ಪ್ರಾರಂಭವಾಗದ ಹೆಸರು ಖರೀದಿ ಕೇಂದ್ರ, ರೈತರಿಗೆ ಸಂಕಷ್ಟ

| Published : Oct 10 2025, 01:01 AM IST

ಪ್ರಾರಂಭವಾಗದ ಹೆಸರು ಖರೀದಿ ಕೇಂದ್ರ, ರೈತರಿಗೆ ಸಂಕಷ್ಟ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರವು ಹೆಸರು ಕಾಳನ್ನು ಪ್ರತಿ 1 ಕ್ವಿಂಟಲ್‌ಗೆ ₹8768ರಂತೆ ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವುದಾಗಿ ಕಳೆದ ಸೆ. 25ರಂದು ಆದೇಶ ಹೊರಡಿಸಿದೆ. ಅಧಿಕಾರಿಗಳು ಮಾತ್ರ ಬೆಂಬಲ ಬೆಲೆ ಕೇಂದ್ರ ಪ್ರಾರಂಭ ಮಾಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಎಸ್.ಜಿ. ತೆಗ್ಗಿನಮನಿ

ನರಗುಂದ: ಬೆಂಬಲ ಬೆಲೆಯಡಿ ಹೆಸರು ಖರೀದಿ ಕೇಂದ್ರ ತೆರೆಯಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದರೂ ಇನ್ನೂ ಖರೀದಿ ಕೇಂದ್ರ ಪ್ರಾರಂಭವಾಗಿಲ್ಲ. ಇದರಿಂದ ಹೆಸರು ಬೆಳೆಗಾರರು ಕಂಗಾಲಾಗಿದ್ದಾರೆ.

ತಾಲೂಕಿನಲ್ಲಿ ಈ ಬಾರಿ ಮುಂಗಾರು ಹಂಗಾಮಿನಲ್ಲಿ ಸುಮಾರು 16 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಿದ್ದರು. ಮಳೆಯೂ ಉತ್ತಮವಾಗಿ ಸುರಿದಿತ್ತು. ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಕಟಾವಿನ ವೇಳೆ ನಿರಂತರವಾಗಿ ವಿಪರೀತ ಮಳೆ ಸುರಿಯಿತು. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಯಿತು.

ಆದರೂ ಅಳಿದುಳಿದ ಫಸಲನ್ನು ಮಾರಾಟ ಮಾಡಲು ಮಾರುಕಟ್ಟೆಗೆ ಹೋದರೆ ವ್ಯಾಪಾರಸ್ಥರು ಕಡಿಮೆ ಬೆಲೆ ಅಂದರೆ ಕ್ವಿಂಟಲ್‌ ಹೆಸರಿಗೆ ₹2ರಿಂದ ₹3 ಸಾವಿರಕ್ಕೆ ಕೇಳುತ್ತಾರೆ. ಹೀಗಾಗಿ ಅನಿವಾರ್ಯವಾಗಿ ಬೆಂಬಲ ಬೆಲೆಯಡಿ ತೆರೆಯುವ ಖರೀದಿ ಕೇಂದ್ರದಲ್ಲಿ ಹೆಸರು ಮಾರಾಟ ಮಾಡಲು ರೈತರು ನಿಶ್ಚಯಿಸಿದ್ದಾರೆ. ಆದರೆ ಇಲ್ಲಿಯವರೆಗೂ ಖರೀದಿ ಕೇಂದ್ರ ಪ್ರಾರಂಭವಾಗದಿರುವುದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಿದೆ.

ಕೇಂದ್ರ ಸರ್ಕಾರವು ಹೆಸರು ಕಾಳನ್ನು ಪ್ರತಿ 1 ಕ್ವಿಂಟಲ್‌ಗೆ ₹8768ರಂತೆ ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವುದಾಗಿ ಕಳೆದ ಸೆ. 25ರಂದು ಆದೇಶ ಹೊರಡಿಸಿದೆ. ಅಧಿಕಾರಿಗಳು ಮಾತ್ರ ಬೆಂಬಲ ಬೆಲೆ ಕೇಂದ್ರ ಪ್ರಾರಂಭ ಮಾಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಎಫ್ಎಕ್ಯು ಗುಣಮಟ್ಟದ ಹೆಸರು ಕಾಳನ್ನು ಪ್ರತಿ 1 ಎಕರೆಗೆ 3 ಕ್ವಿಂಟಲ್‌ನಂತೆ ಒಬ್ಬ ರೈತರಿಂದ ಗರಿಷ್ಠ 15 ಕ್ವಿಂಟಲ್‌ ಉತ್ಪನ್ನವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಆದೇಶ ಮಾಡಿ 15 ದಿನ ಗತಿಸಿದೆ. ಆದರೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧಿಕಾರಿಗಳು ಹೆಸರು ಖರೀದಿಗೆ ನೋಂದಣಿ ಪ್ರಕ್ರಿಯೆಯನ್ನೂ ಪ್ರಾರಂಭಿಸಿಲ್ಲ. ಇದರಿಂದ ರೈತರಿಗೆ ಅಧಿಕಾರಿಗಳು ಅನ್ಯಾಯ ಮಾಡುತ್ತಿದ್ದಾರೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ವೈ. ಮೇಟಿ ಆರೋಪಿಸಿದ್ದಾರೆ.

ಕೃಷಿ ಉತ್ಪನ್ನಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ನಿರಂತರ ಖರೀದಿ ಕೇಂದ್ರ ಪ್ರಾರಂಭಿಸಬೇಕೆಂದು ಈಗಾಗಲೇ ಕೋರ್ಟ್ ಆದೇಶ ಮಾಡಿದೆ. ಆದರೂ ಸರ್ಕಾರ ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ರಾಜ್ಯ ರೈತ ಸೇನಾ ಸಂಘಟನೆಯ ಕಾರ್ಯದರ್ಶಿ ಎಸ್.ಬಿ. ಜೋಗಣ್ಣವರ ತಿಳಿಸಿದ್ದಾರೆ.

ಶೀಘ್ರ ಆರಂಭ: ಬೆಂಬಲ ಬೆಲೆಯಲ್ಲಿ ರೈತರು ಹೆಸರು ಮಾರಾಟ ಮಾಡಲು ನೋಂದಣಿ ಸಾಫ್ಟವೇರ್‌ಅನ್ನು ಬದಲಾ‍ವಣೆ ಮಾಡಲಾಗಿದೆ. ಇದರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭಿಸುವಲ್ಲಿ ವಿಳಂಬವಾಗಿದೆ. 2 ದಿನದಲ್ಲಿ ಹೆಸರು ಖರೀದಿಸಲು ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ತಾಲೂಕು ವ್ಯವಸ್ಥಾಪಕ ಸಚಿನ ಪಾಟೀಲ ತಿಳಿಸಿದರು.