ಟೆಂಡರ್‌ ಕರೆಯದೇ ರಸ್ತೆ ರಿಪೇರಿಗೆ ಅಸ್ತು; ತಾರಕ್ಕೇರಿದ ಚರ್ಚೆ

| Published : Sep 19 2024, 01:58 AM IST

ಸಾರಾಂಶ

ತೀರ್ಥಹಳ್ಳಿ ಪಪಂ ಸಾಮಾನ್ಯ ಸಭೆಯಲ್ಲಿ ಮಳೆಗಾಲದಲ್ಲಿ ಹಾನಿಗೀಡಾದ 1.50 ಲಕ್ಷ ರು. ಮೊತ್ತದ ರಸ್ತೆ ರಿಪೇರಿ ಕಾಮಗಾರಿಯನ್ನು ಟೆಂಡರ್ ಕರೆಯದೇ ಗುತ್ತಿಗೆ ನೀಡಿ ಕೆಲಸ ಮಾಡಿಸಿದ ಬಗ್ಗೆ ಬಿಜೆಪಿ ಸದಸ್ಯ ಸಂದೇಶ್ ಜವಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೆ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಸ್ಥಳಿಯಾಡಳಿತದಲ್ಲಿ ಕೆಲಸ ಮಾಡುವ ಹಂತದಲ್ಲಿ ಸಾರ್ವಜನಿಕರ ಒತ್ತಡಕ್ಕೆ ಮಣಿದು ಕಾರ್ಯ ನಿರ್ವಹಿಸುವ ವಿಚಾರದ ಬಗ್ಗೆ ಸರ್ಕಾರದ ನಿಯಮ ಪಾಲನೆಯ ಸಂಬಂಧ ಬುಧವಾರ ನಡೆದ ಇಲ್ಲಿನ ಪ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯರ ನಡುವೆ ಪರ-ವಿರೋಧವಾಗಿ ಗಂಭೀರ ಚರ್ಚೆ ಹಾಗೂ ಮಾತಿನ ಚಕಮಕಿ ನಡೆಯಿತು.

ಪಪಂ ಅಧ್ಯಕ್ಷ ರಮಹಮತ್ ಉಲ್ಲಾ ಅಸಾದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಆರಂಭದಲ್ಲಿ ಮಳೆಗಾಲದಲ್ಲಿ ಹಾನಿಗೀಡಾದ 1.50 ಲಕ್ಷ ರು. ಮೊತ್ತದ ರಸ್ತೆ ರಿಪೇರಿ ಕಾಮಗಾರಿಯನ್ನು ಟೆಂಡರ್ ಕರೆಯದೇ ಗುತ್ತಿಗೆ ನೀಡಿ ಕೆಲಸ ಮಾಡಿಸಿದ ಬಗ್ಗೆ ಬಿಜೆಪಿ ಸದಸ್ಯ ಸಂದೇಶ್ ಜವಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಸದಸ್ಯ ಸೊಪ್ಪುಗುಡ್ಡೆ ರಾಘವೇಂದ್ರ ಹಾಗೂ ಉಳಿದ ಸದಸ್ಯರು ಕೂಡ ಧ್ವನಿಗೂಡಿಸಿದರು.

ಸದಸ್ಯರ ಆಕ್ಷೇಪದ ಬಗ್ಗೆ ಸಮಜಾಯಿಷಿ ಉತ್ತರ ನೀಡಿದ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಈ ಬಾರಿಯ ಮಳೆಗೆ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು ಜನರು ಸಂಚರಿಸಲಾಗದ ಸ್ಥಿತಿ ಇತ್ತು. ಆ ರಸ್ತೆಯಲ್ಲಿ ಹಲವು ಅಪಘಾತಗಳು ಸಂಭವಿಸಿದ ಕಾರಣ ಸಾರ್ವಜನಿಕರ ಹಿತದೃಷ್ಟಿಯಿಂದ ಅನಿವಾರ್ಯವಾಗಿ ಮಾಡಿಸ ಬೇಕಾಯ್ತು ಎಂದು ಉತ್ತರ ನೀಡಿದರು.

ಇದರಿಂದ ಸಮಾಧಾನಗೊಳ್ಳದ ಬಿಜೆಪಿ ಸದಸ್ಯರು ಆಕ್ಷೇಪ ಮುಂದುವರೆಸಿ, ಈ ಕ್ರಮ ನಿಯಮಬಾಹಿರವಾಗಿದ್ದು, ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದರು. ಇದಕ್ಕೆ ಉತ್ತರವಾಗಿ ಕಾಂಗ್ರೆಸ್ ಸದಸ್ಯರೂ ನೀಡಿದ ಸಮಜಾಯಿಷಿಯನ್ನು ಬಿಜೆಪಿ ಸದಸ್ಯರು ಒಪ್ಪದ ಕಾರಣ ಎರಡೂ ಪಕ್ಷಗಳ ಸದಸ್ಯರ ನಡುವೆ ವಾಗ್ವಾದ ನಡೆದು ಒಂದು ಹಂತದಲ್ಲಿ ಯಾರು ಏನು ಹೇಳುತ್ತಿದ್ದಾರೆ ಎಂಬುದು ತಿಳಿಯದ ಸ್ಥಿತಿ ನಿರ್ಮಾಣವಾಗಿತ್ತು.

ಪಪಂಯಲ್ಲಿ ಚುನಾಯಿತರಾದ ಸದಸ್ಯರ ಅನುಪಸ್ಥಿತಿಯಲ್ಲಿ ಆಡಳಿತಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಪಪಂಯ ಎರಡು ಸಭೆಯ ನಡಾವಳಿಯನ್ನು ಪುನರ್ ಪರಿಶೀಲಿಸುವಂತೆ ಬುಧವಾರ ನಡೆದ ಇಲ್ಲಿನ ಪಪಂ ಸಾಮಾನ್ಯ ಸಭೆಯಲ್ಲಿ

ಹಿಂದಿನ ಸಭಾ ನಡವಳಿಕೆಯನ್ನು ಒಪ್ಪುವ ವಿಚಾರದಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಸಂದೇಶ್ ಜವಳಿ, ಪಪಂಯಲ್ಲಿ ಚುನಾಯಿತ ಸದಸ್ಯರಿದ್ದಾರೆ. ಆಯ್ಕೆ ಯಾಗಿರುವ ಅಧ್ಯಕ್ಷರಿಲ್ಲದ ಸಂಧರ್ಭದಲ್ಲಿ ಆಡಳಿತಾಧಿಕಾರಿಯಾಗಿದ್ದ ತಹಸಿಲ್ದಾರ್ ಅಧ್ಯಕ್ಷತೆಯಲ್ಲಿ ಸದಸ್ಯರ ಅನುಪಸ್ಥಿತಿಯಲ್ಲಿ ಸಭೆ ನಡೆಸಿರುವುದು ನಿಯಮ ಬಾಹಿರವಾಗಿದೆ. ಇದನ್ನು ಒಪ್ಪಲು ಅಸಾಧ್ಯ ಎಂದರು. ಈ ಬಗ್ಗೆ ಮರು ಪರಿಶೀಲನೆ ನಡೆಸುವುದಾಗಿ ಅಧ್ಯಕ್ಷರು ತಿಳಿಸಿದರು.

ಪೌರ ಕಾರ್ಮಿಕರ ದಿನಚರಣೆಯ ಸಲುವಾಗಿ ಕಾರ್ಮಿಕರ ಆರೋಗ್ಯ ತಪಾಸಣೆಗೆ ಹೆಚ್ಚು ಆದ್ಯತೆ ನೀಡಬೇಕು. ವರ್ಷಕ್ಕೊಮ್ಮೆ ಮಾತ್ರ ಮಾಡಿಸುವುದಕ್ಕಿಂತ ಅವರು ಗಳ ಆರೋಗ್ಯದ ಸುರಕ್ಷತೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ತಜ್ಞ ವೈದ್ಯರುಗಳಿಂದ ತಪಾಸಣೆ ನಡೆಸಬೇಕು ಎಂದು ಸದಸ್ಯ ಸೊಪ್ಪುಗುಡ್ಡೆ ರಾಘವೇಂದ್ರ ಆಗ್ರಹಿಸಿ ದರು. ಕುವೆಂಪು ವೃತ್ತದ ಬಳಿ ಇರುವ ಪಪಂ ಕಟ್ಟಡ ಸಂಕೀರ್ಣದ ಮಹಡಿಯ ಮೇಲೆ ಪತ್ರಿಕಾ ಮಾಧ್ಯಮಕ್ಕೆ ಅನುಕೂಲವಾಗುವಂತೆ ಪಪಂಯ ವಾರ್ತಾ ಭವನಕ್ಕೆ ಒಂದು ಕೊಠಡಿಯನ್ನು ಕಾದಿರಿಸಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು.