ಹಾವೇರಿಯಲ್ಲಿ ಯುಗಾದಿ, ರಂಜಾನ್‌ ಹಬ್ಬಕ್ಕೆ ಭರ್ಜರಿ ತಯಾರಿ

| Published : Apr 09 2024, 12:46 AM IST

ಸಾರಾಂಶ

ಬರಗಾಲದ ನಡುವೆಯೂ ಹಿಂದೂಗಳ ಹೊಸ ವರ್ಷ ಯುಗಾದಿ ಆಚರಣೆಗೆ ಹಾಗೂ ಒಂದು ತಿಂಗಳ ಪರ್ಯಂತ ಉಪವಾಸ ಆಚರಿಸಿ ಪವಿತ್ರ ರಂಜಾನ್‌ ಹಬ್ಬ ಆಚರಣೆಗೆ ಮುಸ್ಲಿಂ ಬಾಂಧವರು ಭರ್ಜರಿ ತಯಾರಿ ನಡೆಸಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ಸೋಮವಾರ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿತ್ತು.

ಹಾವೇರಿ: ಬರಗಾಲದ ನಡುವೆಯೂ ಹಿಂದೂಗಳ ಹೊಸ ವರ್ಷ ಯುಗಾದಿ ಆಚರಣೆಗೆ ಹಾಗೂ ಒಂದು ತಿಂಗಳ ಪರ್ಯಂತ ಉಪವಾಸ ಆಚರಿಸಿ ಪವಿತ್ರ ರಂಜಾನ್‌ ಹಬ್ಬ ಆಚರಣೆಗೆ ಮುಸ್ಲಿಂ ಬಾಂಧವರು ಭರ್ಜರಿ ತಯಾರಿ ನಡೆಸಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ಸೋಮವಾರ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿತ್ತು.

ನಗರದಲ್ಲಿ ಯುಗಾದಿ ಹಾಗೂ ರಂಜಾನ್ ಹಬ್ಬಕ್ಕೆ ಹೊಸ ಬಟ್ಟೆ, ಮೆಹಂದಿ, ಹೂವು ಹಣ್ಣು, ಶಾವಿಗೆ, ಸಿಹಿ ತಿನಿಸು, ಡ್ರೈಫ್ರೂಟ್ಸ್‌ ವ್ಯಾಪಾರ ಭರ್ಜರಿಯಾಗಿ ನಡೆಯಿತು.

ನಗರದ ಎಂ.ಜಿ. ರಸ್ತೆಯಲ್ಲಿ ಹಿಂದು ಹಾಗೂ ಮುಸ್ಲಿಂ ಬಾಂಧವರು ಹಬ್ಬದ ನಿಮಿತ್ತ ವಿವಿಧ ವಸ್ತಗಳನ್ನು ಖರೀದಿಸಲು ಆಗಮಿಸುತ್ತಿದ್ದರಿಂದ ಮಾರುಕಟ್ಟೆ ಜನದಟ್ಟಣೆಯಿಂದ ಕೂಡಿತ್ತು. ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಸೀರೆ, ಮಸ್ತಾನಿ ಗೌನ್, ದುಪ್ಪಟ್ಟಾ, ಸ್ಕಾರ್ಫ್, ಬುರ್ಖಾ, ಟೋಪಿ, ನಮಾಜ ಮಾಡಲು ಬಳಸುವ ನೆಲ ಹಾಸಿಗೆ, ಬಳೆಗಳು, ಸುಗಂಧ ದ್ರವ್ಯಗಳು, ಅತ್ತರ ಸೇರಿದಂತೆ ವಿವಿಧ ವಸ್ತುಗಳ ಮಾರಾಟ ಬಹುತೇಕ ಎಲ್ಲ ಅಂಗಡಿಗಳಲ್ಲಿ ಜೋರಾಗಿತ್ತು. ಯುಗಾದಿ ಹಬ್ಬದ ಅಂಗವಾಗಿ ಹಿಂದೂಗಳು ಹೊಸ ಬಟ್ಟೆಗಳ ಖರೀದಿಯಲ್ಲಿ ತೊಡಗಿದ್ದರು. ಹಬ್ಬದ ಹಿನ್ನೆಲೆಯಲ್ಲಿ ಮಕ್ಕಳು, ಮಹಿಳೆಯರು ಬಟ್ಟೆ ಅಂಗಡಿಗಳಿಗೆ ಆಗಮಿಸಿದ್ದರಿಂದ ಜವಳಿ ಅಂಗಡಿಗಳಲ್ಲಿ ಜನದಟ್ಟಣೆ ಕಂಡು ಬಂದಿತು. ಇದರ ಜೊತೆಗೆ ಯುಗಾದಿ ಹಬ್ಬದ ಆಚರಣೆಗೆ ಬೇಕಾದ ಪೂಜಾ ಸಾಮಗ್ರಿಗಳು, ಹಣ್ಣು, ಕಾಯಿ, ಹೂವುಗಳ ಖರೀದಿಯಲ್ಲಿ ತೊಡಗಿದ್ದು ಕಂಡುಬಂದಿತು. ಹಗಲಿನ ವೇಳೆ ಮಾರುಕಟ್ಟೆಗೆ ಹೆಚ್ಚಾಗಿ ಗ್ರಾಮೀಣ ಪ್ರದೇಶದ ಜನರು ಆಗಮಿಸಿ ಬಟ್ಟೆ, ಸ್ಟೇಶನರಿ ವಸ್ತುಗಳನ್ನು ಖರೀದಿಸಿದರೆ, ಸಂಜೆ ಹೊತ್ತು ನಗರದ ಜನರು ಮಾರುಕಟ್ಟೆಗೆ ಆಗಮಿಸಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿದ್ದರಿಂದ ಅಂಗಡಿಗಳು ಗ್ರಾಹಕರಿಂದ ತುಂಬಿ ತುಳುಕುತ್ತಿದ್ದವು. ರಂಜಾನ ಹಬ್ಬದ ನಿಮಿತ್ತ ಸಿಹಿ ಖಾದ್ಯಗಳನ್ನು ತಯಾರಿಸಲು ಬಳಸುವ ಗೋಡಂಬಿ, ಪಿಸ್ತಾ, ದ್ರಾಕ್ಷಿ, ಬಾದಾಮಿ, ಉತ್ತತ್ತಿ ಮುಂತಾದ ಡ್ರೈಫ್ರುಟ್ಸ್‌ ವ್ಯಾಪಾರ ಭರ್ಜರಿಯಾಗಿತ್ತು. ಇನ್ನು ಹಬ್ಬದಲ್ಲಿ ಪ್ರಮುಖವಾಗಿ ತಯಾರಿಸುವ ಸಿರ್‌ಕುಂಬಾಕ್ಕೆ ಬಳಸುವ ಶಾವಿಗೆಗೆ ಬೇಡಿಕೆ ಹೆಚ್ಚಾಗಿ ಕಂಡು ಬಂದಿತು. ಇನ್ನು ಹಬ್ಬದ ಪ್ರಯುಕ್ತ ಮಾರುಕಟ್ಟೆಗೆ ವಿವಿಧ ಸುವಾಸನೆಯ ಸುಗಂಧ ದ್ರವ್ಯಗಳು ಲಗ್ಗೆ ಇಟ್ಟಿದ್ದು, ಸುಮಾರು ೫೦ ರು.ಗಳಿಂದ ಒಂದು ಸಾವಿರ ರು.ಗಳಿಗೂ ಹೆಚ್ಚು ಬೆಲೆಯ ಅತ್ತರ, ಸುಗಂಧ ದ್ರವ್ಯಗಳು ಮಾರಾಟಗೊಂಡವು.ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ಹಬ್ಬದ ಹಿಂದಿನ ದಿನ ಮಧ್ಯರಾತ್ರಿಯವರೆಗೂ ಗ್ರಾಹಕರು ಬರುತ್ತಾರೆ. ರಂಜಾನ್ ಹಬ್ಬದ ಪ್ರಯುಕ್ತ ಅಗತ್ಯ ವಸ್ತುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸ್ಟಾಕ್ ಮಾಡಲಾಗಿದ್ದು, ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ ಡ್ರೈಪ್ರೂಟ್ಸ್ ವ್ಯಾಪಾರಿ ಜಾಫರ್ ಅಗಸಿಬಾಗಿಲ ಹೇಳಿದರು.