ಸಾರಾಂಶ
ಸಮುದಾಯವನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಸಬಲೀಕರಣಗೊಳಿಸಲು ಸಂಬಂಧಿಸಿದ ಸರ್ಕಾರದ ಇಲಾಖೆಗಳ ಜೊತೆಗೂಡಿ ಕೆಲಸ ಮಾಡುತ್ತಾ ಬಂದಿದ್ದೇವೆ.
ಜೋಯಿಡಾ: ಕೇಂದ್ರ ಸರ್ಕಾರದ ನೀತಿ ಆಯೋಗದಿಂದ ಅಭಿವೃದ್ಧಿ ಆಕಾಂಕ್ಷಿ ತಾಲೂಕು ಎಂದು ಘೋಷಣೆಯಾದ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆಯೂ ಎಲ್.ಟಿ.ಐ ಮೈಂಡ್ ಟ್ರೀ ಸಹಕಾರದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಸ್ಟೇರಿಂಗ್ ಕಮಿಟಿ ಸದಸ್ಯ ಡಾ. ಗೋಪಾಲಕೃಷ್ಣ ಕಮಲಾಪುರ ಹೇಳಿದರು.
ಅವರು ಜೋಯಿಡಾದಲ್ಲಿ ಪತ್ರಕರ್ತರೊಡನೆ ಮಾತನಾಡುತ್ತಾ, ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆಯನ್ನು ಜೋಯಿಡಾದಲ್ಲಿ ನಾಲ್ಕು ವರ್ಷದ ಕಾಲಾವಧಿಗಾಗಿ ಆರೋಗ್ಯ, ಶಿಕ್ಷಣ, ಸಬಲೀಕರಣ ಮತ್ತು ಪರಿಸರ ವಿಭಾಗದಲ್ಲಿ ನೀತಿ ಆಯೋಗವು ಸೂಚಿಸಿದ ಅಭಿವೃದ್ಧಿ ಸೂಚಾಂಕಗಳ ಗುರಿ ಸಾಧಿಸಲಾಗಿದೆ. ಜೊತೆಗೆ ಸಮುದಾಯವನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಸಬಲೀಕರಣಗೊಳಿಸಲು ಸಂಬಂಧಿಸಿದ ಸರ್ಕಾರದ ಇಲಾಖೆಗಳ ಜೊತೆಗೂಡಿ ಕೆಲಸ ಮಾಡುತ್ತಾ ಬಂದಿದ್ದೇವೆ. ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆಯು ಜೋಯಿಡಾ ತಾಲೂಕಿನ ಆಯ್ದ ೮ ಗ್ರಾಪಂಗಳಲ್ಲಿ ೫೨ ಹಳ್ಳಿಗಳು ೬೮೭೫ ಕುಟುಂಬಗಳು ಹಾಗೂ ೨೯,೦೪೫ ಸಾವಿರ ಜನರಿಗೆ ಸಂಸ್ಥೆಯು ತನ್ನ ಸೇವೆಯನ್ನು ನೀಡುತ್ತಿದೆ ಎಂದರು.ಯೋಜನಾ ನಿರ್ದೇಶಕ ಚಂದ್ರಶೇಖರ ಸೋಪ್ಪಿಮಠ ಮಾತನಾಡಿದರು. ಸಂಸ್ಥೆಯ ಸಿಬ್ಬಂದಿ ಸಚಿನ ತಳೀಕರ ಇದ್ದರು.