ದಾರ್ಶನಿಕರ ಮೌಲ್ಯ ಅನುಸರಿಸಿದ ಆಚರಣೆ ಅರ್ಥಪೂರ್ಣ: ಡಿಸಿ ಡಾ. ವಿದ್ಯಾಕುಮಾರಿ

| Published : Mar 26 2024, 01:04 AM IST

ದಾರ್ಶನಿಕರ ಮೌಲ್ಯ ಅನುಸರಿಸಿದ ಆಚರಣೆ ಅರ್ಥಪೂರ್ಣ: ಡಿಸಿ ಡಾ. ವಿದ್ಯಾಕುಮಾರಿ
Share this Article
  • FB
  • TW
  • Linkdin
  • Email

ಸಾರಾಂಶ

ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ರೇಣುಕಾಚಾರ್ಯ ಮತ್ತು ಶ್ರೀ ಯೋಗಿ ನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಜಯಂತಿ ಕಾರ್ಯಕ್ರಮದಲ್ಲಿ ಮಹನೀಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಮಣಿಪಾಲದಾರ್ಶನಿಕರ ಜಯಂತಿಗಳನ್ನು ಆಚರಿಸುವ ಮೂಲಕ ಅವರ ತತ್ವ ಆದರ್ಶಗಳನ್ನು ಅರಿತು, ದೈನಂದಿನ ಜೀವನದಲ್ಲಿ ನಾವು ಅಳವಡಿಸಿಕೊಂಡಾಗ ಮಾತ್ರ ಆಚರಣೆಗಳು ಅರ್ಥಪೂರ್ಣವಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಹೇಳಿದರು.ಅವರು ಸೋಮವಾರ ಇಲ್ಲಿನ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ರೇಣುಕಾಚಾರ್ಯ ಮತ್ತು ಶ್ರೀ ಯೋಗಿ ನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಜಯಂತಿ ಕಾರ್ಯಕ್ರಮದಲ್ಲಿ ಮಹನೀಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಶರಣ ಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ಪಸರಿಸಿದ ಮಹಾನ್ ವ್ಯಕ್ತಿ ರೇಣುಕಾಚಾರ್ಯರು. ಇವರು ಬೋಧಿಸಿರುವ ತತ್ವ ಸಿದ್ಧಾಂತಗಳು ಕೇವಲ ಬೋಧನೆಗೆ ಸೀಮಿತವಾಗಿರದೇ ಸಮಾಜವನ್ನು ತಿದ್ದುವ ಕೆಲಸ ಮಾಡಿವೆ. ಶರಣರ ವಚನಗಳು ಪ್ರತಿಯೊಬ್ಬರೂ ಮೇಲೂ ಪ್ರಭಾವ ಬೀರುವಂತದ್ದಾಗಿವೆ. ಸಣ್ಣ ವಚನಗಳ ಮೂಲಕ ಜನರು ಹೇಗೆ ಬದುಕಬೇಕೆಂಬ ಅನುಭವವನ್ನು ಸಾರಿದ್ದಾರೆ. ಇವು ಜೀವನ ರೂಪಿಸಿಕೊಳ್ಳುವುದಕ್ಕೆ ಸಹಕಾರಿಯಾಗಿವೆ ಎಂದರು.

ಕೈವಾರ ತಾತತ್ಯ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ಯೋಗಿ ನಾರೇಯಣ ಯತೀಂದ್ರ ಅವರು ತನ್ನ ನಡವಳಿಕೆ ಹಾಗೂ ಆಧ್ಯಾತ್ಮಿಕ ಜೀವನ ಶೈಲಿಯ ಮೂಲಕ ಜನರ ಮೇಲೆ ಪರಿಣಾಮ ಬೀರಿದ್ದಾರೆ. ಹಲವಾರು ಪವಾಡಗಳನ್ನು ಮಾಡುತ್ತಾ, ಜನರಿಗೆ ತತ್ವಬೋಧನೆ ನೀಡುತ್ತಾ ಸಮಾಜ ಸುಧಾರಣೆಗೆ ಸಾಕಷ್ಟು ಕೀರ್ತನೆಗಳನ್ನು ರಚಿಸಿದ್ದಾರೆ ಎಂದ ಅವರು, ಕೈವಾರ ತಾತತ್ಯ ಅವರ ಸಮಾಧಿ ಸ್ಥಳ ಕೈವಾರ ಇಂದು ಪ್ರಸಿದ್ಧ ಕ್ಷೇತ್ರವಾಗಿದೆ ಎಂದರು.ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಶರಣ ಸಂಸ್ಕೃತಿ ಇಡೀ ವಿಶ್ವಕ್ಕೆ ಮಾದರಿ. ಸಮಾಜದಲ್ಲಿದ್ದ ಜಾತಿ ತಾರತಮ್ಯ ಹೋಗಲಾಡಿಸಲು ಶಿವ ಶರಣರು ಅನೇಕ ವಚನಗಳನ್ನು ರಚಿಸಿದ್ದು, ಅವುಗಳು ಸರ್ವ ಕಾಲಕ್ಕೂ ಪ್ರಸ್ತುತ ಎಂದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಿರಂಜನ ಮಾತನಾಡಿ, ಕರ್ನಾಟಕ ರಾಜ್ಯ ದೊಡ್ಡ ಪ್ರಾಂತ್ಯವಾಗಿದ್ದು, ಇಲ್ಲಿ ನಡೆ-ನುಡಿ, ಉಡುಗೆ-ತೊಡುಗೆ ಹಾಗೂ ರೀತಿ-ನೀತಿಗಳು, ಸಂಪ್ರದಾಯಗಳು ಬೇರೆಯಾಗಿದ್ದರೂ, ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕುತ್ತಿದ್ದಾರೆ. ಶರಣ ಹಾಗೂ ಸಂತರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಮುಂದಿನ ಪೀಳಿಗೆಗೆ ತಿಳಿಸುವ ಹಾಗೂ ತಲುಪಿಸುವ ಕೆಲಸ ಸರ್ಕಾರ ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್., ಕುಂದಾಪುರ ಸಹಾಯಕ ಕಮೀಷನರ್ ರಶ್ಮಿ, ತಾಲೂಕು ತಹಸೀಲ್ದಾರ್‌ಗಳು, ಕ.ಸಾ.ಪ ಕಾರ್ಯದರ್ಶಿ ನರಸಿಂಹಮೂರ್ತಿ, ಶರಣ ಸಾಹಿತ್ಯ ಪರಿಷತ್ತಿನ ಗಿರೀಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.