ನರೇಗಲ್ಲ, ಕೂಸನೂರು ಏತ ನೀರಾವರಿ ಯೋಜನೆಗೆ ಗ್ರೀನ್‌ ಸಿಗ್ನಲ್‌

| Published : Sep 05 2025, 01:00 AM IST

ನರೇಗಲ್ಲ, ಕೂಸನೂರು ಏತ ನೀರಾವರಿ ಯೋಜನೆಗೆ ಗ್ರೀನ್‌ ಸಿಗ್ನಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಯೋಜನೆ ವ್ಯಾಪ್ತಿಯಲ್ಲಿ ಸುಮಾರು 302 ಎಕರೆಗಳಷ್ಟು ವಿಶಾಲ ಪ್ರದೇಶ ಹೊಂದಿರುವ, ಜಿಲ್ಲೆಯಲ್ಲಿಯೇ ಅತಿ ದೊಡ್ಡ ಕೆರೆ ಎನ್ನುವ ಹಿರಿಮೆಗೆ ಪಾತ್ರವಾದ ನರೇಗಲ್ಲ ಕೆರೆ ಸೇರಿದಂತೆ 111 ಕೆರೆಗಳ ಒಡಲು ಭರ್ತಿಯಾಗಲಿದ್ದು, ನೀರಾವರಿಯ ಹೊಂಗನಸು ಚಿಗುರೊಡೆದಿದೆ.

ಹಾನಗಲ್ಲ: ತಾಲೂಕಿನ ರೈತ ಸಮೂಹದ ಹಲವು ದಶಕಗಳ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿದ್ದು, ಮಹತ್ವಾಕಾಂಕ್ಷೆಯ ನರೇಗಲ್ಲ, ಕೂಸನೂರು ಏತ ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಮೂಲಕ ಯೋಜನೆಯ ಅಚ್ಚುಕಟ್ಟು ಪ್ರದೇಶದಲ್ಲಿ ಭರವಸೆ ಮೂಡಿಸಿದೆ.ಯೋಜನೆ ವ್ಯಾಪ್ತಿಯಲ್ಲಿ ಸುಮಾರು 302 ಎಕರೆಗಳಷ್ಟು ವಿಶಾಲ ಪ್ರದೇಶ ಹೊಂದಿರುವ, ಜಿಲ್ಲೆಯಲ್ಲಿಯೇ ಅತಿ ದೊಡ್ಡ ಕೆರೆ ಎನ್ನುವ ಹಿರಿಮೆಗೆ ಪಾತ್ರವಾದ ನರೇಗಲ್ಲ ಕೆರೆ ಸೇರಿದಂತೆ 111 ಕೆರೆಗಳ ಒಡಲು ಭರ್ತಿಯಾಗಲಿದ್ದು, ನೀರಾವರಿಯ ಹೊಂಗನಸು ಚಿಗುರೊಡೆದಿದೆ.

ಈಗಾಗಲೇ ಬಾಳಂಬೀಡ ಮತ್ತು ಹಿರೇಕಾಂಶಿ ಏತ ನೀರಾವರಿ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಂಡು ಜೀವನದಿ ವರದೆಯ ಮೂಲಕ ತಾಲೂಕಿನ 269 ಕೆರೆಗಳ ಒಡಲು ತುಂಬುತ್ತಿರುವುದು ವಿಶೇಷ. ಇದರ ಬೆನ್ನಲ್ಲೇ ₹220 ಕೋಟಿ ವೆಚ್ಚದ ನರೇಗಲ್ಲ, ಕೂಸನೂರು ಏತ ನೀರಾವರಿ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿರುವುದರಿಂದ ತಾಲೂಕಿನ ಗುಡ್ಡಗಾಡು ಭಾಗದ ಗ್ರಾಮಸ್ಥರು, ರೈತರಲ್ಲಿ ಸಂತಸ ಮನೆ ಮಾಡಿದೆ.ಪ್ರಮುಖವಾಗಿ ಏತ ನೀರಾವರಿ ಯೋಜನೆಯಿಂದ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಅನುಕೂಲವಾಗಲಿದೆ. ಅಂತರ್ಜಲವೂ ಮರುಪೂರಣವಾಗಲಿದೆ. ಕೃಷಿ ಚಟುವಟಿಕೆಗಳಿಗೂ ಬಲ ಬರಲಿದೆ. ನರೇಗಲ್ಲ ಏತ ನೀರಾವರಿ ಯೋಜನೆಯಿಂದ ನರೇಗಲ್ಲ ಕೆರೆ ಸೇರಿದಂತೆ ಆ ಭಾಗದ 9 ಕೆರೆಗಳು, ಕೂಸನೂರು ಏತ ನೀರಾವರಿ ಯೋಜನೆಯಿಂದ ಕೂಸನೂರು ಭಾಗದ 101 ಕೆರೆಗಳು ವರದಾ ನದಿಯಿಂದ ತುಂಬಲಿದ್ದು, ಜಲ ಸಮೃದ್ಧಿ ನಿರೀಕ್ಷಿಸಲಾಗುತ್ತಿದೆ. ಒಟ್ಟಾರೆ ವರದಾ ನದಿಯ 664 ದಶಲಕ್ಷ ಘನ ಅಡಿ ನೀರು ಬಳಕೆಯ ಉದ್ದೇಶ ಹೊಂದಲಾಗಿದೆ.ಬೇಡಿಕೆ ನಿನ್ನೆ, ಮೊನ್ನೆಯದ್ದಲ್ಲ: ನರೇಗಲ್ಲ, ಕೂಸನೂರು ಏತ ನೀರಾವರಿ ಯೋಜನೆ ಅನುಷ್ಠಾನದ ಕೂಗು ನಿನ್ನೆ, ಮೊನ್ನೆಯದ್ದಲ್ಲ. ತಾಲೂಕಿನಲ್ಲಿ ಗುಡ್ಡಗಾಡು ಭಾಗದ ಗ್ರಾಮಗಳ ಸಂಖ್ಯೆ ಹೆಚ್ಚಿವೆ. ಆದರೆ ಆ ಭಾಗದಲ್ಲಿ ನೀರಾವರಿ ಸೌಲಭ್ಯ ಇಲ್ಲದೇ ತೊಂದರೆ ಅನುಭವಿಸುವಂತಾಗಿತ್ತು. ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿತ್ತು. ಶಾಸಕ ಶ್ರೀನಿವಾಸ ಮಾನೆ ವಿಶೇಷ ಮುತುವರ್ಜಿ ವಹಿಸಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಕ್ರಿಯಾಯೋಜನೆ ರೂಪಿಸಿ, ಸಚಿವ ಸಂಪುಟದ ಆಡಳಿತಾತ್ಮಕ ಅನುಮೋದನೆ ಸಹ ದೊರಕಿಸುವಲ್ಲಿ ಯಶಸ್ವಿಯಾಗಿದ್ದು, ಪಕ್ಷಾತೀತವಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಕೆರೆಗಳ ವಿವರ: ವಾಸನ ಗ್ರಾಮದ 4 ಕೆರೆಗಳು, ಸೋಮಾಪುರ 2, ಬಸಾಪುರ ಎಂ. ಆಡೂರ 2, ಹಿರೇಹುಲ್ಲಾಳ 2, ಲಕ್ಮಾಪುರ 1, ತುಮರಿಕೊಪ್ಪ 1, ಚಿಕ್ಕಹುಲ್ಲಾಳ 1, ಕೂಸನೂರು 9. ಕನ್ನೇಶ್ವರ 2, ಕರೆಕ್ಯಾತನಹಳ್ಳಿ 7, ಮಾಳಾಪೂರ 4, ಕೆಲವರಕೊಪ್ಪ 7, ಕಲಕೇರಿ 8, ತಾವರಗೊಪ್ಪ 3, ಹೇರೂರು 2, ಬ್ಯಾಗವಾದಿ 5, ಉಪ್ಪುಣಸಿ 10, ಸೋಮಸಾಗರ 5, ಹಿರೇಬಾಸೂರು 2, ಗುಡ್ಡದಮುಳಥಳ್ಳಿ 8 ಮತ್ತು ಮುಳಥಳ್ಳಿಯ 4 ಕೆರೆಗಳಿಗೆ ವರದೆಯ ನೀರು ಹರಿದು ಬರಲಿದೆ.

ಶೀಘ್ರ ಭೂಮಿಪೂಜೆ: ನರೇಗಲ್ಲ, ಕೂಸನೂರು ಏತ ನೀರಾವರಿ ಯೋಜನೆಯ ಮೂಲಕ ಹಾನಗಲ್ಲ ತಾಲೂಕಿನ ಗುಡ್ಡಗಾಡು ಭಾಗದ ಕೆರೆಗಳನ್ನು ತುಂಬಿಸಬೇಕು ಎನ್ನುವ ಬೇಡಿಕೆ ಮೊದಲಿನಿಂದಲೂ ಇತ್ತು. ಇದೀಗ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ಕೆಲವೇ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಚಾಲನೆ ಪಡೆಯಲಿದೆ. ಶೀಘ್ರ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ಸಿದ್ಧತೆ ಆರಂಭ

ಗುಡ್ಡಗಾಡು ಭಾಗ ನೀರಾವರಿ ಸೌಲಭ್ಯದಿಂದ ವಂಚಿತವಾಗಿತ್ತು. ಸರಿಯಾಗಿ ನೀರು ಹರಿದು ಬರದ ಕಾರಣ ಕೆರೆಕಟ್ಟೆಗಳೆಲ್ಲವೂ ಭಣಗುಡುವಂತಾಗಿತ್ತು. ಇದೀಗ ನರೇಗಲ್ಲ, ಕೂಸನೂರು ಏತ ನೀರಾವರಿ ಯೋಜನೆಯ ಮೂಲಕ ಗುಡ್ಡಗಾಡು ಭಾಗ ಹಸಿರಿನಿಂದ ನಳನಳಿಸಲಿದೆ. ಯೋಜನೆಯ ಅನುಷ್ಠಾನಕ್ಕೆ ಅಗತ್ಯ ಸಿದ್ಧತೆಗಳು ಆರಂಭವಾಗಿವೆ.