ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ದೊಡ್ಡ ಸ್ಥಾನಮಾನ: ಜಿ.ಎನ್.ಅನುಸೂಯ

| Published : Mar 10 2025, 12:16 AM IST

ಸಾರಾಂಶ

ಮಹಿಳಾ ದಿನಾಚರಣೆ ಆಚರಿಸಿದ ಮಾತ್ರಕ್ಕೆ ಮಹಿಳೆಯರಿಗೆ ಶಕ್ತಿ ತುಂಬಿದಂತಾಗುವುದಿಲ್ಲ. ಹೆಣ್ಣನ್ನು ಕೆಲ ವಿಚಾರಗಳಲ್ಲಿ ಕಟ್ಟುಪಾಡಿಗೆ ನೂಕುವುದು ಸರಿಯಲ್ಲ. ನಮ್ಮ ಮನೆ ಹೆಣ್ಣು ಮಕ್ಕಳಿಗೆ ಗೌರವ ಕೊಡುವಂತೆ ಇತರೆ ಹೆಣ್ಣು ಮಕ್ಕಳನ್ನೂ ಸಹ ಗೌರವಿಸಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯವಾಗುತ್ತದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ದೊಡ್ಡ ಸ್ಥಾನಮಾನ ನೀಡಲಾಗಿದೆ. ಹೆಣ್ಣು ಎಂದರೆ ತಾಳ್ಮೆಯ ಸ್ವರೂಪ ಎಂದು ಚನ್ನರಾಯಪಟ್ಟಣದ ನಿವೃತ್ತ ಪ್ರಾಂಶುಪಾಲೆ ಜಿ.ಎನ್.ಅನುಸೂಯ ಅಭಿಪ್ರಾಯಪಟ್ಟರು.

ಪಟ್ಟಣದ ಶಿಕ್ಷಕರ ಭವನದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ, ಮಾಡಿದ ತಪ್ಪನ್ನು ತಪ್ಪು ಎಂದು ಒಪ್ಪಿಕೊಳ್ಳುವ ಔದಾರ್ಯ ಹೊಂದಿರುವವಳು ಹೆಣ್ಣು.

ಯಾವುದೇ ಸಮಸ್ಯೆಗಳು ಬಂದರೆ ಅವುಗಳನ್ನು ತಾಳ್ಮೆ, ಸಹನೆ ಮತ್ತು ಸಂಯಮದಿಂದ ನಿಭಾಯಿಸುವ ವಿಶೇಷ ಕೌಶಲ ಮಹಿಳೆಯರಲ್ಲಿದೆ ಎಂದರು.

ನಿವೃತ್ತ ಶಿಕ್ಷಕ ಬಿ.ಎಂ.ಪ್ರಕಾಶ್ ಮಾತನಾಡಿ, ಮಹಿಳಾ ದಿನಾಚರಣೆ ಆಚರಿಸಿದ ಮಾತ್ರಕ್ಕೆ ಮಹಿಳೆಯರಿಗೆ ಶಕ್ತಿ ತುಂಬಿದಂತಾಗುವುದಿಲ್ಲ. ಹೆಣ್ಣನ್ನು ಕೆಲ ವಿಚಾರಗಳಲ್ಲಿ ಕಟ್ಟುಪಾಡಿಗೆ ನೂಕುವುದು ಸರಿಯಲ್ಲ. ನಮ್ಮ ಮನೆ ಹೆಣ್ಣು ಮಕ್ಕಳಿಗೆ ಗೌರವ ಕೊಡುವಂತೆ ಇತರೆ ಹೆಣ್ಣು ಮಕ್ಕಳನ್ನೂ ಸಹ ಗೌರವಿಸಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜೆ.ವೈ.ಮಂಜುನಾಥ್ ಮಾತನಾಡಿ, ಮಕ್ಕಳ ಪೋಷಣೆ, ಕುಟುಂಬ ನಿರ್ವಹಣೆ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಮಹಿಳೆಯರನ್ನೇ ನೇಮಿಸಿಕೊಳ್ಳಲಾಗುತ್ತಿದೆ. ಎಷ್ಟೇ ಕೆಲಸದ ಒತ್ತಡವಿದ್ದರೂ ಎಲ್ಲವನ್ನೂ ನಿಭಾಯಿಸುವ ವಿಶೇಷ ಶಕ್ತಿ ಸ್ತ್ರೀಯರಲ್ಲಿದೆ ಎಂದರು.

ವಿವಿಧ ಇಲಾಖೆಗಳಿಂದ ಆಯ್ಕೆ ಮಾಡಿದ್ದ 18 ಮಂದಿ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಯನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಬಿಇಒ ಕೆ.ಯೋಗೇಶ್, ಕ್ಷೇತ್ರ ಸಮನ್ವಯಾಧಿಕಾರಿ ಕೆ.ರವೀಶ್, ಡಯಟ್‌ನ ಹಿರಿಯ ಉಪನ್ಯಾಸಕಿ ನಿರ್ಮಲ, ಸಾವಿತ್ರಿಬಾಯಿಪುಲೆ ಸಂಘದ ಜಿಲ್ಲಾಧ್ಯಕ್ಷೆ ಸರಸ್ವತಿ, ಎಆರ್‌ಟಿಒ ಕಚೇರಿಯ ನಿರೀಕ್ಷಕಿ ಶಬಾನಾ ಬಾನು, ತಾಲೂಕು ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಕೆ.ಎನ್.ಮಧುಸೂಧನ್, ತಾಲೂಕು ಆರೋಗ್ಯಾಧಿಕಾರಿ ಡಾ.ನಾರಾಯಣ, ಡಾ.ಆದಿತ್ಯ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಮಂಜುನಾಥ್, ಅರಣ್ಯಾಧಿಕಾರಿ ಶಿವರಾಂ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಕೆ.ರುದ್ರೇಶ್, ಉಪಾಧ್ಯಕ್ಷೆ ಸುನಿತ ಸೇರಿದಂತೆ ನೂರಾರು ಮಂದಿ ಮಹಿಳಾ ಶಿಕ್ಷಕರು ಹಾಗೂ ವಿವಿಧ ಇಲಾಖೆಗಳ ಮಹಿಳಾ ಸಿಬ್ಬಂದಿ ಇದ್ದರು.