ ಅನುದಾನ ಬಂದಿದೆ ಎಂದು ಜನರಿಗೆ ತಪ್ಪು ಲೆಕ್ಕ ಕೊಡುವ ಬದಲು ದಾಖಲೆ ಸಹಿತ ತಿಳಿಸಲಿ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಬಂದು ಮೂರು ವರ್ಷ ಕಳೆದಿದೆ. ರಾಜ್ಯದ ಯಾವ ತಾಲೂಕುಗಳಲ್ಲೂ ಅಭಿವೃದ್ಧಿ ಕೆಲಸವಾಗಿಲ್ಲ. ನಮ್ಮ ತಾಲೂಕಿನಲ್ಲಿ ಮಾತ್ರ ಅಭಿವೃದ್ಧಿಗೆ ಅಷ್ಟು ಕೋಟಿ ಹಣ ಬಂದಿದೆ ಎಂದು ಶಾಸಕರು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಂತ್ರಿಯಾದ ತಕ್ಷಣ ಅನೇಕ ಭರವಸೆಗಳನ್ನು ನೀಡಿದ್ದರು. ಅದ್ಯಾವುದೂ ಈಡೇರಿಲ್ಲ. ಇದೀಗ ಒಂದು ಸಾವಿರ ಕೆಪಿಎಸ್ಸಿ ಶಾಲೆ ತೆರೆದು, ಬಸ್ ಸೌಲಭ್ಯ ಕಲ್ಪಿಸುತ್ತೇವೆ ಎಂದು ಹೇಳಿದ್ದಾರೆ. ಒಂದು ಕೆಪಿಎಸ್ಸಿ ಶಾಲೆ ತೆರೆಯಲು ೨೫ ಕೋಟಿ ರು. ಬೇಕಾಗುತ್ತದೆ. ಅಷ್ಟೊಂದು ಹಣ ಎಲ್ಲಿಂದ ತರುತ್ತಾರೆ ಎಂದು ಪ್ರಶ್ನೆ ಮಾಡಿದರು.ಸಾಗರ ಕ್ಷೇತ್ರ ಅಭಿವೃದ್ಧಿ ಹಿನ್ನಡೆ ಅನುಭವಿಸಿದೆ. ಯಾವ ಇಲಾಖೆಯಲ್ಲೂ ಅಧಿಕಾರಿಗಳು ಇಲ್ಲ. ಎಲ್ಲ ಪ್ರಮುಖ ಸ್ಥಾನಗಳನ್ನು ಪ್ರಭಾರಿ ಆವರಿಸಿಕೊಂಡಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಪ್ಪನವರು ಎಲ್ಲ ಅಧಿಕಾರಿಗಳು ಇದ್ದಾರೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ಯಾವ್ಯಾವ ಇಲಾಖೆಯಲ್ಲಿ ಖಾಯಂ ಅಧಿಕಾರಿಗಳು ಇದ್ದಾರೆ ಎನ್ನುವುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ಟ್ಯಾಗೂರ್ ಕಲ್ಚರಲ್ ಕಾಂಪ್ಲೆಕ್ಸ್ ನಿರ್ಮಿಸಲು ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ೪.೮೦ ಕೋಟಿ ರು. ಅನುದಾನ ತರಲಾಗಿತ್ತು. ಆ ಹಣ ಬ್ಯಾಂಕಿನಲ್ಲಿ ಇಷ್ಟು ದಿನ ಹಾಗೆ ಇತ್ತು. ಇದೀಗ ಶಾಸಕರು ರಂಗಮಂದಿರ ನಿರ್ಮಾಣಕ್ಕೆ ಸಾರ್ವಜನಿಕರ ಸಲಹೆ ಕೇಳುತ್ತಿದ್ದಾರೆ. ಮೂರು ವರ್ಷ ಶಾಸಕರು ಯಾಕೆ ಪ್ರಯತ್ನ ಮಾಡಿಲ್ಲ. ಒಳಚರಂಡಿ ಕಾಮಗಾರಿಗೆ ಮೊದಲು ೭೧ ಕೋಟಿ ಖರ್ಚು ಮಾಡಲಾಗಿತ್ತು. ಈಗಿನ ಶಾಸಕರು ನಾನು ೨೦ ಕೋಟಿ ಅನುದಾನ ತಂದಿದ್ದೇನೆ ಎಂದು ಹೇಳುತ್ತಿದ್ದಾರೆ. ಯಾವುದೇ ಕಾಮಗಾರಿ ನಡೆದಂತೆ ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಒಳಚರಂಡಿ ಕಾಮಗಾರಿಯನ್ನು ಸಮಗ್ರ ತನಿಖೆಗೆ ಒಳಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತದೆ ಎಂದು ಹೇಳಿದರು.ಹಸಿರುಮಕ್ಕಿ ಸೇತುವೆ ಕಾಮಗಾರಿ ಹಿನ್ನಡೆಗೆ ಹಾಲಪ್ಪ ಕಾರಣ ಎಂದು ಈಗಿನ ಶಾಸಕರು ಹೇಳಿ, ಸಿಗಂದೂರು ಸೇತುವೆ ಲೋಕಾರ್ಪಣೆ ಸಂದರ್ಭದಲ್ಲಿ ಮೇ ತಿಂಗಳಿನೊಳಗೆ ಹಸಿರುಮಕ್ಕಿ ಸೇತುವೆ ಲೋಕಾರ್ಪಣೆ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಭಾಷಣ ಮಾಡಿದ್ದರು. ಈತನಕ ಸೇತುವೆ ಕಾಮಗಾರಿ ಮುಗಿದಿಲ್ಲ. ಹಣಕಾಸಿನ ಸಮಸ್ಯೆಯಿಂದ ಸೇತುವೆ ಕಾಮಗಾರಿ ನಿಂತಿದೆ ಎನ್ನಲಾಗುತ್ತಿದ್ದು, ಮಧುಬಂಗಾರಪ್ಪ, ಗೋಪಾಲಕೃಷ್ಣ ಮುಖ್ಯಮಂತ್ರಿಗಳ ಬಳಿ ಹಣ ಬಿಡುಗಡೆ ಮಾಡಿಸಲಿ. ತಾಲೂಕಿನಲ್ಲಿ ಬಳಸಗೋಡು, ತ್ಯಾಗರ್ತಿ, ಕಾಗೋಡು ವಿದ್ಯುತ್ ಗ್ರಿಡ್‌ಗಳನ್ನು ತಕ್ಷಣ ಲೋಕಾರ್ಪಣೆಗೊಳಿಸಿ ಎಂದು ಸಲಹೆ ನೀಡಿದರು.ಪ್ರಮುಖರಾದ ದೇವೇಂದ್ರಪ್ಪ, ಗಣೇಶ ಪ್ರಸಾದ್, ಮಲ್ಲಿಕಾರ್ಜುನ ಹಕ್ರೆ, ರಮೇಶ್ ಎಚ್.ಎಸ್., ಅರುಣ ಕುಗ್ವೆ, ಸುಜಯ್ ಶೆಣೈ, ಬೈರಪ್ಪ, ಬಂಗಾರಪ್ಪ, ಗಿರೀಶ್ ಗುಳ್ಳಳ್ಳಿ, ಪರಶುರಾಮ, ಶ್ರೀಧರ ಜೋಗಿ, ಸತೀಶ್ ಇನ್ನಿತರರು ಹಾಜರಿದ್ದರು.೨೧ಕೆ.ಎಸ್.ಎ.ಜಿ.೧ಸುದ್ದಿಗೋಷ್ಠಿಯಲ್ಲಿ ಹಾಲಪ್ಪ ಮಾತನಾಡಿದರು.