ದೇಶದ ಆಹಾರ ಭದ್ರತೆಗೆ ಹಸಿರು ಕ್ರಾಂತಿ ಕಾರಣ: ಎಂ.ಮಹೇಶ್‌

| Published : Mar 29 2024, 12:48 AM IST

ಸಾರಾಂಶ

ತರೀಕೆರೆ ಸಮೀಪದ ಬಾವಿಕೆರೆ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಕೃಷಿ ಮೇಳ ಮತ್ತು ವಸ್ತು ಪ್ರದರ್ಶನ ಕಾರ್ಯಾಕ್ರಮ ದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಉಪಾಧ್ಯಕ್ಷರಾದ ಎಂ.ಮಹೇಶ್ ಅವರು ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ತರೀಕೆರೆ

ದೇಶದ ಆಹಾರ ಭದ್ರತೆಗೆ ಹಸಿರು ಕ್ರಾಂತಿಯೇ ಕಾರಣ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಉಪಾಧ್ಯಕ್ಷರಾದ ಎಂ.ಮಹೇಶ್‌ ಹೇಳಿದರು.

ಅವರು, ಸಮೀಪದ ಬಾವಿಕೆರೆ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ ಇರುವಕ್ಕಿ ಕೃಷಿ ಮಹಾ ವಿದ್ಯಾಲಯ ಶಿವಮೊಗ್ಗ, ಕೃಷಿ ಇಲಾಖೆ ತರೀಕೆರೆ ಇವರ ಆಶ್ರಯದಲ್ಲಿ ಏರ್ಪಡಿಸಿದ್ದ ಕೃಷಿ ಮೇಳ ಮತ್ತು ಕೃಷಿ ವಸ್ತು ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ದೇಶದ 140 ಕೋಟಿ ಜನಸಂಖ್ಯೆ ಇವತ್ತು ಯಾವುದೇ ಆಹಾರದ ಕೊರತೆಯನ್ನು ಕಾಣದಿರುವುದಕ್ಕೆ ಸ್ವಾಮಿನಾಥನ್‌ರವರ ಅಂದಿನ ಹಸಿರು ಕ್ರಾಂತಿಯೇ ಕಾರಣ ಎಂದು ಹೇಳಿದರಲ್ಲದೆ, ಪ್ರಸ್ತುತ ರೈತನ ಪರಿಸ್ಥಿತಿ ಮತ್ತು ವ್ಯವಸಾಯ ಪದ್ಧತಿಗಳ ಕುರಿತೂ ಮಾತನಾಡಿದರು.

ಶಿವಮೊಗ್ಗ ಕೃಷಿ ಮಹಾವಿದ್ಯಾಲಯದ ಕುಲಪತಿಗಳಾದ ಡಾ.ಆರ್.ಸಿ.ಜಗದೀಶ್ ಅವರು ಕೃಷಿ ಮಳಿಗೆಗಳ ಉದ್ಘಾಟನೆಯನ್ನು ನೆರವೇರಿಸಿ ಗ್ರಾಮೀಣ ಕೃಷಿ ಕಾರ್ಯನುಭವ ಕಾರ್ಯಕ್ರಮದ ಕುರಿತು ಮಾತನಾಡಿ, ಗ್ರಾಮೀಣ ಕೃಷಿ ಕಾರ್ಯನುಭವದ ಸಂಯೋಜಕರಾದ ಡಾ.ಗಜೇಂದ್ರ ಟಿ.ಎಚ್. ಅವರು ಗ್ರಾಮೀಣ ಕೃಷಿ ಕಾರ್ಯನುಭವ ಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸಿ ಮಾತನಾಡಿ, ಗ್ರಾಮೀಣ ಕೃಷಿ ಕಾರ್ಯಕ್ರಮವು ಮೂರು ತಿಂಗಳ ಒಂದು ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳು ತಮಗೆ ನೀಡಿರುವ ಹಳ್ಳಿಯ ರೈತರೊಂದಿಗೆ ಉತ್ತಮ ಒಡನಾಟ ಬೆಳೆಸಿ ಅವರ ಅನುಭವದಿಂದ ಕೃಷಿಯ ಕುರಿತು ಜ್ಞಾನವನ್ನು ಪಡೆಯಬೇಕೆನ್ನುವುದು ಇದರ ಉದ್ದೇಶ ಎಂದು ತಿಳಿಸಿದರು.

ಬಾವಿಕೆರೆ ಗ್ರಾಮದ ಹಿರಿಯ ಸುಂದರ ಕುಮಾರ್ ಅವರು ಮಾತನಾಡಿ, ಕೃಷಿ ಹೊನಲು ಬೆಳಕಾಗಬೇಕು, ದೇಶದ ಅಭಿವೃದ್ಧಿಗೆ ಕೃಷಿ ಬಹಳ ಮುಖ್ಯ, ಅರಣ್ಯ ಬೆಳೆಗಳ ಮೇಲೆ ಇನ್ನೂ ಹೆಚ್ಚು ಸಂಶೋಧನೆ ನಡೆಸಬೇಕು ಮತ್ತು ಅರಣ್ಯ ಕೃಷಿ ಪದ್ದತಿಗಳ ಕುರಿತು ಮಾಹಿತಿ ನೀಡಬೇಕು, ಶ್ರೀಗಂಧ ರಕ್ಷಣೆ ಮಾಡಬೇಕು ಎಂದು ಅವರು ಹೇಳಿದರು.

ಅಮೃತಾಪುರದ ಶ್ರೀಗಂಧ ಬೆಳೆಗಾರರು ಹಾಗೂ ಪ್ರಗತಿಪರ ರೈತ ಎ.ಎಸ್.ಈಶ್ವರಪ್ಪ ಅವರು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿರುವ ಹವಾಮಾನ ವೈಪರಿತ್ಯ ದ ಕುರಿತು ಮಾತನಾಡಿದರು.

ಕರಕುಚ್ಚಿ ಗ್ರಾಮದ ರೈತರಾದ ಅರುಣಕುಮಾರ್ ಅವರು ಮಾತನಾಡಿ ಮನೆಗೆ ಬೇಕಾಗಿರುವ ತರಕಾರಿಗಳನ್ನು ಕೈತೋಟ ದಲ್ಲಿ ಬೆಳೆದು ಉಪಯೋಗಿಸುವು ದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹೇಳಿದರು.

ಕರಕುಚ್ಚಿಯ ಪ್ರಗತಿಪರ ರೈತರಾದ ನಾಗರಾಜ್ ಅವರು ಮಾತನಾಡಿ, ಸಾವಯವ ಕೃಷಿ ಹಾಗೂ ಜೀವಾಮೃತ ತಯಾರಿಕೆ ಮತ್ತು ಅದರ ಉಪಯೋಗದ ಬಗ್ಗೆ ಸಂಕ್ಷಿಪ್ತವಾಗಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.

ಪ್ರಗತಿ ಪರ ರೈತರಾದ ಬೇಲೇನಹಳ್ಳಿಯ ಸೋಮಶೇಖರ್ ಅವರು ಮಾತನಾಡಿ ಕೃಷಿ ಕಾಲೇಜಿನ ವಿದ್ಯಾರ್ಥಿನಿಯರು ನಮ್ಮ ಹಳ್ಳಿಯ ಜನರಿಗೆ ಕೃಷಿ ಬಗ್ಗೆ ಇರುವ ಆಧುನಿಕ ಮಾಹಿತಿ ಒದಗಿಸಿದರು ಎಂದು ಅವರು ಹೇಳಿದರು.

ಬಾವಿಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ವಸಂತ ಕುಮಾರಿ ಅವರು ಮಾತನಾಡಿ, ಶಾಲಾ ಮಕ್ಕಳಿಗೆ ಮಾದರಿಯ ಪಾಠಗಳನ್ನು ಹೇಳಿಕೊಡುತ್ತಿದ್ದರು. ವಿದ್ಯಾರ್ಥಿಗಳು ಕೈತೋಟದಲ್ಲಿ ನಾನಾ ಬಗೆಯ ತರಕಾರಿಗಳನ್ನು ಬೆಳೆಸಿದ್ದಾರೆ ಎಂದು ಅವರು ಹೇಳಿದರು.

ಕೆ.ಶಿ.ನಾ.ಕೃ.ತೋ.ವಿ.ವಿ ಯ ಶಿಕ್ಷಣ ನಿರ್ದೇಶಕರಾದ ಡಾ. ಹೆಮ್ಲಾ ನಾಯ್ಕ್ ಅವರು ಮಾತನಾಡಿದರು.

ಶಿವಮೊಗ್ಗ ಕೃಷಿ ಮಹಾವಿದ್ಯಾಲಯದ ಡೀನ್ (ಕೃಷಿ) ಡಾ. ಆರ್. ಗಣೇಶ್ ನಾಯ್ಕ್, ಅಡಿಕೆ ಪ್ರಧಾನ ತನಿಕೆದಾರರಾದ ಡಾ. ನಾಗರಾಜಪ್ಪ ಅಡಿವಪ್ಪರ್, ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕೃಷಿವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.