ಅಂತೂ ಇಂತೂ ಹಂಪಿ ವಿಜಯ ವಿಠಲ ರಸ್ತೆಗೆ ಗ್ರ್ಯಾವೆಲ್‌!

| Published : Aug 12 2025, 12:30 AM IST

ಅಂತೂ ಇಂತೂ ಹಂಪಿ ವಿಜಯ ವಿಠಲ ರಸ್ತೆಗೆ ಗ್ರ್ಯಾವೆಲ್‌!
Share this Article
  • FB
  • TW
  • Linkdin
  • Email

ಸಾರಾಂಶ

ಹಂಪಿಯ ವಿಜಯ ವಿಠಲದಿಂದ ಗೆಜ್ಜಲ ಮಂಟಪದವರೆಗಿನ ರಸ್ತೆಗೆ ಗ್ರ್ಯಾವೆಲ್‌ ಹಾಕುವ ಕೆಲಸವನ್ನು ಪುರಾತತ್ವ ಇಲಾಖೆ ಮತ್ತು ಹಂಪಿ ಪ್ರಾಧಿಕಾರ ಮತ್ತು ಜಿಲ್ಲಾಡಳಿತ ಸೋಮವಾರದಿಂದ ಆರಂಭಿಸಿದೆ.

ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಸೂಚನೆ । ಕಚ್ಚಾ ರಸ್ತೆಗಳಿಗೆ ಗ್ರ್ಯಾವೆಲ್‌ ಹಾಕುವುದಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಹಂಪಿಯ ವಿಜಯ ವಿಠಲದಿಂದ ಗೆಜ್ಜಲ ಮಂಟಪದವರೆಗಿನ ರಸ್ತೆಗೆ ಗ್ರ್ಯಾವೆಲ್‌ ಹಾಕುವ ಕೆಲಸವನ್ನು ಪುರಾತತ್ವ ಇಲಾಖೆ ಮತ್ತು ಹಂಪಿ ಪ್ರಾಧಿಕಾರ ಮತ್ತು ಜಿಲ್ಲಾಡಳಿತ ಸೋಮವಾರದಿಂದ ಆರಂಭಿಸಿದೆ.

ಒಂದೇ ಮಳೆಗೆ ಹಂಪಿಯ ಮಾನ ಹರಾಜು ಎಂಬ ಶೀರ್ಷಿಕೆ ಅಡಿಯಲ್ಲಿ ಕನ್ನಡಪ್ರಭ ಗೆಜ್ಜಲ ಮಂಟಪದಿಂದ ವಿಜಯ ವಿಠಲ ರಸ್ತೆ ಸ್ಥಿತಿ ಕುರಿತು ವಿಶೇಷ ವರದಿ ಪ್ರಕಟಿಸಿತ್ತು. ಈ ವರದಿಗೆ ಸ್ಪಂದಿಸಿ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ ಕೇಂದ್ರ ಪುರಾತತ್ವ ಇಲಾಖೆ ಮತ್ತು ಹಂಪಿ ಪ್ರಾಧಿಕಾರದ ಅಧಿಕಾರಿಗಳಿಗೆ ಗ್ರ್ಯಾವೆಲ್‌ ಹಾಕಲು ಸೂಚಿಸಿದ್ದರು. ಆದರೆ, ಲೈಸೆನ್ಸ್‌ ಹೊಂದಿರುವ ಗುತ್ತಿಗೆದಾರರು ದೊರೆಯದ್ದರಿಂದ ರಸ್ತೆಗೆ ಗ್ರ್ಯಾವೆಲ್‌ ಹಾಕುವುದು ವಿಳಂಬವಾಗಿತ್ತು. ಕನ್ನಡಪ್ರಭ ಮತ್ತೆ ಹಂಪಿಯ ನೆಲಸ್ತರದ ಶಿವ ದೇವಾಲಯ ರಸ್ತೆ ಮತ್ತು ರಾಜ್ಯಪಾಲರು ಬಂದಾಗಲೂ ಬಡವಿಲಿಂಗ, ಉಗ್ರ ನರಸಿಂಹ ಸ್ಮಾರಕಗಳ ಸಮೀಪದ ರಸ್ತೆಯಲ್ಲಿ ಗ್ರ್ಯಾವೆಲ್‌ ಹಾಕದ್ದರ ಬಗ್ಗೆ ಗಮನ ಸೆಳೆದಿತ್ತು. ಈ ವರದಿಯಿಂದ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಮತ್ತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಹಿನ್ನೆಲೆ ಈಗ ಹಂಪಿಯ ಕಚ್ಚಾ ರಸ್ತೆಗಳಿಗೆ ಗ್ರ್ಯಾವೆಲ್‌ ಹಾಕುವುದಕ್ಕೆ ಚಾಲನೆ ನೀಡಲಾಗಿದೆ.

ಹಂಪಿಯ ಗೆಜ್ಜಲ ಮಂಟಪದಿಂದ ವಿಜಯ ವಿಠಲ ರಸ್ತೆಯಲ್ಲಿ ಬ್ಯಾಟರಿ ಚಾಲಿತ ವಾಹನಗಳು ಓಡಾಡುತ್ತವೆ. ರೈಲು ಮಾದರಿ ವಾಹನದ ಟೈಯರ್‌ಗಳು ಕೂಡ ಹಾಳಾಗಿವೆ. ಇನ್ನೂ ಬ್ಯಾಟರಿ ಚಾಲಿತ ವಾಹನಗಳು ಕೂಡ ಕೈಕೊಡಲಾರಂಭಿಸಿದ್ದವು. ದೇಶ, ವಿದೇಶಿ ಪ್ರವಾಸಿಗರು ಕೆಸರಿನಲ್ಲೇ ತೆರಳುವ ಸ್ಥಿತಿ ನಿರ್ಮಾಣಗೊಂಡಿತ್ತು. ಈ ಕುರಿತು ಕನ್ನಡಪ್ರಭ ಗಮನ ಸೆಳೆದಿರುವ ಹಿನ್ನೆಲೆ ಈಗ ಗ್ರ್ಯಾವೆಲ್‌ ಹಾಕುವ ಕಾರ್ಯ ಭರದಿಂದ ಸಾಗಿದೆ.