ಸಾರಾಂಶ
ರ್‍ಯಾಂಕ್ ಪಡೆದ ವಿದ್ಯಾರ್ಥಿ, ಶಿಕ್ಷಣ, ಕ್ರೀಡೆಯಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳು ಹಾಗೂ ಮೂವರು ಪಿಎಚ್.ಡಿ ಪಡೆದ ಉಪನ್ಯಾಸಕರನ್ನು ಡಾ. ಹೆಗ್ಗಡೆ ಸನ್ಮಾನಿಸಿದರು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ವಿದ್ಯಾರ್ಥಿಗಳು ತಮ್ಮ ದೈಹಿಕ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ಕಠಿಣ ಪರಿಶ್ರಮ, ಅಧ್ಯಯನದಿಂದ ಯಶಸ್ಸಿನ ಪಥದಲ್ಲಿ ಸಾಗಬಹುದು. ಕ್ರೀಡೆ, ಯೋಗ ಮತ್ತಿತರ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಕ್ಷಮತೆಯನ್ನು ಹೆಚ್ಚಿಸಿಕೊಂಡು ಅಧ್ಯಯನದಲ್ಲಿ ಉತೃಷ್ಟ ಸಾಧನೆ ಮಾಡಲು ಸಾಧ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು. ಉಜಿರೆ ಎಸ್‌ಡಿಎಂ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಎಲ್ಲ ಅನುಕೂಲತೆ ಕಲ್ಪಿಸಿಕೊಡುತ್ತಿದೆ. ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಮಾನ ಆದ್ಯತೆ ನೀಡುತ್ತಿದೆ. ಗ್ರಾಮೀಣ ಪ್ರದೇಶದ ಕಾಲೇಜಿನಲ್ಲಿ ಪ್ರತಿವರ್ಷ ವಿಶ್ವವಿದ್ಯಾಲಯದ ರ‍್ಯಾಂಕ್ ಗಳು ಇಲ್ಲಿನ ವಿದ್ಯಾರ್ಥಿಗಲ ಪಾಲಾಗುತ್ತಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು. ರ್‍ಯಾಂಕ್ ಪಡೆದ ವಿದ್ಯಾರ್ಥಿ, ಶಿಕ್ಷಣ, ಕ್ರೀಡೆಯಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳು ಹಾಗೂ ಮೂವರು ಪಿಎಚ್.ಡಿ ಪಡೆದ ಉಪನ್ಯಾಸಕರನ್ನು ಡಾ. ಹೆಗ್ಗಡೆ ಸನ್ಮಾನಿಸಿದರು.ಮಣಿಪಾಲ ಕಾರ್ಮಿಕ್ ಡಿಸೈನ್ ಪ್ರೈ.ಲಿ .ನ ಡೈರೆಕ್ಟರ್ ಮತ್ತು ಚೀಫ್ ಟೆಕ್ನಿಕಲ್ ಆಫೀಸರ್ ಗುರುರಾಜ್ ಬಂಕಾಪುರ್ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., ಕಾರ್ಯಕ್ರಮ ಸಂಯೋಜಕ ಮೆಕ್ಯಾನಿಕಲ್ ವಿಭಾಗದ ಡಾ. ಬಸವ, ಸಿವಿಲ್ ವಿಭಾಗದ ಡಾ. ಕೃಷ್ಣಪ್ರಸಾದ್ ಮತ್ತು ವಿದ್ಯಾರ್ಥಿ ನಾಯಕರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ಟಿ. ವಾರ್ಷಿಕ ವರದಿ ಮಂಡಿಸಿದರು. ಸಂದೀಪ್ ಸ್ವಾಗತಿಸಿದರು. ಶ್ರೀನಿಧಿ ವಂದಿಸಿದರು.ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.