ಹುಲ್ಲುಗಾವಲಿಗೆ ಬೆಂಕಿ, 25 ಸಾಲು ಮರಗಳು ಆಹುತಿ

| Published : Feb 20 2025, 12:49 AM IST

ಸಾರಾಂಶ

Grassland fire, 25 rows of trees burnt

-ದೊಡ್ಡಬಾತಿ ತಪೋವನ ಸಂಸ್ಥೆ ಲಕ್ಷಾಂತರ ಅನುದಾನ ವ್ಯಯಿಸಿದ ಶ್ರಮ ನಿರರ್ಥಕ

----

ಕನ್ನಡಪ್ರಭವಾರ್ತೆ ಹರಿಹರ

ದಾವಣಗೆರೆಗೆ ತೆರಳುವ ಮಾರ್ಗದ ಜೋಡಿ ರಸ್ತೆ ಮಧ್ಯದ ಹುಲ್ಲುಗಾವಲಿಗೆ ಬೆಂಕಿ ಬಿದ್ದ ಪರಿಣಾಮ 25ಕ್ಕೂ ಹೆಚ್ಚು ಸಾಲು ಮರಗಳು ಆಹುತಿಯಾಗಿರುವ ಘಟನೆ ನಡೆದಿದೆ.

ನಗರದ 1ನೇ ರೈಲ್ವೆ ಗೇಟಿನಿಂದ 2ನೇ ಗೇಟ್‍ವರೆಗೆ ಅಂದಾಜು 2 ಕಿ.ಮೀ. ಜೋಡಿ ರಸ್ತೆ ಮಧ್ಯದಲ್ಲಿ 200 ಗಿಡಗಳನ್ನು ಕಳೆದ 6-7 ವರ್ಷದ ಹಿಂದೆ ದೊಡ್ಡಬಾತಿ ತಪೋವನ ಸಂಸ್ಥೆಯಿಂದ ಲಕ್ಷಾಂತರ ಅನುದಾನ ವೆಚ್ಚ ಮಾಡಿ ಟ್ರೀಗಾರ್ಡ್‍ಗಳನ್ನು ಅಳವಡಿಸಿ ಸಸಿ ನೆಟ್ಟಿದ್ದರು.

ಕೆಲ ಸಸಿಗಳು ಬಾಡಿದ ನಂತರ ಇತರೆ ಕೆಲ ಸಂಸ್ಥೆಯವರು ಮತ್ತೆ ಸಸಿ ನೆಟ್ಟಿದ್ದರು. ಆರೇಳು ವರ್ಷಗಳಿಂದ ಏಳೆಂಟು ಅಡಿಗಳ ಎತ್ತರಕ್ಕೆ ಸಾಲು ಮರಗಳು ಬೆಳೆದಿದ್ದವು. ಡಿಜಿಆರ್ ರೆಸಾರ್ಟ್ ಕಡೆಯಿಂದ ಅಂದಾಜು 300 ಮೀ.ವರೆಗಿನ ಹುಲ್ಲುಗಾವಲಿಗೆ ಬೆಂಕಿ ಬಿದ್ದಿದ್ದು ಆ ಭಾಗದಲ್ಲಿನ ಮರಗಳು ಆಹುತಿಯಾಗಿವೆ.

2 ವರ್ಷಗಳಿಂದ ಬೇಸಿಗೆಗೆ ಗಿಡಗಳು ಬಾಡಿದಾಗ ಗಣಪಾಸ್ ಇನೋವೇಟಿವ್‌ ಗ್ರೂಪ್ ಸಂಸ್ಥೆಯಿಂದ ಟ್ಯಾಂಕರ್ ಮೂಲಕ ನಿರಂತರ ನೀರು ಉಣಿಸಲಾಗಿತ್ತು.

ಹರಿಹರ ದಾವಣಗೆರೆ ಮಧ್ಯ ಸಂಚರಿಸುವ ಸಾವಿರಾರು ವಾಹನ ಸವಾರರಿಗೆ ತಂಪನೆ ವಾತಾವರಣ ನೀಡಲಿದ್ದ ಮರಗಳು ಬೆಂಕಿಗೆ ಆಹುತಿಯಾಗಿರುವುದು ಪರಿಸರ ಪ್ರೇಮಿಗಳಿಗೆ, ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ.

ವಾಹನ ಸವಾರರು ಬೀಡಿ, ಸಿಗರೇಟು ಸೇದಿ ಬಿಸಾಕಿದ್ದರಿಂದ ಅಥವಾ ಉದ್ದೇಶ ಪೂರ್ವಕ ಬೆಂಕಿ ಹಚ್ಚಿರಬಹುದೆಂದು ಅಂದಾಜಿಸಲಾಗಿದೆ.

ಈ ಜೋಡಿ ರಸ್ತೆಯ ಮಧ್ಯ ಭಾಗದಲ್ಲಿ ಇನ್ನೂ 150ಕ್ಕೂ ಹೆಚ್ಚು ಮರಗಳು ಅಂದಾಜು 1.5 ಕಿ.ಮೀ. ಉದ್ದದ ವ್ಯಾಪ್ತಿಯಲ್ಲಿವೆ. ಆ ಭಾಗದಲ್ಲೂ ದಟ್ಟವಾದ ಹುಲ್ಲಿನ ಪೊದೆ ಇವೆ. ಈ ಹುಲ್ಲುಗಾವಲು ಪ್ರಖರ ಬಿಸಿಲಿಗೆ ಒಣಗಿದ್ದು, ಅಲ್ಲಿಯೂ ಬೆಂಕಿ ಬೀಳುವ ಅಪಾಯವಿದೆ.

ಸಸಿಗಳನ್ನು ನೆಟ್ಟಿರುವ ಸೇವಾ ಸಂಸ್ಥೆಯವರಿಗೆ ಹೇಳಿ ಹುಲ್ಲುಗಾವಲು ಕೀಳಿಸುವ ಪ್ರಯತ್ನ ಮಾಡುತ್ತೇನೆಂದು ಸಾಮಾಜಿಕ ಅರಣ್ಯ ಇಲಾಖೆ ಆರ್‌ಎಫ್‌ಒ ಟಿ.ಆರ್.ಅಮೃತ ತಿಳಿಸಿದ್ದಾರೆ.

ಈ ಭಾಗದ ಸಾಲು ಮರಗಳ ರಕ್ಷಣೆಗೆ ಸಾರ್ವಜನಿಕರು ಹಾಗೂ ಸರ್ಕಾರಿ ಇಲಾಖಾಧಿಕಾರಿಗಳು ಆದ್ಯತೆ ನೀಡಬೇಕೆಂದು ಸಂಸ್ಥೆಯ ಜಿಲ್ಲಾ ಸಂಚಾಲಕ ಬಿ ಫಾರ್ ಬ್ಯಾಂಬೂ ಜಬಿವುಲ್ಲಾ ಅಭಿಪ್ರಾಯ ಪಟ್ಟಿದ್ದಾರೆ.

-----

19 ಎಚ್‍ಆರ್‍ಆರ್ 03

ಹರಿಹರದ ದಾವಣಗೆರೆ ಮಾರ್ಗದ ಜೋಡಿ ರಸ್ತೆ ಮಧ್ಯದ 25ಕ್ಕೂ ಹೆಚ್ಚು ಸಸಿಗಳು ಬೆಂಕಿಗೆ ಆಹುತಿಯಾಗಿರುವುದು.

19 ಎಚ್‍ಆರ್‍ಆರ್ 03 ಎ

ಹರಿಹರದ ದಾವಣಗೆರೆ ಮಾರ್ಗದ ಜೋಡಿ ರಸ್ತೆ ಮಧ್ಯದಲ್ಲಿ ಒಣಗಿರುವ ಅಪಾಯಕಾರಿ ಹುಲ್ಲುಗಾವಲನ್ನು ತೆರವುಗೊಳಿಸಬೇಕಿದೆ.