ಚೀನಾ ಮತ್ತು ಜಪಾನ್ ದೇಶಗಳು ಕ್ರೀಡೆ ಮತ್ತು ವಿಜ್ಞಾನ ಕ್ಷೇತ್ರಕ್ಕೆ ಹೆಚ್ಚು ಮಹತ್ವ ನೀಡಿ ಪ್ರೋತ್ಸಾಹಿಸುತ್ತಿವೆ. ಆದರೆ, ಭಾರತದೇಶ ಮಾತ್ರ ಕ್ರೀಡೆ, ಆರೋಗ್ಯ, ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುತ್ತಿಲ್ಲ. ಪರಿಣಾಮ ಭಾರತದಲ್ಲಿ ಒಲಂಪಿಕ್ ಕ್ರೀಡಾಪಟುಗಳು ಪ್ರವರ್ಧಮಾನಕ್ಕೆ ಬರುತ್ತಿಲ್ಲ.
ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರಸ್ತುತ ದಿನಗಳಲ್ಲಿ ಭಾರತವು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಹೆಚ್ಚಿನ ಆರ್ಥಿಕ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಹೇಳಿದರು.ನಗರದಲ್ಲಿರುವ ಪ್ರತಿಭಾಂಜಲಿ ಸುಗಮ ಸಂಗೀತ ಆಕಾಡೆಮಿ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನ ಮತ್ತು ಕ್ರೀಡಾ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಚೀನಾ ಮತ್ತು ಜಪಾನ್ ದೇಶಗಳು ಕ್ರೀಡೆ ಮತ್ತು ವಿಜ್ಞಾನ ಕ್ಷೇತ್ರಕ್ಕೆ ಹೆಚ್ಚು ಮಹತ್ವ ನೀಡಿ ಪ್ರೋತ್ಸಾಹಿಸುತ್ತಿವೆ. ಆದರೆ, ಭಾರತದೇಶ ಮಾತ್ರ ಕ್ರೀಡೆ, ಆರೋಗ್ಯ, ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುತ್ತಿಲ್ಲ. ಪರಿಣಾಮ ಭಾರತದಲ್ಲಿ ಒಲಂಪಿಕ್ ಕ್ರೀಡಾಪಟುಗಳು ಪ್ರವರ್ಧಮಾನಕ್ಕೆ ಬರುತ್ತಿಲ್ಲ ಎಂದು ವಿಷಾದಿಸಿದರು.ವಿಶ್ವ ಮಟ್ಟದ ಒಲಂಪಿಕ್ಸ್‌ನಲ್ಲಿ ಒಟ್ಟು ೩೨ ಕ್ರೀಡೆಗಳಿದ್ದು, ಭಾರತವು ಕೇವಲ ೧೬ಕ್ರೀಡೆಗಳಲ್ಲಿ ಮಾತ್ರ ಭಾಗಿಯಾಗಿದೆ, ಉಳಿದ ಸ್ಪರ್ಧೆಗಳತ್ತ ಗಮನಹರಿಸುವುದೇ ಇಲ್ಲ, ಅದರಲ್ಲಿ ವಿದೇಶಿಯರು ಚಿನ್ನದ ಪದಕ ಪದಕ ಗೆದ್ದು ತಮ್ಮ ದೇಶದ ಕ್ರೀಡಾ ಸಾಧನೆಯನ್ನು ಮೆರೆಯುತ್ತಾರೆ, ಇನ್ನಾದರೂ ೨೦೨೮ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಮತ್ತು ಅದರಾಚೆಯ ೨೦೩೬ರಲ್ಲಿ ನಡೆಯುವ ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ಭಾರತ ಪ್ರತಿನಿಧಿಸಿ ಕ್ರೀಡಾ ಅಸ್ಮಿತೆಯನ್ನು ಮೆರೆಯಲಿ ಎಂದು ಒತ್ತಾಯಿಸಿದರು.
ಗ್ರಾಮೀಣ ಪ್ರತಿಭೆ ಎಂ.ಎಸ್.ಪುಣ್ಯ ಅವರು ಚಿಕ್ಕವಯಸ್ಸಿನಲ್ಲಿಯೇ ಉತ್ತಮ ಕ್ರೀಡಾ ಸಾಧನೆಯ ಗುರಿ ಇರಿಸಿಕೊಂಡು ರೈಫಲ್ ಶೂಟರ್ ಕ್ರೀಡೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ಚಿನ್ನದ ಪದಕ ಪಡೆದು ಮಂಡ್ಯ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಪ್ರತಿಭೆಗೆ ಉತ್ತೇಜನ ನೀಡಿದರೆ ದೊಡ್ಡ ಸಾಧಕರಾಗುತ್ತಾರೆ ಎನ್ನುವುದಕ್ಕೆ ಇದು ಸಾಕ್ಷಿ ಎಂದರು.ಇದೇ ಸಂದರ್ಭದಲ್ಲಿ ರೈಪಲ್ ಶೂಟರ್ ಕ್ರೀಡೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ಚಿನ್ನದಪದಕ ಪಡೆದ ಗ್ರಾಮೀಣ ಪ್ರತಿಭೆ ಎಂ.ಎಸ್.ಪುಣ್ಯ ಅವರಿಗೆ ಕ್ರೀಡಾರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರತಿಭಾಂಜಲಿ ಸುಗಮ ಸಂಗೀತ ಆಕಾಡೆಮಿ ಅಧ್ಯಕ್ಷ ಪ್ರೊ.ಡೇವಿಡ್, ಅಲಯನ್ಸ್ ಸಂಸ್ಥೆ ೧ನೇ ಜಿಲ್ಲಾ ಉಪರಾಜ್ಯಪಾಲ ಚಂದ್ರಶೇಖರ್, ಜಿಲ್ಲಾ ಸಂಪುಟಕಾರ್ಯದರ್ಶಿ ಧನಂಜಯ, ಕನ್ನಿಕ ಶಿಲ್ಪ ನವೋದಯ ಕೇಂದ್ರದ ಮುಖ್ಯಸ್ಥೆ ಎಚ್.ಆರ್.ಕನ್ನಿಕಾ, ಪದಾಧಿಕಾರಿಗಳಾದ ಪಾಪಯ್ಯ, ಪವಿತ್ರಾ, ಪ್ರೀತಿ, ರಂಜಿನಿ ಮತ್ತು ಪ್ರತಿಭಾಂಜಲಿ ಗಾಯಕರು ಪಾಲ್ಗೊಂಡಿದ್ದರು.