ಪಾತಾಳಕ್ಕೆ ಕುಸಿದ ದ್ರಾಕ್ಷಿ ಬೆಲೆ: ಕಂಗಾಲಾದ ಬೆಳೆಗಾರ

| Published : May 18 2024, 12:36 AM IST

ಸಾರಾಂಶ

ದ್ರಾಕ್ಷಿ ಕಟಾವು ಮಾಡಲು ರೈತರು ಮುಂದಾಗಿದ್ದರೂ ಖರೀದಿಸಲು ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಕಾರಣ ಮಹಾರಾಷ್ಟ್ರ ದ್ರಾಕ್ಷಿ ಭೀತಿ. ಮಹಾರಾಷ್ಟ್ರ ದ್ರಾಕ್ಷಿಯಿಂದ ಚಿಕ್ಕಬಳ್ಳಾಪುರದ ದ್ರಾಕ್ಷಿಗೆ ಯಾವಾಗಲೂ ಮಾರುಕಟ್ಟೆಯಲ್ಲಿ ಪೈಪೋಟಿ ಇದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯ ರೈತರು ಹಾಲು, ರೇಷ್ಮೆ, ತರಕಾರಿ, ಹಣ್ಣು ಹಂಪಲ ಸೇರಿದಂತೆ ತೋಟಗಾರಿಕಾ ಬೆಳೆಗಳನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಬರದ ನಡುವೆಯೂ ಈ ಬಾರಿ ದ್ರಾಕ್ಷಿ ಉತ್ತಮ ಫಸಲು ಬಂದಿದೆ. ಇನ್ನೇನು ಕಟಾವು ಮಾಡಿ ಮಾರ್ಕೆಟ್​​ಗೆ ಸಾಗಿಸಬೇಕು ಎನ್ನುವಷ್ಟರಲ್ಲಿ ದ್ರಾಕ್ಷಿ ಬೆಲೆ ಕುಸಿದಿದೆ.

ಇದರಿಂದ ಕಂಗಾಲಾಗಿರುವ ರೈತರು ಮಾಡಿದ ಬೆಳೆ ಸಾಲ ತೀರಿಸೋದು ಹೇಗೆ ಅನ್ನೊ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ಶಾಶ್ವತ ನೀರಾವರಿ ಜೀವ ನದಿಗಳಿಲ್ಲದೆ ರೈತರು ಕೊಳವೆಬಾವಿಗಳನ್ನೆ‌ ನಂಬಿಕೊಂಡು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಹತ್ತು ಸಾವಿರ ಎಕರೆ ದ್ರಾಕ್ಷಿ

ರೈತರು ಭಗೀರಥ ಪ್ರಯತ್ನ ಮಾಡಿ ಪಾತಾಳದಿಂದ ಹನಿ ಹನಿ ನೀರು ಬಸಿದು ಚಿಕ್ಕಬಳ್ಳಾಫುರ ಜಿಲ್ಲೆಯ ರೈತರು ವಿನೂತನ ಮಾದರಿಯಲ್ಲಿ ಹನಿ ನೀರಾವರಿಯನ್ನು ಅಳವಡಿಸಿದ್ದಾರೆ. ಜಿಲ್ಲೆಯಾದ್ಯಂತ ಹತ್ತು ಸಾವಿರ ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯುತ್ತಾರೆ. ಆದರೆ ಈ ಬಾರಿ ಉತ್ತಮ ದ್ರಾಕ್ಷಿ ಫಸಲು ಬಂದಿದೆ. ಇನ್ನೇನು ದ್ರಾಕ್ಷಿ ಕಟಾವು ಮಾಡಿ ಮಾರುಕಟ್ಟೆಗೆ ಹಾಕಬೇಕು. ಆದರೆ ಪಸ್ತುತ ದ್ರಾಕ್ಷಿ ಹಣ್ಣಿನ ಬೆಲೆ ತೀವ್ರವಾಗಿ ಕುಸಿದಿದೆ.ಕೆ.ಜಿ ದಿಲ್ ಖುಷ್ ದ್ರಾಕ್ಷಿಯ ಬೆಲೆ ಕೇವಲ 25 ರು.ಗಳಿಗೆ ಮಾರಾಟವಾಗುತ್ತಿದೆ. ಹೋದರೆ ಹೋಗಲಿ ಕಟಾವು ಮಾಡಿ ಅಂದರೆ ವರ್ತಕರು ಧೈರ್ಯ ಮಾಡುತ್ತಿಲ್ಲ, ಕಾರಣ ಮಹಾರಾಷ್ಟ್ರ ದ್ರಾಕ್ಷಿ ಭೀತಿ. ಮಹಾರಾಷ್ಟ್ರ ದ್ರಾಕ್ಷಿಯಿಂದ ಚಿಕ್ಕಬಳ್ಳಾಪುರದ ದ್ರಾಕ್ಷಿಗೆ ಯಾವಾಗಲೂ ಮಾರುಕಟ್ಟೆಯಲ್ಲಿ ಪೈಪೋಟಿ ಇದೆ. ದ್ರಾಕ್ಷಿ ಖರೀದಿಸುವವರೇ ಇಲ್ಲ

ಈ ಬಾರಿಯ ಬರದ ನಡುವೆಯೂ ಚಿಕ್ಕಬಳ್ಳಾಪುರ ತಾಲೂಕಿನ ದೇವಸ್ಥಾನದ ಹೊಸಹಳ್ಳಿ ಗ್ರಾಮದ ಪ್ರಗತಿ ಪರ ರೈತ ಹಾಗೂ ದ್ರಾಕ್ಷಿ ಬೆಳೆಗಾರ ರಾಮಣ್ಣ ಎಕರೆಗೆ ಮೂರೂವರೆ ಲಕ್ಷ ದಂತೆ ಎರಡು ಎಕರೆಗೆ ಸುಮಾರು 7 ಲಕ್ಷ ರು. ಗಳ ಸಾಲ-ಸೂಲ ಮಾಡಿ, ಎರಡು ಎಕರೆ ದಿಲ್ ಖುಷ್ ದ್ರಾಕ್ಷಿ ಬೆಳೆದಿದ್ದಾರೆ. ಇನ್ನೇನು ಫಸಲು ಕಟಾವು ಮಾಡಬೇಕು ಆದರೆ ಯಾವುದೇ ವರ್ತಕರು ಮುಂದೆ ಬರ್ತಿಲ್ಲ. ಹೀಗಾಗಿ ದ್ರಾಕ್ಷಿ ತೋಟದಲ್ಲಿ ಕೊಳೆಯುತ್ತಿದೆ.ಮಹಾರಾಷ್ಟ್ರದಲ್ಲಿ ಅತಿ ಹೆಚ್ಚಾಗಿ ದ್ರಾಕ್ಷಿ ಬೆಳೆದಿದ್ದು, ಅಲ್ಲಿನ ಕೋಲ್ಡ್ ಸ್ಟೋರೇಜ್​​ನಲ್ಲಿದ್ದ ದ್ರಾಕ್ಷಿ ಮಾರುಕಟ್ಟೆಗೆ ಬಂದಿದೆ. ಇದರಿಂದ ಚಿಕ್ಕಬಳ್ಳಾಪುರದ ದ್ರಾಕ್ಷಿಗೆ ಬೆಲೆಯಿಲ್ಲದಂತಾಗಿದೆ. ಮತ್ತೊಂದೆಡೆ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿರುವ ಕಾರಣ ಹಣ ಸಾಗಾಟ ಕಷ್ಟ ಅಂತ ವರ್ತಕರು ದ್ರಾಕ್ಷಿ ವ್ಯಾಪಾರದಿಂದ ವಿಮುಖರಾಗಿದ್ದಾರೆ. ಇದರಿಂದಲೂ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.ದರ ಏರಿಕೆ ನಿರೀಕ್ಷೆ

ದೊಡ್ಡ ದೊಡ್ಡ ದ್ರಾಕ್ಷಿ ವ್ಯಾಪಾರಿಗಳ ನಿರ್ಲಕ್ಷ್ಯವೋ, ಚುನಾವಣೆಯ ನೀತಿ ಸಂಹಿತೆ ಅಡ್ಡಿಯೋ, ಇಲ್ಲಾ ಮಹಾರಾಷ್ಟ್ರದ ದ್ರಾಕ್ಷಿ ಪರಿಣಾಮವೋ ಚಿಕ್ಕಬಳ್ಳಾಪುರದ ಚಿನ್ನದಂಥ ದ್ರಾಕ್ಷಿಗೆ ಬೆಲೆ ಇಲ್ಲದಂತಾಗಿದೆ. ರೈತರಿಗೆ ದಿಕ್ಕು ತೋಚದಂತಾಗಿದ್ದು ಬೆಲೆ ಹೆಚ್ಚಾಗುವ ನಿರೀಕ್ಷೆಯಲ್ಲಿದ್ದಾರೆ.