ಗ್ರಾಮಾಂತರ ವಿದ್ಯಾರ್ಥಿಗಳಿಂದ ದೊಡ್ಡ ಮಟ್ಟದ ಸಾಧನೆ: ಗಿರೀಶ್ ಮಲ್ಲಪ್ಪ ಮೋರಿಕಲ್ಲು

| Published : Jul 23 2025, 12:30 AM IST

ಗ್ರಾಮಾಂತರ ವಿದ್ಯಾರ್ಥಿಗಳಿಂದ ದೊಡ್ಡ ಮಟ್ಟದ ಸಾಧನೆ: ಗಿರೀಶ್ ಮಲ್ಲಪ್ಪ ಮೋರಿಕಲ್ಲು
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿದ್ದು ಅದನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಸಮಾಜದ ಎಲ್ಲರು ಕೈಜೋಡಿಸಬೇಕು ಎಂದು ಗಣ್ಯರು ಹೇಳಿದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿದ್ದು, ಅದನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಸಮಾಜದ ಎಲ್ಲರೂ ಕೈ ಜೋಡಿಸಬೇಕೆಂದು ಉದ್ಯಮಿ ಹಾಗೂ ಸಮಾಜ ಸೇವಕ ಗಿರೀಶ್ ಮಲ್ಲಪ್ಪ ಮೋರಿಕಲ್ಲು ಹೇಳಿದರು. ಶನಿವಾರ ಐಗೂರಿನ ಸರ್ಕಾರಿ ಪದವಿಪೂರ್ವ ಹಾಗೂ ಪ್ರೌಢಶಾಲೆಯ ಸಭಾಂಗಣದಲ್ಲಿ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮಾಂತರ ಮಟ್ಟದಿಂದ ಬಂದಿರುವ ವಿದ್ಯಾರ್ಥಿಗಳು ದೊಡ್ಡ ಮಟ್ಟದ ಸಾಧನೆ ಮಾಡಿದ್ದಾರೆ. ನಿರಂತರ ಶ್ರಮ ಹಾಗೂ ಅಧ್ಯಯನದ ಮೂಲಕ ಅತ್ಯುನ್ನತ ಸಾಧನೆ ಮಾಡಬಹುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಮೊಬೈಲ್ ಗಳಿಗೆ ವಿಶ್ರಾಂತಿ ನೀಡಿ ಓದಿನ ಕಡೆಗೆ ಹೆಚ್ಚು ಗಮನಹರಿಸಬೇಕು ಎಂದು ಸಲಹೆ ನೀಡಿದರು. ಪ್ರಗತಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ:

ಸೇನೆಯವರು ದೇಶವನ್ನು ಕಾಯಲು ಶ್ರಮಪಟ್ಟರೆ, ಪತ್ರಕರ್ತರು ದೇಶದ ಸರ್ವಾಂಗೀಣ ಪ್ರಗತಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ಈ ಸಂದರ್ಭ ಅವರು ಶ್ಲಾಘಿಸಿದರು. ಸರ್ಕಾರಿ ಶಾಲೆಗಳು ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಯ್ಕೆ ಮಾಡಿಕೊಂಡಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸಹಾಯ ಮಾಡಲು ತಾವು ಸಿದ್ಧವಿರುವುದಾಗಿ ಈ ಸಂದರ್ಭ ತಿಳಿಸಿದರು.ಕೊಡಗು ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ವಿ.ರವಿಕುಮಾರ್ ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಉತ್ತಮ ಶಿಕ್ಷಣದೊಂದಿಗೆ ಜೀವನ ರೂಪಿಸಿಕೊಳ್ಳಲು ವಿದ್ಯಾರ್ಥಿಗಳು ದಿನನಿತ್ಯ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಉತ್ತಮ ಕಾರ್ಯ ನಿರ್ವಹಿಸುತ್ತಿದೆ:

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಸ್.ಎಸ್.ಯೋಗೇಶ್ ಮಾತನಾಡಿ, ಸಮಾಜದಲ್ಲಿ ಪತ್ರಿಕಾರಂಗ ನಾಲ್ಕನೇ ಅಂಗವಾಗಿ ಗುರುತಿಸಿಕೊಂಡು ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ಗ್ರಾಮೀಣ ಪ್ರದೇಶಗಳ ಜನರ ಹಾಗೂ ವಿದ್ಯಾರ್ಥಿಗಳ ಉನ್ನತ ಭವಿಷ್ಯ ನಿರ್ಮಾಣ ಮಾಡುವಲ್ಲಿ ಪತ್ರಿಕಾ ರಂಗದ ಕೊಡುಗೆ ಅಪಾರ ಎಂದು ಹೇಳಿದರು. ಹಿಂದೆ ದಿನಪತ್ರಿಕೆಗಳು ಗ್ರಾಮೀಣ ಪ್ರದೇಶಕ್ಕೂ ಕೂಡ ತಲುಪುತ್ತಿತ್ತು. ಆದರೆ ಆ ಅನುಕೂಲತೆಯಿಂದ ಇಂದು ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳಿಗೆ ದಿನನಿತ್ಯದ ವಿಚಾರಗಳನ್ನು ಅರಿಯಲು ಅನುಕೂಲ ಮಾಡಿಕೊಡಲು ಮುಂದಾಗಬೇಕು ಎಂದು ಪತ್ರಿಕಾ ಮಾಧ್ಯಮದವರಿಗೆ ಸಲಹೆ ನೀಡಿದರು. ಕೊಡಗು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷ ಎಸ್.ಎ.ಮುರಳಿಧರ್ ಪ್ರಾಸ್ತಾವಿಕ ನುಡಿಯಾಡಿದರು. ಕೊಡಗು ಪತ್ರಕರ್ತರ ಸಂಘದ ಉಪಾಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ, ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಚ್. ಕೆ. ಉಮೇಶ್, ಪ್ರೌಢಶಾಲಾ ಮುಖ್ಯೋಪಾಧ್ಯಯ ಎಂ.ಎಂ.ಯಶವಂತ್ ಕುಮಾರ್ ಇದ್ದರು. ಕಾರ್ಯಕ್ರಮದ ಅಂಗವಾಗಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಸಂವಿಧಾನ ಉಳಿವಿಗೆ ಪತ್ರಿಕೆಗಳ ಪಾತ್ರ ಪ್ರಬಂಧ ಸ್ಪರ್ಧೆಯಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಚಿರುಶ್ರೀ ಪ್ರಥಮ ಸ್ಥಾನ ಪಡೆದರೆ. ದ್ವಿತೀಯ ಪಿಯು ವಿದ್ಯಾರ್ಥಿನಿ ಆರ್.ಯಶಸ್ವಿ ದ್ವಿತೀಯ ಸ್ಥಾನ ಗಳಿಸಿದರು. ಕಳೆದ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿನಿ ಎಚ್.ಆರ್.ರಮ್ಯ ಹಾಗೂ ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿದ ಪಿ.ಸಿ.ನಿಕ್ಷಿತ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕ ಮಂಜುನಾಥ್ ನಿರೂಪಿಸಿದರೆ, ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಪಿ.ಲೋಕೇಶ್ ಸ್ವಾಗತಿಸಿ, ಶಾಲಾ ಮಕ್ಕಳು ಪ್ರಾರ್ಥಿಸಿ, ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಪ್ಪ ವಂದಿಸಿದರು.