ಸಾರಾಂಶ
ಜನಪ್ರತಿನಿಧಿ, ಅಧಿಕಾರಿಗಳಿಗೆ ಸಾರ್ವಜನಿಕರು,ವಿದ್ಯಾರ್ಥಿಗಳ ಪ್ರಶ್ನೆ । ರಸ್ತೆಗೆ ಜಲ್ಲಿಕಲ್ಲು ಸುರಿದು ಅರ್ಧಕ್ಕೆ ಕಾಮಗಾರಿ ಸ್ಥಗಿತ
ಕನ್ನಡಪ್ರಭ ವಾರ್ತೆ ಕೆಜಿಎಫ್ಕಳೆದ ಎರಡು ವರ್ಷದಿಂದ ಪೊಟ್ಟೇನಹಳ್ಳಿಯ ಪದವಿ ಕಾಲೇಜು ಮತ್ತು ರವಿಶಂಕರ್ ಗುರೂಜಿ ಶಾಲೆಗೆ ಹೋಗಲು ಸರ್ಮಪಕ ರಸ್ತೆಯ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು, ಸಾರ್ವಜನಿಕರು ಪರದಾಡುತ್ತಿದ್ದಾರೆ.
ನಗರಸಭೆ ವ್ಯಾಪ್ತಿಗೆ ಬರುವ ಪೈಪ್‌ಲೈನ್ ರಸ್ತೆಯಿಂದ ಪದವಿ ಕಾಲೇಜಿಗೆ ಹೋಗುವ ರಸ್ತೆಗೆ ಜಲ್ಲಿಕಲ್ಲು ಸುರಿದು ಅರ್ಧಕ್ಕೆ ಕಾಮಗಾರಿ ನಿಲ್ಲಿಸಿದ್ದಾರೆ, ಈ ಹಿನ್ನೆಲೆ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ಕಾಲೇಜು ವಿದ್ಯಾರ್ಥಿಗಳು, ದ್ವಿಚಕ್ರ ವಾಹನ ಸವಾರರು, ಆಟೋ ಚಾಲಕರು ರಸ್ತೆಯಲ್ಲಿ ಓಡಾಡುವುದಕ್ಕೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.ಕಳೆದು ಎರಡು ವರ್ಷದಿಂದ ಹಳ್ಳ ಕೊಳ್ಳಗಳಿಂದ ಕೂಡಿದ ರಸ್ತೆಗೆ ಇನ್ನೇನು ಡಾಂಬರು ಭಾಗ್ಯ ಸಿಗಲಿದೆ ಎಂದು ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದರು, ಹಳ್ಳಕೊಳ್ಳಗಳಿಂದ ಕೂಡಿದ ರಸ್ತೆಗೆ ಕೋಲಾರ ಮೂಲದ ಗುತ್ತಿಗೆದಾರ ಚಂಬೆ ನಾರಾಯಣ್ವಾಮಿ ಜಲ್ಲಿ ಸುರಿದು ರಸ್ತೆಯನ್ನು ಹಾಗೆ ಬಿಟಿದ್ದಾರೆ. ಜಲ್ಲಿ ರಸ್ತೆಯಲ್ಲಿ ಸಾರ್ವಜನಿಕರು ನಡೆಯಲು ಸಾಧ್ಯವಾಗದೆ ಎಡವಿ ಬೀಳುವುದು ಸಾಮಾನ್ಯವಾಗಿದೆ, ಇನ್ನೂ ದ್ವಿಚಕ್ರ ವಾಹನ ಸವಾರರ ಕಷ್ಟವಂತೂ ಹೇಳತೀರದು.
ಪ್ರತಿ ದಿನ ಮೂರು ಸಾವಿರ ವಿದ್ಯಾರ್ಥಿಗಳು ಓಡಾಡುವ ರಸ್ತೆ:ಸರಕಾರಿ ಪದವಿ ಕಾಲೇಜಿನ ೨ ಸಾವಿರ ವಿದ್ಯಾರ್ಥಿಗಳು, ರವಿಶಂಕರ್ ಗುರೂಜಿ ವಿದ್ಯಾಸಂಸ್ಥೆಯಿಂದ ಒಂದು ಸಾವಿರ ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಶಾಲಾ ಕಾಲೇಜಿಗೆ ಹೋಗಿ ಬರಬೇಕಿದೆ, ಒಂದು ಕಿಮೀ ರಸ್ತೆಗೆ ಜಲ್ಲಿಕಲ್ಲು ಹಾಕಿ ರಸ್ತೆಯ ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ಸಾರ್ವಜನಿಕರು ಸಹ ತೊಂದರೆ ಅನುಭವಿಸುತ್ತಿದ್ದಾರೆ.
ನಗರಸಭೆ ಅಧಿಕಾರಿಗಳು ಅರ್ಧಕ್ಕೆ ನಿಂತಿರುವ ರಸ್ತೆಯ ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ನವಕರವೇ ಕಾರ್‍ಯಕರ್ತರು ನಗರಸಭೆ ಮುಂಭಾಗ ಉಗ್ರ ಹೋರಾಟ ಹಮ್ಮಿಕೊಳ್ಳವುದಾಗಿ ರಾಜ್ಯಾಧ್ಯಕ್ಷ ರಾಜಗೋಪಾಲಗೌಡ ತಿಳಿಸಿದ್ದಾರೆ.ಕನಿಷ್ಠ ಮಾನವೀಯತೆ ಮೇರೆಗೆ ಆದರೂ ನಗರಸಭೆ ಅಧಿಕಾರಿಗಳು ರಸ್ತೆಯ ಶೋಚನೀಯ ಪರಿಸ್ಥಿತಿ ಗಮನಿಸಿ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡು ರಸ್ತೆಯ ಕಾಮಗಾರಿ ಪೂರ್ಣಗೊಳಿಸಿ, ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಮಾಜಿ ನಗರಸಭೆ ಅಧ್ಯಕ್ಷ ಪಿ.ದಯಾನಂದ್ ಪೌರಾಯುಕ್ತರನ್ನು ಒತ್ತಾಯಿಸಿದ್ದಾರೆ.
ನಾವು ಹಳ್ಳಿಯಿಂದ ಕೆಜಿಎಫ್ ನಗರದ ಕಾಲೇಜಿಗೆ ಬರುತ್ತೇವೆ. ಬಸ್ ನಿಲ್ದಾಣದಿಂದ ಕಾಲೇಜು ೩ ಕಿಮೀ ದೂರವಿದ್ದು, ನಾವು ಕಾಲೇಜಿಗೆ ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗಬೇಕು, ಅದರಲ್ಲೂ ಜಲ್ಲಿ ರಸ್ತೆಯಲ್ಲಿ ನಾವು ಹೇಗೆ ನಡೆಯಬೇಕೆಂದು ವಿದ್ಯಾರ್ಥಿನಿ ಸೌಭಾಗ್ಯ ತಮ್ಮ ಅಳಲು ತೋಡಿ ಕೊಂಡರು.ಸರಕಾರಿ ಪದವಿ ಕಾಲೇಜಿಗೆ ಹೋಗಿ ಬರಲು ಬಸ್‌ನ ಸೌಲಭ್ಯವೂ ಇಲ್ಲ, ಕಾಲೇಜಿಗೆ ನಡೆದುಕೊಂಡು ಹೋಗಲು ಸಮರ್ಪಕ ರಸ್ತೆಯೂ ಇಲ್ಲ, ಗ್ರಾಮಾಂತರ ಪ್ರದೇಶದಿಂದ ಬರುವ ವಿದ್ಯಾರ್ಥಿಗಳು ಪ್ರತಿ ದಿನ ಕಾಲೇಜಿಗೆ ೬ ಕಿಮೀ ನಡೆದುಕೊಂಡು ಹೋಗಿ ಮರಳಿ ಬರಬೇಕು. ಯಾರಿಗೆ ನಮ್ಮ ಸಮಸ್ಯೆ ಹೇಳಬೇಕೆಂದು ವಿದ್ಯಾರ್ಥಿನಿ ಪ್ರಿಯಾ ತಿಳಿಸಿದರು.
ಎತ್ತಿನ ಹೊಳೆಯ ೩೦ ಲಕ್ಷ ರು.ಗಳ ಅನುದಾನದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗುವುದು, ಆದಷ್ಟು ಬೇಗ ರಸ್ತೆ ಕಾಮಗಾರಿ ಮುಗಿಸಿ ಸಾರ್ವಜನಿಕರ ಅನುಕೂಲಕ್ಕೆ ನೀಡಲಾಗುವುದೆಂದು ಪೌರಾಯುಕ್ತ ಪವನ್‌ಕುಮಾರ್ ತಿಳಿಸಿದರು.--------
ನಗರಸಭೆ ವ್ಯಾಪ್ತಿಗೆ ಬರುವ ಪೈಪ್‌ಲೈನ್ ರಸ್ತೆಯಿಂದ ಪದವಿ ಕಾಲೇಜಿಗೆ ಹೋಗುವ ರಸ್ತೆಗೆ ಜಲ್ಲಿಕಲ್ಲು ಸುರಿದು ಅರ್ಧಕ್ಕೆ ಕಾಮಗಾರಿ ನಿಲ್ಲಿಸಿರುವುದು.