ಶಿವಯೋಗದ ಬಲದಿಂದ ಪಂಚಭೂತಗಳನ್ನು ಜಯಿಸಿ, ಸಮಾಜಕ್ಕೆ, ಧರ್ಮಕ್ಕೆ, ಅನ್ನ, ಅರಿವು, ಆಶ್ರಯವನ್ನು ನೀಡಿ ಶೂನ್ಯ ಪರಂಪರೆಯ ಪೀಠಕ್ಕೆ ಅನ್ವರ್ಥಕವಾಗಿ ಬದುಕಿದವರು ಸಂತ ಮಹಾತ್ಮರು, ಶರಣರು, ಅಂಥ ಮಹಾತ್ಮರ ಆಧ್ಯಾತ್ಮ ಪ್ರವಚನದ ಶ್ರವಣವು ನಮ್ಮ ಬದುಕಿನಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗುತ್ತದೆ ಎಂದು ಹುಬ್ಬಳ್ಳಿ ಮೂರುಸಾವಿರಮಠದ ಡಾ. ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಹಾವೇರಿ: ಶಿವಯೋಗದ ಬಲದಿಂದ ಪಂಚಭೂತಗಳನ್ನು ಜಯಿಸಿ, ಸಮಾಜಕ್ಕೆ, ಧರ್ಮಕ್ಕೆ, ಅನ್ನ, ಅರಿವು, ಆಶ್ರಯವನ್ನು ನೀಡಿ ಶೂನ್ಯ ಪರಂಪರೆಯ ಪೀಠಕ್ಕೆ ಅನ್ವರ್ಥಕವಾಗಿ ಬದುಕಿದವರು ಸಂತ ಮಹಾತ್ಮರು, ಶರಣರು, ಅಂಥ ಮಹಾತ್ಮರ ಆಧ್ಯಾತ್ಮ ಪ್ರವಚನದ ಶ್ರವಣವು ನಮ್ಮ ಬದುಕಿನಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗುತ್ತದೆ ಎಂದು ಹುಬ್ಬಳ್ಳಿ ಮೂರುಸಾವಿರಮಠದ ಡಾ. ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.ನಗರದ ಹುಕ್ಕೇರಿಮಠದ ಶ್ರೀ ಶಿವಲಿಂಗೇಶ್ವರ ವಿದ್ಯಾಪೀಠದ ಆವರಣದಲ್ಲಿ ಶ್ರೀ ಹುಕ್ಕೇರಿಮಠದ ಜಾತ್ರಾ ಮಹೋತ್ಸವ, ಶಿವಬಸವೇಶ್ವರ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸುವರ್ಣ ಮಹೋತ್ಸವ, ಶಿವಬಸವೇಶ್ವರ ಪ್ರಸಾದ ನಿಲಯದ ಅಮೃತ ಮಹೋತ್ಸವ, ಪ್ರಸಾದ ನಿಲಯದ ಹಳೆ ವಿದ್ಯಾರ್ಥಿಗಳ ಸಂಘದ ಸುವರ್ಣ ಮಹೋತ್ಸವ, ಶಿವಬಸವ ಜಾನುವಾರು ಜಾತ್ರೆಯ ಸುವರ್ಣ ಮಹೋತ್ಸವ ಹಾಗೂ ಸದಾಶಿವ ಶ್ರೀಗಳ 15 ವರ್ಷಗಳ ಪಟ್ಟಾಧಿಕಾರದ ಸವಿನೆನಪಿಗಾಗಿ ರಜತ ತುಲಾಭಾರದ ಅಂಗವಾಗಿ ಹಮ್ಮಿಕೊಂಡಿರುವ ಆಧ್ಯಾತ್ಮ ಪ್ರವಚನದ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಪ್ರವಚನದ ಆರಂಭಿಕ ನುಡಿಗಳನ್ನಾಡಿದ ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಸ್ವಾಮೀಜಿ ಮಾತನಾಡಿ, ಕರ್ನಾಟಕವು ದೇಶದಲ್ಲಿಯೇ ಅತ್ಯಂತ ಸುರಕ್ಷಿತ ರಾಜ್ಯವಾಗಿದೆ. ಸಮಾಜದ ಎಲ್ಲ ವರ್ಗಗಳು ಒಂದೇ ಸೂರಿನಡಿ ಒಂದಾಗುವದು ನಮ್ಮ ರಾಜ್ಯದಲ್ಲಿಯೇ. ಅದಕ್ಕೆ ಕಾರಣ 12ನೇ ಶತಮಾನದ ಕಾಯಕ ದಾಸೋಹ ಮತ್ತು ಸಮಾನತೆ ತತ್ವಗಳನ್ನು ಇಂದಿನ ಶತಮಾನದಲ್ಲಿ ವೀರಶೈವ ಲಿಂಗಾಯತ ಮಠಗಳು ಅನುಸರಿಸಿದ್ದರಿಂದ ಇದೆಲ್ಲವೂ ಸಾಧ್ಯವಾಗಿದೆ ಎಂದು ಹೇಳಿದರು. ಇತ್ತೀಚೆಗೆ ಸಣ್ಣಮಕ್ಕಳು ಸಹ ಆತ್ಯಹತ್ಯೆಗೆ ಶರಣಾಗುತ್ತಿದ್ದಾರೆ. ಇದಕ್ಕೆ ಕಾರಣ ಮಕ್ಕಳು ಧಾರ್ಮಿಕತೆಯಿಂದ ವಿಮುಖವಾಗುತ್ತಿದ್ದಾರೆ. ಆಧ್ಯಾತ್ಮವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ಆಧ್ಯಾತ್ಮಿಕ ಸಂಪತ್ತು ದೇಶದ ಆಸ್ಮಿತೆಯೂ ಆಗಿದೆ. ಮುಂಬರುವ ವಿಧಾಯಕ ಕಾರ್ಯಕ್ರಮಗಳು ನ ಭೋತ್ಯೋ ನ ಭವಿಷ್ಯತೇ ಎನ್ನುವಂತೆ ಐತಿಹಾಸಿಕವಾಗಿ ನಡೆಯಲಿ ಎಂದು ಹೇಳಿದರು.ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಕರ್ಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ವಿಜಯಪುರದ ಸದ್ಗುರು ಸಿದ್ಧಾರೂಢ ಸ್ವಾಮೀಜಿ, ಕೂಡಲದ ಗುರುಮಹೇಶ್ವರ ಸ್ವಾಮೀಜಿ, ಹೇರೂರಿನ ನಂಜುಂಡ ಪಂಡಿತಾರಾಧ್ಯ ಸ್ವಾಮೀಜಿ, ಬಣ್ಣದಮಠದ ಅಭಿನವ ರುದ್ರಮಲ್ಲಿಕಾರ್ಜುನ ಸ್ವಾಮೀಜಿ, ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಮೂಲೆಗದ್ದೆಯ ಶ್ರೀಗಳು, ವೀರಬಸವ ಶ್ರೀಗಳು, ತೆಲಂಗಾಣದ ವಿರೂಪಾಕ್ಷ ದೇವರು, ಘನಲಿಂಗದೇವರು, ಮಾಜಿ ಶಾಸಕರಾದ ಶಿವರಾಜ ಸಜ್ಜನ, ನೆಹರೂ ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಸಂಜೀವಕುಮಾರ ನೀರಲಗಿ, ಮಹೇಶ ಚಿನ್ನಿಕಟ್ಟಿ, ರಾಜಣ್ಣ ಮಾಗನೂರ ಇತರರು ಉಪಸ್ಥಿತರಿದ್ದರು.ಕೊಟ್ನಿಕಲ್‌ನ ಅಮರೇಶ ಗವಾಯಿಗಳು ವಚನ ಸಂಗೀತ ನಡೆಸಿಕೊಟ್ಟರು. ಪಿ.ಡಿ. ಶಿರೂರ ಸ್ವಾಗತಿಸಿದರು. ನಾಗರಾಜ ನಡುವಿನಮಠ ಕಾರ್ಯಕ್ರಮ ನಿರೂಪಿಸಿದರು. ಶಿವಬಸವ ಮರಳಿಹಳ್ಳಿ ವಂದಿಸಿದರು.