ಸಾರಾಂಶ
ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿ ಕಚೇರಿ, ರಾಷ್ಟ್ರೀಯ ಸೇವಾ ಯೋಜನೆ ಸೈನ್ಸ್ ಆಗ್ನೆಸ್ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ತಾಲೂಕು ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ ಶುಕ್ರವಾರ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿ ಕಚೇರಿ, ರಾಷ್ಟ್ರೀಯ ಸೇವಾ ಯೋಜನೆ ಸೈನ್ಸ್ ಆಗ್ನೆಸ್ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ತಾಲೂಕು ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ ಶುಕ್ರವಾರ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಹೆಚ್. ಆರ್. ತಿಮ್ಮಯ್ಯ, ಜನಸಂಖ್ಯಾ ನಿಯಂತ್ರಣ, ಕುಟುಂಬ ಯೋಜನಾ ಪ್ರಾಮುಖ್ಯತೆ ಬಗ್ಗೆ ಪ್ರಚಾರ ಮಾಡುವುದು ಮತ್ತು ಜನರಿಗೆ ಅರಿವು ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಜನಸಂಖ್ಯೆ ಅತೀ ವೇಗವಾಗಿ ಹೆಚ್ಚುತ್ತಿದ್ದು, ಜನಸಂಖ್ಯೆ ಉಂಟಾಗುವ ಸಮಸ್ಯೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ವಿಶ್ವದಲ್ಲಿ ದಿನೇ ದಿನೇ ಜನಸಂಖ್ಯೆ ಹೆಚ್ಚಾಗುತ್ತಿದ್ದು ಭಾರತ ವಿಶ್ವದ ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ. ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ನಮ್ಮ ಭಾರತ ದೇಶಕ್ಕೆ ಜನಸಂಖ್ಯೆ ದೊಡ್ಡ ಸಮಸ್ಯೆಯಾಗಿದೆ. ಜನಸಂಖ್ಯೆ ಹೆಚ್ಚಳದ ಬಗ್ಗೆ ಹೆಚ್ಚಿನ ಅರಿವು ಜನರಿಗೆ ಮೂಡಿಸಬೇಕು ಎಂದು ಅವರು ಹೇಳಿದರು.ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕೆಎಂಸಿ ಕಮ್ಯೂನಿಟಿ ಮೆಡಿಸಿನ್ ಮುಖ್ಯಸ್ಥ ಡಾ. ಪ್ರಸನ್ನ ಮಿತ್ರಾ ಮಾತನಾಡಿ, ಜನಸಂಖ್ಯೆ ಬೆಳವಣಿಗೆಗೆ ಅನುಗುಣವಾಗಿ ಸಂಪನ್ಮೂಲಗಳು, ಉದ್ಯೋಗಾವಕಾಶಗಳು ಕೊರತೆ, ಬಡತನ ಮತ್ತು ನಿರುದ್ಯೋಗಕ್ಕೆ ಕಾರಣವಾಗುತ್ತಿದೆ. ಜನಸಂಖ್ಯಾ ಏರಿಕೆಯ ಕಾರಣವನ್ನು ಮತ್ತು ಅವುಗಳಿಂದ ಉಂಟಾಗುವ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದರು.
ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ, ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್, ತಹಶೀಲ್ದಾರ್ ಪ್ರಶಾಂತ್ ವಿ. ಪಾಟೀಲ್, ಆಗ್ನೆಸ್ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಡಾ. ಎಂ ವೆನಿಸ್ಸಾ, ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕೆ. ಕಾರಗಿ, ಜಿಲ್ಲಾ ಕುಷ್ಟ ರೋಗ ನಿವಾರಣಾಧಿಕಾರಿ ಡಾ. ಸುದರ್ಶನ್, ಸುರತ್ಕಲ್ ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ. ಕಿಶೋರ್ ಕುಮಾರ್ ಇದ್ದರು.ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಯೋಜನಾಧಿಕಾರಿ ಉದಯ್ ಕುಮಾರ್ ಸ್ವಾಗತಿಸಿದರು. ಕಾಲೇಜು ವಿದ್ಯಾರ್ಥಿನಿ ತಪಸ್ವಿ ನಿರೂಪಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ. ಉಳೆಪಾಡಿ ವಂದಿಸಿದರು.