ನಿವೇಶನ ಸಿಗದೇ ಅಗ್ನಿಶಾಮಕ ಠಾಣಾ ಕಚೇರಿ ಮಂಜೂರಾದ ಅನುದಾನ ವಾಪಸ್‌: ಪ್ರಕಾಶ

| Published : Dec 22 2024, 01:30 AM IST

ನಿವೇಶನ ಸಿಗದೇ ಅಗ್ನಿಶಾಮಕ ಠಾಣಾ ಕಚೇರಿ ಮಂಜೂರಾದ ಅನುದಾನ ವಾಪಸ್‌: ಪ್ರಕಾಶ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕು ಕೇಂದ್ರಕ್ಕೆ ಅಗ್ನಿಶಾಮಕ ಠಾಣಾ ಕಚೇರಿ ಮಂಜೂರಾದರೂ ನಿವೇಶನ ಸಿಗದ ಕಾರಣ ಕಟ್ಟಡ ನಿರ್ಮಾಣಕ್ಕೆ ಬಂದ ಅನುದಾನವೂ ವಾಪಸ್ ಹೋಗುವ ಹಂತದಲ್ಲಿದೆ ಎಂದು ಬಾಗಲಕೋಟೆಯ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪ್ರಕಾಶ ರಾಠೋಡ ಹೇಳಿದರು.

ಕನ್ನಡಪ್ರಭವಾರ್ತೆ ಗುಳೇದಗುಡ್ಡ

ತಾಲೂಕು ಕೇಂದ್ರಕ್ಕೆ ಅಗ್ನಿಶಾಮಕ ಠಾಣಾ ಕಚೇರಿ ಮಂಜೂರಾದರೂ ನಿವೇಶನ ಸಿಗದ ಕಾರಣ ಕಟ್ಟಡ ನಿರ್ಮಾಣಕ್ಕೆ ಬಂದ ಅನುದಾನವೂ ವಾಪಸ್ ಹೋಗುವ ಹಂತದಲ್ಲಿದೆ ಎಂದು ಬಾಗಲಕೋಟೆಯ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪ್ರಕಾಶ ರಾಠೋಡ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 2-3 ವರ್ಷಗಳಿಂದ ಗುಳೇದಗುಡ್ಡದಲ್ಲಿ ಅಗ್ನಿಶಾಮಕ ಠಾಣಾ ಕಚೇರಿ ನಿರ್ಮಾಣಕ್ಕೆ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಆ ಪ್ರಕಾರ ನಿವೇಶನ ಹುಡುಕಾಟದಲ್ಲಿದ್ದರೂ ಸಂಬಂಧಪಟ್ಟ ಪುರಸಭೆ ಅಧಿಕಾರಿಗಳು ಮತ್ತು ತಹಸೀಲ್ದಾರ್‌ರು ನೀವೇಶನ ತೋರಿಸುತ್ತಿಲ್ಲ. ಈ ಹಿಂದೆ ಪರ್ವತಿ ಸರ್ವೇ ನಂ.171 ರಲ್ಲಿ ಬರುವ ಒಟ್ಟು 06 ಎಕರೆ ಜಮೀನಿನಲ್ಲಿ ಅಗ್ನಿಶಾಮಕ ಕಚೇರಿ ನಿರ್ಮಾಣಕ್ಕೆ 2 ಎಕರೆ ಭೂಮಿ ಕೊಡುವುದಾಗಿ ಭರವಸೆ ನೀಡಿದ್ದರು. ಆ ಪ್ರಕಾರ ಸರ್ಕಾರಕ್ಕೆ ಪ್ರಪೋಜಲ್ ಕೂಡ ಕಳಿಸಲಾಗಿತ್ತು. ಆ ಪ್ರಕಾರ ಅಗ್ನಿಶಾಮಕ ಕಚೇರಿ ನಿರ್ಮಾಣಕ್ಕೆ 2 ಎಕರೆ ಭೂಮಿ ನೀಡುವಂತೆ ಸರ್ಕಾರದಿಂದ ಆದೇಶವೂ ಬಂದಿದೆ. ಆದರೆ, ಜಿಲ್ಲಾಧಿಕಾರಿಗಳು ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಪರ್ವತಿ ಸರ್ವೆಯ 06 ಎಕರೆ ಭೂಮಿಯಲ್ಲಿ 04 ಎಕರೆ ನ್ಯಾಯಾಲಯ ಕಟ್ಟಡ ಮತ್ತು ವಸತಿ ಗೃಹ ನಿರ್ಮಾಣಕ್ಕೆ ನೀಡಿ ಉಳಿದ 02 ಎಕರೆ ಭೂಮಿಯನ್ನು ಅಗ್ನಿಶಾಮಕ ಕಚೇರಿಗೆ ನೀಡದೇ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕಾಲೇಜು ನಿರ್ಮಾಣಕ್ಕೆ ನೀಡಿದ್ದಾರೆ. ಹೀಗಾಗಿ ಅಗ್ನಿ ಶಾಮಕ ಕಚೇರಿಗೆ ನಿವೇಶನ ಇಲ್ಲದಂತಾಗಿದೆ ಎಂದರು.ನಾವು ಜಿಲ್ಲಾಧಿಕಾರಿಗಳಿಗೆ ಪ್ರಪೋಜಲ್ ನೀಡಿದರೆ ಅವರು ತಮಗೆ ಅನುಮೋದನೆ ಮಾಡಲು ಬರುವುದಿಲ್ಲವೆಂದು ಹೇಳಿ ಅದನ್ನು ಬೆಂಗಳೂರಿಗೆ ಕಳುಹಿಸಿ, ನ್ಯಾಯಾಲಯದ ಪ್ರಪೋಜಲ್‌ನ್ನು ಸ್ವತ: ತಾವೇ ಅನುಮೋದನೆ ಮಾಡಿಕೊಟ್ಟಿದ್ದಾರೆ. ಹೀಗಾಗಿ ನಮಗೆ ಅನ್ಯಾಯವಾಗಿದೆ. ಸದ್ಯ ಅಗ್ನಿಶಾಮಕ ಕಚೇರಿ ನಿರ್ಮಾಣಕ್ಕೆ ₹3 ಕೋಟಿ ಬಜೆಟ್ 2023 ರಲ್ಲಿ ಮಂಜೂರಾಗಿದೆ. 2025-26ನೇ ಸಾಲಿನಲ್ಲಿ ಭೂಮಿ ಖರೀದಿಸಲೂ ನಮ್ಮ ಇಲಾಖೆಯಿಂದಲೂ ಆದೇಶವಾಗಿದೆ. ಆದರೆ ನಮಗೆ ಗುಳೇದಗುಡ್ಡದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಭೂಮಿ ನೀಡುತ್ತಿಲ್ಲ. ಮಂಜೂರಾದ ಅನುದಾನ ನಾವು ಬಳಕೆ ಮಾಡದ ಕಾರಣ ಅದು ಫೆ. 2025 ಕ್ಕೆ ವಾಪಸ್ ಹೋಗಲಿದೆ. ಕಾರಣ ತಾಲೂಕು ಕೇಂದ್ರವಾಗಿರುವ ಗುಳೇದಗುಡ್ಡ ವ್ಯಾಪ್ತಿಯಲ್ಲಿ 2 ಎಕರೆ ಭೂಮಿ ನೀಡಿದರೆ ಕಟ್ಟಡ ಆರಂಭವಾಗುತ್ತದೆ ಅದಕ್ಕೆ ಸಂಬಂಧಪಟ್ಟ ಇಲಾಖೆಗಳು ಜಿಲ್ಲಾಧಿಕಾರಿಗಳು,ಉಪವಿಭಾಗಾಧಿಕಾರಿಗಳು, ತಹಸೀಲ್ದಾರರು, ಪುರಸಭೆ ಅಧಿಕಾರಿಗಳು ಸಹಕರಿಸಬೇಕು ಎಂದು ಕೋರಿದರು.