ಕುವೆಂಪುರವರ ಪರಮ ಶ್ರೇಷ್ಠ ೫೯ ಕೃತಿಗಳು, ೧೨ ನಾಟಕಗಳು, ಎರಡು ಕಾದಂಬರಿಗಳು, ಜ್ಞಾನಪೀಠ ತಂದುಕೊಟ್ಟ ಮಹಾ ಕೃತಿ ಶ್ರೀರಾಮಾಯಣ ದರ್ಶನಂ ಬರೆದ ಕನ್ನಡ ನಾಡಿನ ಕವಿಶ್ರೇಷ್ಠ ಕುವೆಂಪು ಅವರ ಸಾಹಿತ್ಯದಲ್ಲಿ ವಿಶ್ವಮಾನವ ಪ್ರಜ್ಞೆಯೊಂದಿಗೆ ಶೂದ್ರ, ದಲಿತ, ಸ್ತ್ರೀ ಧಾರ್ಮಿಕ, ಆಧ್ಯಾತ್ಮಿಕ, ಭಾಷಾ ಹಾಗೂ ಪ್ರಾಕೃತಿಕ ಪ್ರಜ್ಞೆಗಳನ್ನು ಕಾಣುತ್ತೇವೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ಕನ್ನಡದಲ್ಲಿ ಕಾವ್ಯ ಕೃಷಿ ಮಾಡು ಕನ್ನಡದ ವರ್ಡ್ಸ್‌ವರ್ಥ್ ಆಗುವೆ ಎಂಬ ಗುರುಗಳ ಮಾತಿನಿಂದ ಪ್ರೇರಿತರಾಗಿ ಕನ್ನಡದ ಮೇರು ಕವಿ ರಸಋಷಿಯಾದವರು. ಶಿಕ್ಷಕರಿಗೇ ಶಿಕ್ಷಣವನ್ನು ನೀಡಿದ ಮಹಾಗುರು ಕುವೆಂಪು ಎಂದು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎನ್. ಮಂಜುನಾಥ್ ಬಣ್ಣಿಸಿದರು.ತಾಲೂಕಿನ ಬಿ.ಜಿ.ನಗರದ ಪಾಂಚಜನ್ಯ ಆವರಣದಲ್ಲಿ ಬಿಜಿಎಸ್ ಮಾಡೆಲ್ ಪಬ್ಲಿಕ್ ಶಾಲೆ, ಪಿಯು ಕಾಲೇಜು ಹಾಗೂ ಶಿಕ್ಷಣ ಮಹಾ ವಿದ್ಯಾಲಯದಿಂದ ಆಯೋಜಿಸಿದ್ದ ವಿಶ್ವ ಮಾನವ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.
ಕುವೆಂಪುರವರ ಪರಮ ಶ್ರೇಷ್ಠ ೫೯ ಕೃತಿಗಳು, ೧೨ ನಾಟಕಗಳು, ಎರಡು ಕಾದಂಬರಿಗಳು, ಜ್ಞಾನಪೀಠ ತಂದುಕೊಟ್ಟ ಮಹಾ ಕೃತಿ ಶ್ರೀರಾಮಾಯಣ ದರ್ಶನಂ ಬರೆದ ಕನ್ನಡ ನಾಡಿನ ಕವಿಶ್ರೇಷ್ಠ ಕುವೆಂಪು ಅವರ ಸಾಹಿತ್ಯದಲ್ಲಿ ವಿಶ್ವಮಾನವ ಪ್ರಜ್ಞೆಯೊಂದಿಗೆ ಶೂದ್ರ, ದಲಿತ, ಸ್ತ್ರೀ ಧಾರ್ಮಿಕ, ಆಧ್ಯಾತ್ಮಿಕ, ಭಾಷಾ ಹಾಗೂ ಪ್ರಾಕೃತಿಕ ಪ್ರಜ್ಞೆಗಳನ್ನು ಕಾಣುತ್ತೇವೆ ಎಂದರು.ಆದಿಚುಂಚನಗಿರಿ ವಿಶ್ವವಿದ್ಯಾಲಯದ ಮಾನವಿಕ ಮತ್ತು ಸಮಾಜ ವಿಜ್ಞಾನ ವಿಭಾಗದ ಡೀನ್ ಡಾ.ಎ.ಟಿ.ಶಿವರಾಮು ಮಾತನಾಡಿ, ಕನ್ನಡದ ಎರಡನೇ ರಾಷ್ಟ್ರಕವಿ ಪ್ರಶಸ್ತಿ ಪಡೆದ ಕುವೆಂಪುರವರು ಜ್ಞಾನಪೀಠ, ಕೇಂದ್ರ ಸಾಹಿತ್ಯ ಅಕಾಡೆಮಿ, ಪಂಪ ಹಾಗೂ ಕರ್ನಾಟಕ ರತ್ನ ಪ್ರಶಸ್ತಿಗಳನ್ನು ಪ್ರಥಮ ಬಾರಿಗೆ ಕನ್ನಡಕ್ಕೆ ತಂದುಕೊಟ್ಟಿದ್ದಾರೆ. ತಮ್ಮ ಸಾಹಿತ್ಯದ ಮೂಲಕ ವೈಚಾರಿಕತೆ, ನಾಡು ನುಡಿ, ದೇಶಪ್ರೇಮ, ಭ್ರಾತೃತ್ವ ವಿಶ್ವಮಾನವತೆ, ಪ್ರಕೃತಿ ಸೌಂದರ್ಯ, ಜೀವನ ಪ್ರೀತಿ, ಆಧ್ಯಾತ್ಮಿಕತೆ ಮತ್ತು ವೈಜ್ಞಾನಿಕತೆಯನ್ನು ಎಲ್ಲರೆದೆಯಲ್ಲೂ ಮೂಡಿಸಿದರು ಎಂದರು.
ತಾಲೂಕು ಕಸಾಪ ಅಧ್ಯಕ್ಷ ಸಿ.ಆರ್.ಚಂದ್ರಶೇಖರ್ ಮಾತನಾಡಿ, ಈ ವರ್ಷ ಕನ್ನಡೋತ್ಸವವನ್ನು ವಿಭಿನ್ನವಾಗಿ ಆಚರಿಸುವ ವಿಶೇಷ ಆಲೋಚನೆಯಲ್ಲಿದ್ದೇವೆ. ತಾಲೂಕಿನಲ್ಲಿ ೩೬೫ಕ್ಕೂ ಹೆಚ್ಚು ಹಳ್ಳಿಗಳಿದ್ದು ಪ್ರತಿ ಹಳ್ಳಿಯಲ್ಲಿಯೂ ಹಬ್ಬ ಆಚರಣೆಗಳಿಂದ ವಿವಿಧತೆಯನ್ನು ಕಾಣುತ್ತೇವೆ. ಕಸಾಪ ಮತ್ತು ಜಾನಪದ ಪರಿಷತ್ ವತಿಯಿಂದ ಗ್ರಾಮೀಣ ಹಬ್ಬಗಳ ಸಾಂಸ್ಕೃತಿಕ ದರ್ಶನ ವಿಭಿನ್ನತೆಯನ್ನು ಆಧರಿಸಿದ ಲೇಖನಗಳನ್ನು ಪುಸ್ತಕ ರೂಪದಲ್ಲಿ ತರುವ ಪ್ರಯತ್ನ ನಡೆಯುತ್ತಿದೆ ಎಂದರು.ಬಿಜಿಎಸ್ ಮಾಡಲ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ವಿ.ಪುಟ್ಟಸ್ವಾಮಿ ಮಾತನಾಡಿ, ಹುಟ್ಟುತ್ತಾ ವಿಶ್ವಮಾನವನಾಗಿ, ಬೆಳೆಯುತ್ತಾ ಕಟ್ಟುಪಾಡುಗಳಿಂದ ಅಲ್ಪ ಮಾನವನನ್ನಾಗಿಸುತ್ತಿವೆ. ಶಿಕ್ಷಣ, ಮನುಕುಲದ ಮೌಲ್ಯಗಳನ್ನು ರೂಢಿಸುತ್ತಾ ಮತ್ತೆ ವಿಶ್ವಮಾನವನ್ನಾಗಿಸುವುದೇ ಸಾರ್ಥಕತೆಯೆಂದು ಕುವೆಂಪು ಅವರ ಆದರ್ಶಯುತ ಸಂದೇಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.
ರಾಜ್ಯ ಜಾನಪದ ಅಕಾಡೆಮಿ ಸದಸ್ಯ ಅಣೆಚನ್ನಾಪುರ ಮಂಜೇಶ್, ಬಿಜಿಎಸ್ ಪಿಯು ಕಾಲೇಜಿನ ಪ್ರಾಂಶುಪಾಲೆ ಟಿ.ಎನ್. ಶಿಲ್ಪ ಮಾತನಾಡಿದರು. ವಿದ್ಯಾರ್ಥಿಗಳಿಂದ ಪ್ರಸ್ತುತಿಗೊಂಡ ರಸಋಷಿ ಕುವೆಂಪು ಅವರ ಕುರಿತ ಕವನ, ಗಾಯನ, ಕಿರು ನಾಟಕ, ನೃತ್ಯಗಳು ಗಮನ ಸೆಳೆದವು. ಬಿ.ಇಡಿ, ಪಿಯು, ಮಾಡೆಲ್ ಪಬ್ಲಿಕ್ ಶಾಲೆಯ ಅಧ್ಯಾಪಕ ವರ್ಗ ಸೇರಿದಂತೆ ಹಲವರು ಇದ್ದರು.