ಕೋಳಘಟ್ಟದಲ್ಲಿ ಕಲ್ಲುಗಣಿಗಾರಿಕೆಗೆ ಹಸಿರು ನಿಶಾನೆ

| Published : Jul 29 2024, 12:54 AM IST

ಸಾರಾಂಶ

ವಿವಾದಕ್ಕೆ ಸಿಲುಕಿದ್ದ ಕೋಳಘಟ್ಟದ ಕಲ್ಲುಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್ ಆರಂಭಕ್ಕೆ ನ್ಯಾಯಾಲಯ ಹಸಿರ ನಿಶಾನೆ

ಕನ್ನಡಪ್ರಭವಾರ್ತೆ ತುರುವೇಕೆರೆ

ವಿವಾದಕ್ಕೆ ಸಿಲುಕಿದ್ದ ಕೋಳಘಟ್ಟದ ಕಲ್ಲುಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್ ಆರಂಭಕ್ಕೆ ನ್ಯಾಯಾಲಯ ಹಸಿರ ನಿಶಾನೆ ತೋರಿದ್ದು, ಇಂದಿನಿಂದ ಮತ್ತೆ ಕಾರ್ಯಾರಂಭ ಮಾಡಲಿದ್ದು ಕೋಳಘಟ್ಟದ ಸರ್ವೆ ನಂ ೬೫ ರ ೩ ಎಕರೆಯಲ್ಲಿ ಕಲ್ಲು ಪುಡಿ ಮಾಡುವ ಘಟಕ ಪ್ರಾರಂಭಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ ಎಂದು ಘಟಕದ ವ್ಯವಸ್ಥಾಪಕ ರಾಜೇಗೌಡ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, ಹೈಕೋರ್ಟಿನ ಮುಖ್ಯ ನ್ಯಾಯಾಧೀಶರ ಆದೇಶವನ್ನು ಪಾಲಿಸಿರುವ ಜಿಲ್ಲಾಧಿಕಾರಿಗಳು ನಡೆಸಿ ಟಾಸ್ಕ್ ಫೋರ್ಸ್ ಸಭೆಯಲ್ಲಿ ಕ್ರಷರ್ ನಡೆಸಲು ಮತ್ತು ಕಲ್ಲುಗಣಿಗಾರಿಕೆ ನಡೆಸಲು ಅನುಮತಿಯನ್ನು ನೀಡಿದ್ದಾರೆ. ಈ ಸಂಬಂಧ ಸೂಕ್ತ ಪೋಲಿಸ್ ಬಂದೋಬಸ್ತ್ ಸಹ ನೀಡಲು ಪೋಲಿಸ್ ಅಧಿಕಾರಿಗಳಿಗೂ ಸಹ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ಸಂಬಂಧ ಸೂಕ್ತ ರಕ್ಷಣೆ ನೀಡುವಂತೆ ಸ್ಥಳೀಯ ತಹಸೀಲ್ದಾರ್ ರವರಿಗೂ ಸೂಚನೆ ನೀಡಲಾಗಿದೆ. ಇದೇ ವೇಳೆ ಅದೇ ಗ್ರಾಮದ ಸರ್ವೇನಂ ೫೫, ೪೯/೧ ಮತ್ತು ೪೯/೨ ರಲ್ಲಿ ಸುಮಾರು ೩೦ ವರ್ಷಗಳ ಕಾಲ ಕಲ್ಲುಗಣಿಗಾರಿಕೆ ನಡೆಸಲು ಅನುಮತಿಯನ್ನೂ ಸಹ ನೀಡಲಾಗಿದೆ. ಈ ಸಂಬಂಧ ಹೈಕೋರ್ಟಿನಿಂದ ಆದೇಶ ಬಂದಿದ್ದು ಸೋಮವಾರದಿಂದ ಘಟಕವನ್ನು ಪ್ರಾರಂಭಿಸಲಾಗುವುದು. ಈ ಹಿಂದೆ ಕಲ್ಲು ಪುಡಿ ಘಟಕ ಸ್ಥಾಪನೆ ಮಾಡುವ ವೇಳೆ ಭೂಮಿಯ ಅತಿಕ್ರಮಣವಾಗಿತ್ತು ಎಂದು, ಪರಿಸರಕ್ಕೆ ಹಾನಿಯಾಗಲಿದೆ, ಜಮೀನುಗಳ ಒತ್ತುವರಿ ಮಾಡಲಾಗಿದೆ ಎಂದು ದೂರಿ ಗ್ರಾಮಸ್ಥರು ದೂರು ಸಲ್ಲಿಸಿದ್ದರು. ಎರಡು ಮೂರು ವರ್ಷಗಳ ಕಾಲ ವಾದವಿವಾದಗಳು ಆಗಿ ಸಮಸ್ಯೆ ಜಟಿಲವಾಗಿತ್ತು. ಈ ಸಂಬಂಧ ಹಲವಾರು ಮೊಕದ್ದಮೆಗಳೂ ಸಹ ಆಗಿವೆ ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸ್ಥಳೀಯ ತಹಸೀಲ್ದಾರ್, ಉಪ ವಿಭಾಗಾಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖಾ ಅಧಿಕಾರಿಗಳು, ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ ಪ್ರಾಧಿಕಾರ ಸಮಿತಿಯ ವರದಿಯನ್ವಯ ಕೋಳಘಟ್ಟದಲ್ಲಿ ಕಾನೂನು ವ್ಯಾಪ್ತಿಯಲ್ಲಿ ಕಲ್ಲು ಪುಡಿ ಮಾಡುವ ಘಟಕ ಪ್ರಾರಂಭ ಮಾಡಲು ಹಾಲಿ ಘಟಕದ ವ್ಯವಸ್ಥಾಪಕರು ಸೂಕ್ತ ಏರ್ಪಾಟು ಮಾಡಿಕೊಂಡಿರುವ ಕಾರಣ ಕಲ್ಲು ಪುಡಿ ಘಟಕ ಪ್ರಾರಂಭ ಮಾಡಲು ಯಾವುದೇ ತೊಂದರೆ ಇಲ್ಲವೆಂದು ವರದಿ ನೀಡಲಾಗಿತ್ತು. ಈ ಎಲ್ಲಾ ವರದಿಗಳ ಅನ್ವಯ ಕಲ್ಲುಗಣಿಗಾರಿಕೆ ಮತ್ತು ಜಲ್ಲಿ ಕಲ್ಲು ಪುಡಿ ಮಾಡುವ ಘಟಕ ಪ್ರಾರಂಭಿಸಲು ಹಸಿರು ನಿಶಾನೆ ತೋರಲಾಗಿದೆ ಎಂದು ರಾಜೂಗೌಡ ರವರು ತಿಳಿಸಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಸೂಕ್ತ ರಕ್ಷಣಾ ವ್ಯವಸ್ಥೆಯನ್ನೂ ಸಹ ಮಾಡಿ ಘಟಕ ಪ್ರಾರಂಭ ಮಾಡಲು ಜಿಲ್ಲಾಡಳಿತ ಕೋಳಘಟ್ಟದ ಜಲ್ಲಿ ಕ್ರಷರ್ ನ ಮಾಲೀಕರಿಗೆ ಸೂಚನೆ ನೀಡಿದೆ.