ಕರಾವಳಿ ಕರ್ನಾಟಕ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು: ಪ್ರಧಾನ ಕಾರ್ಯದರ್ಶಿ ಸಲ್ಮಾ ಕೆ. ಫಹೀಂ

| Published : Feb 20 2025, 12:49 AM IST

ಕರಾವಳಿ ಕರ್ನಾಟಕ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು: ಪ್ರಧಾನ ಕಾರ್ಯದರ್ಶಿ ಸಲ್ಮಾ ಕೆ. ಫಹೀಂ
Share this Article
  • FB
  • TW
  • Linkdin
  • Email

ಸಾರಾಂಶ

ಬುಧವಾರ ಮಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಕೋಸ್ಟಲ್‌ ಕರ್ನಾಟಕ ಟೂರಿಸಂ ಡೆವಲಫ್‌ಮೆಂಟ್‌ ಕೌನ್ಸಿಲ್‌ ಮತ್ತು ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಕೋಸ್ಟಲ್‌ ಕರ್ನಾಟಕ ಟೂರಿಸಂ ಕಾರ್ಯಾಗಾರ ನೆರವೇರಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಪ್ರವಾಸೋದ್ಯಮ ಇಲಾಖೆಯಿಂದ ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕೇರಳ, ಗೋವಾ ರಾಜ್ಯಗಳಲ್ಲಿ ತೀರ ಪ್ರದೇಶಗಳಿಗೆ ನೀಡಿದ ಮಹತ್ವವನ್ನು ಕರ್ನಾಟಕದಲ್ಲಿ ನೀಡಿಲ್ಲ. ಆದರೆ ಇಲ್ಲೂ ಸಾಕಷ್ಟು ಅವಕಾಶಗಳಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಲ್ಮಾ ಕೆ. ಫಹೀಂ ಹೇಳಿದರು.ಅವರು ಬುಧವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಕೋಸ್ಟಲ್‌ ಕರ್ನಾಟಕ ಟೂರಿಸಂ ಡೆವಲಫ್‌ಮೆಂಟ್‌ ಕೌನ್ಸಿಲ್‌ ಮತ್ತು ಪ್ರವಾಸೋದ್ಯಮ ಇಲಾಖೆಯ ವತಿಯಿಂದ ನಡೆದ ಕೋಸ್ಟಲ್‌ ಕರ್ನಾಟಕ ಟೂರಿಸಂ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಸುಮಾರು 321 ಕಿ.ಮೀ. ಕರ್ನಾಟಕ ಕರಾವಳಿಯ ತೀರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ಅವಕಾಶ ಹೆಚ್ಚಿದೆ. ಸುಸ್ಥಿರತೆಯನ್ನು ಉಳಿಸಿಕೊಂಡು ಹೂಡಿಕೆದಾರರನ್ನು ಆಕರ್ಷಿಸುವ ಮೂಲಕ ಕರಾವಳಿ ತೀರದ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಬಹುದು. ಇಂತಹ ಕಾರ್ಯಾಗಾರದಲ್ಲಿ ಹೂಡಿಕೆದಾರರ ಜತೆಗೆ ಇತರರ ಜತೆಗೆ ಚರ್ಚೆ ನಡೆಸಿಕೊಂಡು ಅದಕ್ಕೊಂದು ರೂಪ ನೀಡುವ ಕೆಲಸವನ್ನು ಮಾಡಲಿದ್ದೇವೆ ಎಂದರು.ಟೂರಿಸಂಗೆ ರೋಡ್‌ ಮ್ಯಾಪ್‌:

ಕರಾವಳಿ ಕರ್ನಾಟಕದ ಬೀಚನ್ನು ಮ್ಯಾಪಿಂಗ್‌ ಮಾಡಿ, ನಾನಾ ವಲಯಗಳನ್ನಾಗಿ ಮಾಡಿ ಅವುಗಳಿಗೆ ಪೂರಕವಾಗಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕಾರ್ಯಯೋಜನೆ ರೂಪಿಸಲು ಉದ್ದೇಶಿಸಲಾಗಿದೆ. ಕರ್ನಾಟಕದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ಟೂರಿಸಂ ರೋಡ್‌ ಮ್ಯಾಪ್‌ ಸಿದ್ಧಗೊಳಿಸುವುದು ಉದ್ದೇಶಿಸಲಾಗಿದೆ. ಈ ಮೂಲಕ ಪ್ರವಾಸೋದ್ಯಮಕ್ಕೆ ಪೂರಕವಾದ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡಲಾಗಿದೆ ಎಂದರು.

ಕರಾವಳಿಗೆ ಮೆಗಾ ಟೂರಿಸಂ ಪ್ರಾಜೆಕ್ಟ್‌:

ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಡಾ.ರಾಜೇಂದ್ರ ಕೆ.ವಿ. ಮಾತನಾಡಿ, ಸಿಆರ್‌ಝಡ್‌ ಗೈಡ್‌ಲೇನ್‌ ಪ್ರಕಾರ ಪ್ರವಾಸೋದ್ಯಮಕ್ಕೆ ಪೂರಕವಾದ ಅವಕಾಶಗಳಿಗೆ ಇಂದು ಕರಾವಳಿ ತೆರೆದುಕೊಳ್ಳಬೇಕು. ಮೆಗಾ ಟೂರಿಸಂ ಪ್ರಾಜೆಕ್ಟ್‌ಗಳಿಗೆ ಗರಿಷ್ಠ 10 ಕೋಟಿ ರು.ಗಳ ವರೆಗೆ ಇಲಾಖೆಯಿಂದ ಹೂಡಿಕೆ ಸವಲತ್ತು ನೀಡಲು ಅವಕಾಶ ಇದೆ. ಈಗಾಗಲೇ ಡಿಜಿಟಲ್‌ ಪ್ಲ್ಯಾಟ್‌ ಫಾರ್ಮ್‌ ಮೂಲಕ ಪ್ರವಾಸಿ ಮಾರ್ಗದರ್ಶನ ವ್ಯವಸ್ಥೆಯನ್ನೂ ಇಲಾಖೆ ಮೂಲಕ ನಡೆಸಲು ತೀರ್ಮಾನಿಸಲಾಗಿದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು 2024-2029ರ ಟೂರಿಸಂ ನೀತಿಯನ್ನು ಸಿದ್ಧಗೊಳಿಸಲಾಗಿದೆ. ಈ ಮೂಲಕ ಕರಾವಳಿ ಟೂರಿಸಂನಲ್ಲಿ ಮೆಗಾ ಪ್ರಾಜೆಕ್ಟ್‌ಗಳ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಅಂತಾರಾಷ್ಟ್ರೀಯಯ ಪ್ರವಾಸೋದ್ಯಮ ಕೇಂದ್ರ ಚಿಂತನೆ: ಮಂಗಳೂರಿನಲ್ಲಿ ಅಂತಾರಾಷ್ಟ್ರೀಯಯ ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಇದಕ್ಕೆ ಪೂರಕವಾಗಿ ಸೋಮೇಶ್ವರದಲ್ಲಿ ದೇಶದಲ್ಲೇ ಮೊದಲ ಅಂತಾರಾಷ್ಟ್ರೀಯ ವಿಹಾರ ನೌಕಾಯಾನ ಬಂದರು, 1.5 ಎಕರೆ ಪ್ರದೇಶದಲ್ಲಿ ಕಡಲ ವಸ್ತುಸಂಗ್ರಹಾಲಯ, ಮಂಗಳೂರು ನೇತ್ರಾವತಿ ನದಿ ಬಳಸಿಕೊಂಡು ವಾಟರ್‌ಡ್ರೋಮ್‌ ಯೋಜನೆ ಸರ್ಕಾರದ ಹಂತದಲ್ಲಿದೆ. ಮಂಗಳೂರು ಮತ್ತು ಲಕ್ಷದ್ವೀಪದ ನಡುವೆ ಸಂಪರ್ಕ ಕಲ್ಪಿಸಲು ಸುಸಜ್ಜಿತ ಬಂದರು ನಿರ್ಮಾಣ ಪ್ರಸ್ತಾವನೆಗಳು ಆರಂಭಿಕ ಹಂತದಲ್ಲಿವೆ ಎಂದು ಕರ್ನಾಟಕ ಜಲಸಾರಿಗೆ ಮಂಡಳಿ ಸಿಇಒ ಜಯರಾಮ್‌ ರಾಯಪುರ ಹೇಳಿದರು.ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಇದ್ದರು. ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಸಿಆರ್‌ಝಡ್‌, ಕರ್ನಾಟಕ ಪ್ರವಾಸೋದ್ಯಮ ಸೊಸೈಟಿಯ ಅಧಿಕಾರಿಗಳು ಪ್ರವಾಸೋದ್ಯಮಕ್ಕೆ ಪೂರಕವಾದ ಮಾಹಿತಿ ನೀಡಿದರು.

ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಉಪನಿರ್ದೇಶಕ ದಿಲೀಪ್‌ ಕುಮಾರ್‌ ಕಾರ್ಯಕ್ರಮ ನಿರೂಪಿಸಿದರು.