ಪಕ್ಷಕ್ಕಾಗಿ ಮಹನೀಯರಿಂದ ಜೀವನ ಸಮರ್ಪಣೆ

| Published : Apr 07 2025, 12:35 AM IST

ಸಾರಾಂಶ

ಸುಮಾರು 15 ಕೋಟಿ ಸದಸ್ಯರನ್ನು ಒಳಗೊಂಡ ಬಿಜೆಪಿ ಜಗತ್ತಿನ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ

ಹುಬ್ಬಳ್ಳಿ: ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಹಾಗೂ ಲಾಲಕೃಷ್ಣ ಅಡ್ವಾಣಿ ಸೇರಿದಂತೆ ಅನೇಕ ಮಹನೀಯರು ಪಕ್ಷಕ್ಕಾಗಿ ಜೀವನವನ್ನೇ ಸಮರ್ಪಣೆ ಮಾಡಿದ್ದಾರೆ. ಅವರ ಶ್ರಮದ ಪ್ರತಿಫಲವೇ ಪಕ್ಷದ ಏಳ್ಗೆಗೆ ಕಾರಣ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಇಲ್ಲಿಯ ಅರವಿಂದ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಪಕ್ಷದ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಸುಮಾರು 15 ಕೋಟಿ ಸದಸ್ಯರನ್ನು ಒಳಗೊಂಡ ಬಿಜೆಪಿ ಜಗತ್ತಿನ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ದೇಶದ 15 ರಾಜ್ಯಗಳಲ್ಲಿ ಅಂದರೆ ಭೌಗೋಳಿಕವಾಗಿ ಶೇ.75 ಭಾಗದಲ್ಲಿ ಪಕ್ಷದ ಆಡಳಿತ ಇದೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಉತ್ತಮ ಆಡಳಿತ ನೀಡುತ್ತಿದೆ. ಇನ್ನೂ ಹಲವಾರು ವರ್ಷ ಪಕ್ಷವು ದೇಶದಲ್ಲಿ ಆಡಳಿತ ನಡೆಸಲಿದೆ ಎಂದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಪಂ.ದೀನದಯಾಳ ಉಪಾಧ್ಯಾಯ, ಶಾಮ ಪ್ರಸಾದ್ ಮುಖರ್ಜಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಏಪ್ರಿಲ್ 6, 1980ರಲ್ಲಿ ಜನ ಸಂಘದಿಂದ ಬಿಜೆಪಿಗೆ ಪಕ್ಷವನ್ನು ವಿಲೀನ ಮಾಡಿದರು. ಮುಂದೆ ಲಕ್ಷಾಂತರ ಕಾರ್ಯಕರ್ತರು ಯಾವುದೇ ಫಲಾಪೇಕ್ಷೆ ಇಲ್ಲದೆ ಹಗಲಿರುಳು ಪಕ್ಷ ಕಟ್ಟಿದರು ಎಂದರು.

ಪಕ್ಷದ ಸಾಮಾನ್ಯ ಕಾರ್ಯಕರ್ತ, ಚರ್ಮಶಿಲ್ಪಿ ಮಲ್ಲೇಶ ಬೆಟಗೇರಿ ಧ್ವಜಾರೋಹಣ ನೆರವೇರಿಸಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ವಿಪ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಇತರರು ಮಾತನಾಡಿದರು. ಇದೇ ಸಂದರ್ಭದಲ್ಲಿ ಪಕ್ಷದ 20 ಹಿರಿಯ ಕಾರ್ಯಕರ್ತರನ್ನು ಗೌರವಿಸಲಾಯಿತು.

ಪಾಲಿಕೆ ಮೇಯರ್ ರಾಮಪ್ಪ ಬಡಿಗೇರ, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ಮಾಜಿ ಶಾಸಕ ಅಶೋಕ ಕಾಟವೆ, ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಪ್ರಧಾನ ಕಾರ್ಯದರ್ಶಿಗಳಾದ ದತ್ತಮೂರ್ತಿ ಕುಲಕರ್ಣಿ, ವಿಜಯಾನಂದ ಶೆಟ್ಟಿ, ಶಿವು ಮೆಣಸಿನಕಾಯಿ, ಸೆಂಟ್ರಲ್ ಅಧ್ಯಕ್ಷ ರಾಜು ಕಾಳೆ, ಪೂರ್ವ ಕ್ಷೇತ್ರದ ಅಧ್ಯಕ್ಷ ಮಂಜು ಕಾಟ್ಕರ್, ಜಿಲ್ಲಾ ವಕ್ತಾರ ರವಿ ನಾಯಕ, ಕೃಷ್ಣ ಗಂಡಗಾಳೇಕರ, ಸಿದ್ದು ಮೊಗಲಿಶೆಟ್ಟರ್, ರಾಜು ಜರತಾರ್‌ಘರ, ಪಾಲಿಕೆ ಸದಸ್ಯರಾದ ರಾಧಾಬಾಯಿ ಸಫಾರೆ, ರೂಪಾ ಶೆಟ್ಟಿ, ಸುನೀತಾ ಮಾಳವದಕರ ಸೇರಿದಂತೆ ಹಲವರಿದ್ದರು.