ಸಾರಾಂಶ
ಡಾ. ಬಿ.ಆರ್. ಅಂಬೇಡ್ಕರ್ ಅವರು ಸರ್ವರಿಗೂ ಸಮಾನವಾಗಿ ಬದುಕು ಕಲ್ಪಿಸುವುದೇ ರಾಷ್ಟ್ರೀಯತೆ ಎಂದು ಕಂಡುಕೊಂಡಿದ್ದರು. ಇಂತಹವರ ಬದುಕು ನಮ್ಮ ಜೀವನಕ್ಕೆ ಮಾದರಿ ಮಾಡಿಕೊಳ್ಳಬೇಕು ಎಂದು ಶಾಸಕರು ಹೇಳಿದರು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಡಾ.ಬಿ.ಆರ್.ಅಂಬೇಡ್ಕರ್ ಅವರು ಸರ್ವರಿಗೂ ಸಮಾನವಾಗಿ ಬದುಕು ಕಲ್ಪಿಸುವುದೇ ರಾಷ್ಟ್ರೀಯತೆ ಎಂದು ಕಂಡುಕೊಂಡಿದ್ದರು. ಇಂತಹವರ ಬದುಕು ನಮ್ಮ ಜೀವನಕ್ಕೆ ಮಾದರಿ ಮಾಡಿಕೊಳ್ಳಬೇಕು ಎಂದು ಶಾಸಕ ಡಾ.ಮಂತರ್‌ಗೌಡ ಹೇಳಿದರು.ಸೋಮವಾರಪೇಟೆ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ ಸಮಿತಿ ವತಿಯಿಂದ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಂಬೇಡ್ಕರ್ ಯಾವುದೇ ಒಂದು ವರ್ಗಕ್ಕೆ ಮೀಸಲಾದ ವ್ಯಕ್ತಿ ಅಲ್ಲ. ಅವರು ರಚಿಸಿದ ಸಂವಿಧಾನವನ್ನು ಪ್ರತಿಯೊಬ್ಬರೂ ಓದಲೇಬೇಕು. ಸಮಾಜದ ಸರ್ವ ಜನಾಂಗದ ಒಳಿತಿಗಾಗಿ ಅಂಬೇಡ್ಕರ್ ಅವರು ಹೊಂದಿದ್ದ ಚಿಂತನೆಗಳು, ವಿಚಾರಧಾರೆಗಳು ಇಂದಿಗೂ ಪ್ರಸ್ತುತ ಎಂದರು.ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದ ಭಾರತೀಯ ಬೌದ್ದ ಮಹಾಸಭಾದ ರಾಜ್ಯ ಕಾರ್ಯದರ್ಶಿ ಕಾಳಸ್ವಾಮಿ ಮಾತನಾಡಿ, ಭಾರತ ರತ್ನ ಡಾ.ಬಿ.ಆರ್,ಅಂಬೇಡ್ಕರ್ ಭಾರತ ಸಂವಿಧಾನವನ್ನು ರಚಿಸಿದ ಸಮಾಜ ಸುಧಾರಕನ ನ್ಯಾಯಶಾಸ್ತ್ರ ಮತ್ತು ಅರ್ಥಶಾಸ್ತ್ರ ಆಲೋಚನೆಗಳು ಕೂಡ ಎಲ್ಲರ ಮೇಲೆ ಪ್ರಭಾವ ಬೀರುತ್ತದೆ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಉದ್ಘಾಟಿಸಿದರು. ವೇದಿಕೆಯಲ್ಲಿ ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸತೀಶ್, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜೇಶ್, ಸೋಮವಾರಪೇಟೆ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎ.ಆದಂ, ಅಂಬೇಡ್ಕರ್ ಜನ್ಮದಿನಾಚರಣೆ ಸಮಿತಿ ಅಧ್ಯಕ್ಷ ನಿರ್ವಾಣಪ್ಪ, ರಾಷ್ಟ್ರೀಯ ಹಬ್ಬಗಳ ಸಮಿತಿ ಸದಸ್ಯ ಹಾಗೂ ವಕೀಲ ಬಿ.ಈ.ಜಯೇಂದ್ರ, ಎಐಟಿಯುಸಿ ಜಿಲ್ಲಾಧ್ಯಕ್ಷ ಸೋಮಪ್ಪ, ಸ್ತ್ರೀ ಶಕ್ತಿ ಒಕ್ಕೂಟದ ರಾಜ್ಯಾಧ್ಯಕ್ಷೆ ರೆಹನಾ ಸುಲ್ತಾನ್, ಸ್ತ್ರೀಶಕ್ತಿ ಒಕ್ಕೂಟದ ತಾಲೂಕು ಅಧ್ಯಕ್ಷೆ ಹೇಮಾ ಸೇರಿದಂತೆ ದಲಿತ ಪರ ಒಕ್ಕೂಟಗಳ ಅಧ್ಯಕ್ಷರು ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ಸಭಾ ಕಾರ್ಯಕ್ರಮಕ್ಕೆ ಮೊದಲು ವಿವೇಕಾನಂದ ವೃತ್ತದ ಬಳಿಯಿಂದ ಮೆರವಣಿಗೆಯಲ್ಲಿ ತೆರಳಿ ಗಾಂಧೀಜಿ ಮತ್ತು ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.