ಸಾರಾಂಶ
ಒಳ ಮೀಸಲಾತಿ ಜಾರಿಗೆ ತಂದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ ನೇತೃತ್ವದ ಸರ್ಕಾರಕ್ಕೆ ಒಳ ಮೀಸಲಾತಿ ಹಿರಿಯ ಹೋರಾಟಗಾರ ಕೃಷ್ಣಾ ಮಾದರ ಕೃತಜ್ಞತೆ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಮುಧೋಳ
ಪರಿಶಿಷ್ಟ ಸಮುದಾಯಕ್ಕೆ ಒಳ ಮೀಸಲಾತಿ ಜಾರಿಗೆ ತಂದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ ನೇತೃತ್ವದ ಸರ್ಕಾರಕ್ಕೆ ಒಳ ಮೀಸಲಾತಿ ಹಿರಿಯ ಹೋರಾಟಗಾರ ಕೃಷ್ಣಾ ಮಾದರ ಕೃತಜ್ಞತೆ ಸಲ್ಲಿಸಿದರು. ಈ ಯಶಸ್ಸಿನ ಹಿಂದೆ ಸಚಿವ ಆರ್.ಬಿ.ತಿಮ್ಮಾಪೂರ ಪರಿಶ್ರಮ ಸಾಕಷ್ಟು ಇದೆ ಎಂದು ಶ್ಲಾಘಿಸಿದರು.ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ನಡೆದ ವಿಜಯೋತ್ಸವಲ್ಲಿ ಪಾಲ್ಗೊಂಡು ಮಾತನಾಡಿದ ಕೃಷ್ಣ ಮಾದರ, 2004ರಲ್ಲಿ ಎಸ್.ಎಂ.ಕೃಷ್ಣ ಸರ್ಕಾರದ ಅವಧಿಯಲ್ಲಿ ಒಳ ಮೀಸಲಾತಿ ಆಯೋಗ ರಚಿಸಿದಾಗ ಸಚಿವ ತಿಮ್ಮಾಪೂರ ಅವರು ನಿರಂತರ ಪ್ರಯತ್ನಿಸಿ ಈಗ ಅದನ್ನು ಯಶಸ್ವಿಯಾಗಿ ಜಾರಿಗೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇದರಿಂದಾಗಿ ಅಸ್ಪೃಶ್ಯರಿಗೆ ನ್ಯಾಯ ಸಿಕ್ಕಿದೆ. ಕಳೆದ ಮೂರು ದಶಕಗಳಿಂದ ನಡೆಸಿದ ಹೋರಾಟಕ್ಕೆ ಫಲ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ಅಧ್ಯಕ್ಷ ಪ್ರಕಾಶ ತಳಗೇರಿ ಮಾತನಾಡಿ, ಒಳ ಮೀಸಲಾತಿ ಸುಲಭವಾಗಿ ಬಂದಿಲ್ಲ. ಇದರ ಹಿಂದೆ ಸಾಕಷ್ಟು ಸಾವು-ನೋವುಗಳಿವೆ. ಅವೆಲ್ಲವನ್ನೂ ಲೆಕ್ಕಿಸದೆ ಹೋರಾಟಕ್ಕೆ ಜಯ ಸಿಕ್ಕಿದೆ. ಸಿದ್ದರಾಮಯ್ಯನವರ ಸರ್ಕಾರ ಮೂಲ ಅಸ್ಪೃಶ್ಯರು ಮತ್ತು ಸ್ಪರ್ಶ ಸಮುದಾಯಕ್ಕೆ ಒಳಮೀಸಲಾತಿ ಗ್ಯಾರಂಟಿ ನೀಡಿದೆ ಎಂದರು.
ಇದೇ ವೇಳೆ ರಮೇಶ ದುರದುಂಡಿ, ಗಣೇಶ ಮೇತ್ರಿ, ಮಹಾದೇವ ರೋಗಿ, ಸದಾಶಿವ ಮೇತ್ರಿ, ನಗರ ಸಭೆ ಸದಸ್ಯರಾದ ಸುರೇಶ ಕಾಂಬಳೆ, ಭೀಮಶಿ ಮೇತ್ರಿ, ಮಾಜಿ ಉಪಾಧ್ಯಕ್ಷ ಬಸು ಮೇತ್ರಿ, ಹುಸೇನ್ ಅವರಾದಿ, ಸುರೇಶ ತಳಗೇರಿ, ಹನಮಂತ ಪೂಜಾರಿ, ಎಸ್.ಎಲ್.ಪೂಜಾರಿ, ರಮೇಶ ಮಾದರ, ಶಿವಾನಂದ ಮ್ಯಾಗೇರಿ, ಹನುಮಂತ ಮಳ್ಳಿಗೇರಿ, ಲಕ್ಷ್ಮಣ ಹಲಗಲಿ, ಸದಾಶಿವ ತಳಗೇರಿ ಹಾಗೂ ಅನೇಕ ಹೋರಾಟಗಾರರು ಭಾಗವಹಿಸಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿ, ವಿಜಯೋತ್ಸವ ಆಚರಿಸಿದರು.