ಸಾರಾಂಶ
ಕನ್ನಡಪ್ರಭ ವಾರ್ತೆ, ಚಿತ್ರದುರ್ಗಇಲ್ಲಿನ ಬಸವಕೇಂದ್ರ ಮರುಘಾಮಠದಲ್ಲಿ ಬುಧವಾರ ನಡೆದ ಸರಳ ಸಾಮೂಹಿಕ ವಿವಾಹ ಅಕ್ಷರಶಃ ಹಸಿರು ಮಾಂಗಲ್ಯವಾಗಿ ಗೋಚರಿಸಿತು. ದಾಂಪತ್ಯ ಜೀವನಕ್ಕೆ ಅಡಿ ಇಟ್ಟ ವಧೂವರರು ಸಸಿ ನೆಟ್ಟು ಪರಿಸರ ಜಾಗೃತಿಗೆ ದನಿಯಾಗಿ, ನಮ್ಮ ಮನೆಗಳಲ್ಲೂ ಸಸಿ ನೆಟ್ಟು ಪರಿಸರ ಕಾಯ್ದುಕೊಳ್ಳುವ ಪ್ರತಿಜ್ಞೆ ಸ್ವೀಕರಿಸಿದರು.
ವಿವಾಹ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಬಸವಕುಮಾರ ಸ್ವಾಮೀಜಿ, ದಾಂಪತ್ಯವೆನ್ನುವುದು ಬದುಕಿನ ಹಾದಿಯಾಗಿದ್ದು ಗಂಡ-ಹೆಂಡತಿ ಚಿಕ್ಕಪುಟ್ಟ ವಿಷಯಗಳಿಗೆ ಜಗಳವಾಡಬಾರದು. ಅದು ಸಂಸಾರದ ಕಲಹಕ್ಕೆ ಹಾದಿ ಮಾಡಿಕೊಡುತ್ತದೆ, ಒಬ್ಬರಿಗೊಬ್ಬರು ಅರ್ಥೈಸಿಕೊಂಡು ಬಾಳಬೇಕು ಎಂದು ಹೇಳಿದರು.ವಿವಾಹವೆನ್ನುವುದು ಜೀವನದ ಅತಿಮುಖ್ಯ ಘಟ್ಟವಾಗಿದ್ದು, ಇಲ್ಲಿ ಅನ್ಯೋನ್ಯತೆ ಮುಖ್ಯ. ನಮ್ಮಲ್ಲಿರುವ ದುರ್ಗುಣಗಳನ್ನು ಬಿಟ್ಟು ಒಳ್ಳೆಯತನವನ್ನು ಬೆಳೆಸಬೇಕು. ಸಾಂಸಾರಿಕ ಕಲಹಗಳನ್ನು ಕಡಿಮೆ ಮಾಡಿಕೊಂಡಲ್ಲಿ ಬದುಕು ಹಸನಾಗುತ್ತದೆ ಎಂದು ಸ್ವಾಮಿಗಳು ತಿಳಿಸಿದರು.
ಮುರುಘಾಮಠದ ವತಿಯಿಂದ ಕಳೆದ ಒಂದುವಾರದಲ್ಲಿ ವಿವಿಧೆಡೆ ಸಸಿ ನೆಟ್ಟು ಪರಿಸರ ದಿನ ಆಚರಿಸಲಾಗಿದೆ. ಕಳೆದ 20 ವರ್ಷಗಳ ಹಿಂದೆ ಇದೇ ದಿನ ಅಮಾವಾಸ್ಯೆ ದಿನದಂದು ಮುರುಘಾಮಠದಲ್ಲಿ 101 ಜೋಡಿ ವಿವಾಹವಾಗಿರುವುದು ದಾಖಲೆ ಸರಿ.ಸಾಮೂಹಿಕ ಮದುವೆಯಲ್ಲಿ ಆದರ್ಶ, ಸಾಮೂಹಿಕ ಬದ್ಧತೆ, ನಾಯಕತ್ವದಲ್ಲಿ ಮೌಲ್ಯಗಳು ಇರುತ್ತವೆ. ಇದನ್ನು ಸಂಕುಚಿತ ಮನೋಭಾವದಿಂದ ನೋಡಬಾರದು. ಸಾಲದ ಸುಳಿಯಿಂದ ಹೊರಬರಬೇಕೆಂದರೆ ಇಂತಹ ಆದರ್ಶ ಮದುವೆಗೆ ಒಳಗಾಗಬೇಕು. ಬಸವಾದಿ ಶರಣರ ತತ್ವಾದರ್ಶಗಳ ಮೇಲೆ ಶ್ರೀಮಠದಲ್ಲಿ ವಿವಾಹಗಳು ನೆರವೇರುತ್ತವೆ ಎಂದರು.
ಡಾ.ಬಸವಪ್ರಭು ಸ್ವಾಮಿಗಳು ಮಾತನಾಡಿ, ಬದುಕು ಸ್ವರ್ಗವಾಗಬೇಕಾದರೆ ಸತಿಪತಿಗಳು ಪ್ರೀತಿ, ಅನ್ಯೋನ್ಯತೆಯಿಂದ ಬದುಕು ಕಟ್ಟಿಕೊಳ್ಳುವ ಮೂಲಕ ನೆಮ್ಮದಿ ಅರಸಬೇಕು. ಶಾಂತ ಮನಸ್ಥಿತಿಗೆ ಒಳಗಾಗಬೇಕು. ಇಡೀ ಮಾನವಕುಲಕ್ಕೆ ಪರಿಸರವೇ ತಂದೆ-ತಾಯಿ. ಅಂಥ ಪರಿಸರವನ್ನು ಕಾಪಾಡಿ ಮುಂದಿನ ಪೀಳಿಗೆಗೆ ಒಳಿತು ಮಾಡಬೇಕೆಂದರು.ಶ್ರೀ ಬಸವನಾಗಿದೇವ ಸ್ವಾಮಿಗಳು ಮಾತನಾಡಿ, ಜೀವನದಲ್ಲಿ ನೋವು, ನಲಿವು ಯಾರನ್ನೂ ಬಿಟ್ಟಿಲ್ಲ. ನಮ್ಮ ಜೀವನ ಕ್ರಮ ಸರಿಯಾಗಿ ಇಟ್ಟುಕೊಳ್ಳಬೇಕು. ಬಸವ ತತ್ವದ ಆಧಾರದ ಮೇಲೆ ಇಲ್ಲಿ ಕಲ್ಯಾಣ ಮಹೋತ್ಸವ ನಡೆಯುತ್ತಿದೆ. ಬಸವಾದಿ ಶರಣರ ಜಯಂತಿಗಳು ಆಗಿರುವ ಈ ಜಾಗದಲ್ಲಿ ಕಲ್ಯಾಣ ಮಹೋತ್ಸವ ನಡೆಯುತ್ತಿರುವುದು ಸಂತೋಷದ ಸಂಗತಿ. ನವ ವಧುವರರು ಈ ಸಂದರ್ಭಕ್ಕೆ ಕಾರಣರಾಗಿದ್ದು ನೀವೆಲ್ಲ ಪುಣ್ಯವಂತರು ಎಂದರು.
ಕಾರ್ಯಕ್ರಮದಲ್ಲಿ 10 ನವ ಜೋಡಿಗಳ ವಿವಾಹ ನೆರವೇರಿತು. ನೂತನ ವಧು-ವರರು ಪರಿಸರ ದಿನದ ಅಂಗವಾಗಿ ಸಸಿಗಳನ್ನು ನೆಟ್ಟರು.ಈ ವೇಳೆ 2008ರಿಂದ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಪ್ರತಿವರ್ಷ ನಾಗಲಿಂಗ ಪುಷ್ಪ ಸಸಿಗಳನ್ನು ಉಚಿತವಾಗಿ ವಿತರಿಸುತ್ತಿರುವ ಕಾಶಿ ವಿಶ್ವನಾಥ ಸಂತೇಬೆನ್ನೂರು ಅವರನ್ನು ಸನ್ಮಾನಿಸಲಾಯಿತು.