ಸಾರಾಂಶ
ಕನ್ನಡಪ್ರಭ ವಾರ್ತೆ ಭದ್ರಾವತಿ
ನಗರಸಭೆ ವತಿಯಿಂದ ಈ ಬಾರಿ ನಾಡಹಬ್ಬ ದಸರಾ ಮಹೋತ್ಸವ ಸುಮಾರು ೫೪.೫೦ ಲಕ್ಷ ರು. ವೆಚ್ಚದಲ್ಲಿ ೧೦ ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯ ಕ್ರಮಗಳೊಂದಿಗೆ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷ ಎಂ.ಮಣಿ ಎಎನ್‌ಎಸ್ ಹೇಳಿದರು.ಅವರು ನಗರಸಭೆ ಕಚೇರಿ ಸಭಾಂಗಣದಲ್ಲಿ ದಸರಾ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅ.೩ ರಿಂದ ೧೨ರವರೆಗೆ ೧೦ ದಿನಗಳ ಕಾಲ ನಡೆಯುವ ದಸರಾ ಮಹೋತ್ಸವ ಆಚರಿಸಲಾಗುವುದು. ಅ.೩ ರಂದು ಬೆಳಗ್ಗೆ ೧೦ ಗಂಟೆಗೆ ನಗರಸಭೆ ಮುಂಭಾಗ ದಲ್ಲಿರುವ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ದಸರಾ ಆಚರಣೆಗೆ ಚಾಲನೆ ನೀಡುವರು ಎಂದರು.ಅ.೪ ರಂದು ಕನಕಮಂಟಪ ಮೈದಾನದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದ್ದು, ಪಂದ್ಯಾವಳಿ ಯನ್ನು ಅಂತಾರಾಷ್ಟ್ರೀಯ ಕ್ರೀಡಾಪಟು ಸುಧೀರ್‌ಕುಮಾರ್ ಉದ್ಘಾಟಿಸುವರು. ಅ.೫ ರಂದು ಸಂಜೆ ೪ ಗಂಟೆಗೆ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ ನಡೆಯ ಲಿದ್ದು, ಅ.೬ರಂದು ಜನ್ನಾಪುರ ಬಂಟರ ಭವನದಲ್ಲಿ ಮಹಿಳೆಯರಿಗೆ ಬೆಂಕಿ ರಹಿತ ಅಡುಗೆ ಸ್ಪರ್ಧೆ ನಡೆಯಲಿದೆ. ಅ.೭ರಂದು ಕುಸ್ತಿ ಪಂದ್ಯಾವಳಿ ನಡೆಯಲಿದ್ದು, ರಾಷ್ಟ್ರೀಯ ಕ್ರೀಡಾಪಟು ಮಹೇಶ್ವರಪ್ಪ ಉದ್ಘಾಟಿಸಲಿದ್ದಾರೆ. ಕುಸ್ತಿ ಪಂದ್ಯಾವಳಿಯಲ್ಲಿ ಗೆದ್ದ ವಿಜೇತರಿಗೆ ಬೆಳ್ಳಿಗದೆ ಹಾಗೂ ‘೨೦೨೪ ದಸರಾ ಕೇಸರಿ’ ಬಿರುದು ನೀಡಿ ಗೌರವಿಸಲಾಗುವುದು. ಅ.೮ರಂದು ಮಹಿಳೆಯರಿಗಾಗಿ ಮಹಿಳಾ ದಸರಾ ಆಚರಿಸಲಾಗುತ್ತಿದೆ ಎಂದರು.
ಅ.೯ರಂದು ಮಿಮಿಕ್ರಿ ಗೋಪಿ ಹಾಗೂ ಗಿಚ್ಚಿ ಗಿಲಿಗಿಲಿ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಕನಕ ಮಂಟಪ ಮೈದಾನದಲ್ಲಿ ನಡೆಯಲಿದೆ. ಅ.೧೨ರ ಕೊನೆಯ ದಿನ ವಿಜಯದಶಮಿಯಂದು ಮಧ್ಯಾಹ್ನ ೩ ಗಂಟೆಗೆ ಅಪ್ಪರ್‌ಹುತ್ತಾ ಬಸ್ ನಿಲ್ದಾಣದಿಂದ ನಗರದ ಪ್ರಮುಖ ಬೀದಿಗಳಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿ ಸೇರಿದಂತೆ ೫೦ಕ್ಕೂ ಹೆಚ್ಚು ವಿವಿಧ ದೇವತೆಗಳ ಬೃಹತ್ ಮೆರವಣಿಗೆ ನಡೆಯಲಿದ್ದು, ಮೆರವಣಿಗೆಗೆ ಶಾಸಕ ಬಿ.ಕೆ.ಸಂಗಮೇಶ್ವರ್ ಚಾಲನೆ ನೀಡಲಿದ್ದಾರೆ. ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಕನಕ ಮಂಟಪ ಮೈದಾನದಲ್ಲಿ ಸಂಜೆ ಬನ್ನಿ ಮುಡಿಯುವ ಮೂಲಕ ರಾವಣನ ಸಂಹಾರದೊಂದಿಗೆ ನಾಡಹಬ್ಬ ದಸರಾ ಸಂಪನ್ನಗೊಳ್ಳಲಿದೆ ಎಂದರು.ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ನಾಡಹಬ್ಬ ದಸರಾ ಆಚರಣೆ ವಿವಿಧ ಸಮಿತಿಗಳ ಪ್ರಮುಖರಾದ ಕದಿರೇಶ್, ಲತಾ ಚಂದ್ರಶೇಖರ್, ಅನುಸುಧಾ ಮೋಹನ್ ಪಳನಿ, ಚನ್ನಪ್ಪ, ರಿಯಾಜ್ ಅಹಮದ್, ಕೋಟೇಶ್ವರ ರಾವ್, ನಗರಸಭೆ ಕಛೇರಿ ವ್ಯವಸ್ಥಾಪಕಿ ಸುನಿತಾ ಕುಮಾರಿ ಉಪಸ್ಥಿತರಿದ್ದರು.