ಸಾರಾಂಶ
ಜಾಗೃತ ಸ್ಥಾನವಾಗಿರುವ ಎಂ. ತಿಮ್ಮಾಪುರ ಬೈಲಮಾರುತಿ ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖೆಯ ಸಹಾಯದಿಂದ ಅಭಿವೃದ್ಧಿ ಪಡಿಸುವುದಾಗಿ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಭರವಸೆ ನೀಡಿದರು.
ಕನ್ನಡಪ್ರಭ ವಾರ್ತೆ ರಾಮದುರ್ಗ
ಜಾಗೃತ ಸ್ಥಾನವಾಗಿರುವ ಎಂ. ತಿಮ್ಮಾಪುರ ಬೈಲಮಾರುತಿ ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖೆಯ ಸಹಾಯದಿಂದ ಅಭಿವೃದ್ಧಿ ಪಡಿಸುವುದಾಗಿ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಭರವಸೆ ನೀಡಿದರು.ತಾಲೂಕಿನ ಎಂ.ತಿಮ್ಮಾಪುರ ಗ್ರಾಮದ ಬೈಲಮಾರುತಿ ದೇವಸ್ಥಾನದ ಮೂರ್ತಿಗೆ ಬೆಳ್ಳಿ ಕವಚ ಧಾರಣೆ ಮಾಡಿ ಮಾತನಾಡಿದ ಅವರು, ರಾಮದುರ್ಗ ತಾಲೂಕಿನಲ್ಲಿಯ ಜಾಗೃತ ಸ್ಥಾನಗಳಾದ ಶಬರಿಕೊಳ್ಳ, ಮೇಗುಂಡೇಶ್ವರ ಕೊಳ್ಳ, ಕಲ್ಲೂರು ಸಿದ್ದೇಶ್ವರ ಕೊಳ್ಳ, ಈಶ್ವರಪ್ಪನ ಕೊಳ್ಳ, ಹೂವಿನ ಕೊಳ್ಳಗಳನ್ನು ಅಭಿವೃದ್ಧಿಪಡಿಸಲು ಕೇಂದ್ರದ ಅನುದಾನ ಬಳಸಿಕೊಳ್ಳುವುದಾಗಿ ತಿಳಿಸಿದರು.
ಬಹಳಷ್ಟು ದಿನಗಳ ನಂತರ ಮಾರುತಿ ದೇವರಿಗೆ ಬೆಳ್ಳಿ ಕವಚ ನಿರ್ಮಿಸಿ ಬಹುಪಾಲು ಮಹಿಳೆಯರು ಸಂಭ್ರಮಿಸುತ್ತಿದ್ದಾರೆ. ಮಹಿಳೆಯರ ಒತ್ತಾಯದ ಮೇರೆಗೆ ವಿಶೇಷ ಅನುದಾನ ತಂದು ಮಾರುತಿ ದೇವಸ್ಥಾನ ಸುಧಾರಣೆ ಮಾಡುವುದಾಗಿ ತಿಳಿಸಿದರು.ಉತ್ತರ ಕರ್ನಾಟಕದ ಜನ ದೇವರಲ್ಲಿ ನಂಬಿಕೆ, ವಿಶ್ವಾಸ, ಭಕ್ತಿ ಇಟ್ಟುಕೊಂಡಿರುತ್ತಾರೆ. ಆದರೆ, ಬಹುತೇಕ ದೇವಾಲಯಗಳು ಬಿದ್ದು ಹೋಗುವ ಹಂತಕ್ಕೆ ಬಂದಿವೆ. ಕೆಲವು ನಿರ್ಲಕ್ಷ್ಯಕ್ಕೊಳಗಾಗಿವೆ. ಅವುಗಳನ್ನು ಗಣನೆಗೆ ತೆಗೆದುಕೊಂಡು ತಾಲೂಕಿನ ಜನತೆಯ ಋಣತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಮುಳ್ಳೂರು ಅನ್ನದಾನೇಶ್ವರ ಮಠದ ಚಂದ್ರಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಿಜೆಪಿ ಮಂಡಲ ಅಧ್ಯಕ್ಷ ಡಾ.ಕೆ.ವಿ. ಪಾಟೀಲ, ಕಾರ್ಯದರ್ಶಿ ಈರನಗೌಡ ಹೊಸಗೌಡ್ರ, ಜಾನಪ್ಪ ಹಕಾಟಿ, ನಿವೃತ್ತ ಶಿಕ್ಷಕ ಎಚ್.ಎನ್. ನರಗುಂದ, ಶಿವಮೊಗ್ಗದ ಚಂದ್ರಶೇಖರ ಸೇರಿದಂತೆ ಗ್ರಾಮದ ಬಹುಸಂಖ್ಯೆಯ ಭಕ್ತರು ಇದ್ದರು.