ಸಾರಾಂಶ
ಕುಮಟಾ:
ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಉತ್ತಮ ವ್ಯವಸ್ಥೆ, ಸ್ವಚ್ಛತೆ. ಕಾಳಜಿಯ ಚಿಕಿತ್ಸೆಗೆ ಹೆಸರಾದ ಇಲ್ಲಿನ ತಾಲೂಕಾಸ್ಪತ್ರೆಗೆ ಇರುವ ಸಂಪರ್ಕ ರಸ್ತೆಯ ದುಸ್ಥಿತಿ ಮುಚ್ಚಿಡಲಾಗದ ಸಮಸ್ಯೆಯಾಗಿದೆ. ಆಸ್ಪತ್ರೆಗೆ ಬಂದು ಹೋಗುವವರಿಗೆ ಮಾತ್ರವಲ್ಲದೇ ಎಪಿಎಂಸಿ ಗೋದಾಮು ಗುಡ್ಡಕ್ಕೆ ಹೋಗುವುದಕ್ಕೂ ಸಂಕಟಕಾರಿಯಾಗಿದೆ.ರಾ.ಹೆ. ೬೬ರ ಚತುಷ್ಪಥದಿಂದ ಅಡ್ಡಲಾಗಿ ಬಗ್ಗೋಣ ಕ್ರಾಸ್‌ನಿಂದ ತಾಲೂಕು ಸರ್ಕಾರಿ ಆಸ್ಪತ್ರೆಗೆ, ಹಾಗೆಯೇ ಮುಂದೆ ಎಪಿಎಂಸಿ ಗೋದಾಮು ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ತೀರಾ ಹಾಳಾಗಿದ್ದು ಅಪಾಯಕಾರಿಯಾಗಿದೆ. ಬಗ್ಗೋಣ ಕ್ರಾಸ್‌ನಿಂದ ಕೆಲವೇ ಅಡಿಗಳ ದೂರದಲ್ಲಿ ತಾಲೂಕಾಸ್ಪತ್ರೆ ಇದೆ. ಈ ಡಾಂಬರ್ ರಸ್ತೆ ಕಿತ್ತಿದೆ. ಇದೇ ರಸ್ತೆ ತಾಲೂಕಾಸ್ಪತ್ರೆ ಎದುರಿನಿಂದ ಸಾಗಿ ಗುಡ್ಡದ ಮೇಲಿನ ಎಪಿಎಂಸಿ ಗೋದಾಮು ಪರಿಸರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇಡೀ ರಸ್ತೆ ಹೆಚ್ಚೆಂದರೆ ಮುನ್ನೂರು ಮೀಟರ್ ಉದ್ದವಿದೆ. ಆದರೆ ಎಲ್ಲಿಯೂ ರಸ್ತೆಯಲ್ಲಿ ಡಾಂಬರು ಉಳಿದಿಲ್ಲ. ಎಲ್ಲೆಡೆ ಕಿತ್ತು ಜಲ್ಲಿಕಲ್ಲುಗಳ ರಾಶಿಯಾಗಿದೆ. ನಡೆದುಕೊಂಡು ಓಡಾಡುವುದಕ್ಕೂ ಕಷ್ಟ ಎಂಬಂತಾಗಿದೆ.ತಾಲೂಕಾಸ್ಪತ್ರೆಗೆ ಮೊದಲಿನಿಂದಲೂ ಪ್ರತ್ಯೇಕ ಪಾರ್ಕಿಂಗ್ ಇಲ್ಲ. ಆ್ಯಂಬುಲೆನ್ಸ್, ರೋಗಿಗಳನ್ನು ತಂದ ವಾಹನ ಸಹಿತ ಎಲ್ಲ ವಾಹನಗಳು ತಾಲೂಕಾಸ್ಪತ್ರೆ ಎದುರಿನಿಂದ ಎಪಿಎಂಸಿ ಗೋದಾಮು ಪ್ರದೇಶಕ್ಕೆ ಸಾಗುವ ರಸ್ತೆಯ ಇಕ್ಕೆಲಗಳಲ್ಲಿ ಪಾಕಿಂಗ್ ಮಾಡಬೇಕಾಗುತ್ತದೆ. ರಸ್ತೆ ಎಷ್ಟು ಕೆಟ್ಟಿದೆಯೆಂದರೆ ಇಳಿಜಾರಾದ ರಸ್ತೆಯಲ್ಲಿ ಪಾರ್ಕಿಂಗ್ ಮಾಡುವ ಮೊದಲು ವಾಹನ ಮತ್ತು ಜನರ ಸುರಕ್ಷತೆಗಾಗಿ ಚಕ್ರಕ್ಕೆ ದೊಡ್ಡ ಕಲ್ಲುಗಳನ್ನಿಡಬೇಕಾಗಿದೆ. ಜಲ್ಲಿಯ ಮೇಲೆ ನಿಲ್ಲಿಸಿದ ಬೈಕ್ ತಂತಾನೇ ಬೀಳುತ್ತವೆ. ಇಷ್ಟೇ ಅಲ್ಲದೇ ಜಲ್ಲಿಕಲ್ಲುಗಳು ಎದ್ದಿರುವ ರಸ್ತೆಯಲ್ಲಿ ವಾಹನ ಸಂಚರಿಸಿದಾಗ ಧೂಳು ಆಸ್ಪತ್ರೆ ಪರಿಸರ ಮಾತ್ರವಲ್ಲದೇ ಒಳಗೂ ಆವರಿಸಿಕೊಳ್ಳುತ್ತಿದೆ. ಎದುರಿಗೇ ಇರುವ ತುರ್ತು ಚಿಕಿತ್ಸೆ, ಕೊರೋನಾ ತಪಾಸಣೆ ಹಾಗೂ ಇತರ ತಾಂತ್ರಿಕ ಘಟಕಗಳಿಗೂ ಕೆಟ್ಟ ರಸ್ತೆಯ ಅಡ್ಡಪರಿಣಾಮಗಳು ಬಡಿಯುತ್ತಿದೆ. ಮುಖ್ಯವಾಗಿ ತಾಲೂಕಾಸ್ಪತ್ರೆಗೂ ಏಕೈಕ ಸಂಪರ್ಕ ಕೊಂಡಿಯಾಗಿರುವ ಎಪಿಎಂಸಿ ಗೋದಾಮು ರಸ್ತೆಯನ್ನು ಮಾತ್ರ ಯಾವ ಕಾರಣಕ್ಕೆ ನಿರ್ಲಕ್ಷಿಸಲಾಗುತ್ತಿದೆ ಎನ್ನುವುದು ಅರ್ಥವಾಗದ ಸಂಗತಿ.ಈ ಬಗ್ಗೆ ಕನ್ನಡಪ್ರಭದೊಂದಿಗೆ ಮಾತನಾಡಿದ ಎಪಿಎಂಸಿ ವ್ಯಾಪಾರಿ ಉದಯ ಶಾನಭಾಗ, ತಾಲೂಕಾಸ್ಪತ್ರೆ ಹಾಗೂ ಮುಂದೆ ಸಾಗಿ ಕಲಭಾಗ ಗುಡ್ಡದೆಡೆಗಿನ ಪ್ರಮುಖ ರಸ್ತೆ ಹಾಳಾಗಿದ್ದರೂ ಸರಿಪಡಿಸಿಲ್ಲ. ಇದರಿಂದ ಈ ರಸ್ತೆಯಲ್ಲಿ ಓಡಾಡುವವರಿಗೆ, ಚಾಲಕರಿಗೆ ಮಾತ್ರವಲ್ಲದೇ ತಾಲೂಕಾಸ್ಪತ್ರೆಗೆ ಬರುವವರಿಗೂ ಸಮಸ್ಯೆಯಾಗುತ್ತಿದೆ. ರಸ್ತೆ ಸರಿಪಡಿಸಿದರೆ ಬಹಳಷ್ಟು ಅನುಕೂಲವಾಗುತ್ತದೆ ಎಂದಿದ್ದಾರೆ. ರಸ್ತೆಯ ಅವ್ಯವಸ್ಥೆಯಿಂದ ಆಸ್ಪತ್ರೆಗೆ ಬರುವವರಿಗೆ ವಾಹನ ನಿಲುಗಡೆ ವಿಷಯದಲ್ಲಿ ಹೆಚ್ಚು ಸಮಸ್ಯೆಯಾಗುತ್ತಿದೆ. ರಸ್ತೆಯಲ್ಲಿ ಜಲ್ಲಿಕಲ್ಲು ಕಿತ್ತುಹೋಗಿ ಉಬ್ಬು-ತಗ್ಗಾಗಿರುವುದರಿಂದ ವಾಹನ ಚಲಾವಣೆಯೂ ಕಷ್ಟ, ಧೂಳು ಹಾರುವುದು ಹೆಚ್ಚಾಗುತ್ತಿದೆ. ಪರಿಸ್ಥಿತಿ ಅಪಾಯಕಾರಿಯಾಗುವ ಮುನ್ನವೇ ರಸ್ತೆ ದುರಸ್ತಿಯಾಗಲಿ ಎಂದು ಸಾಮಾಜಿಕ ಕಾರ್ಯಕರ್ತ ರಾಮಚಂದ್ರ ಗಣೇಶ ಭಟ್ಟ ಒತ್ತಾಯಿಸಿದ್ದಾರೆ.