ಸಾರಾಂಶ
ಸೋಮರಡ್ಡಿ ಅಳವಂಡಿ
ಕೊಪ್ಪಳ:ಕೊಪ್ಪಳದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕುರಿತು ಬಜೆಟ್‌ನಲ್ಲಿ ಘೋಷಿಸಿದ್ದ ರಾಜ್ಯ ಸರ್ಕಾರ ಇದೀಗ ಅನುಷ್ಠಾನ ಮಾಡಲು ₹ 100 ಕೋಟಿ ಹಾಗೂ ಆಡಳಿತಾತ್ಮಕ ಮಂಜೂರಾತಿಯನ್ನು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ.
ನಗರದಲ್ಲಿ ಈಗಾಗಲೇ ಕಿಮ್ಸ್ ವೈದ್ಯಕೀಯ ಆಸ್ಪತ್ರೆ ಇದ್ದು, ಇದನ್ನೇ ಈಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ನಿರ್ಮಿಸಲು ಸರ್ಕಾರ ಮುಂದಾಗಿದ್ದು, ಇದರ ಜಾರಿಗೆ ಆಡಳಿತಾತ್ಮಕ ಮಂಜೂರಾತಿ ನೀಡಿದೆ.10 ಹಂತಸ್ತಿನ ಕಟ್ಟಡ:
ಈಗಿರುವ ಕಿಮ್ಸ್ ಆಸ್ಪತ್ರೆಯ 5 ಹಂತಸ್ತಿನ ಕಟ್ಟಡವನ್ನೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ 10 ಹಂತಸ್ತಿನ ಕಟ್ಟಡ ನಿರ್ಮಾಣಕ್ಕೂ ಕ್ಯಾಬಿನೆಟ್ ಅಸ್ತು ಎಂದಿದೆ. ಈ ಮೂಲಕ ಕೊಪ್ಪಳದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಾರ್ಯಗತವಾಗುವ ಪ್ರಕ್ರಿಯೆಗೆ ಸರ್ಕಾರ ಅಧಿಕೃತ ಮುದ್ರೆ ಒತ್ತಿದೆ. ಕಿಮ್ಸ್ ಇದೀಗ 700 ಹಾಸಿಗೆ ಹೊಂದಿದ್ದು ಇದನ್ನೇ 1000 ಬೆಡ್ ಆಸ್ಪತ್ರೆಯನ್ನಾಗಿ ನಿರ್ಮಿಸಲಾಗುತ್ತಿದೆ. ಇದು ಮೆಡಿಕಲ್ ಕಾಲೇಜು ಮೇಲ್ದರ್ಜೆಗೂ ಅನುಕೂಲವಾಗಲಿದೆ. ಸ್ನಾತಕೊತ್ತರ ಕೇಂದ್ರ ಈಗಾಗಲೇ ಪ್ರಾರಂಭವಾಗಿದ್ದು, ಮೆಡಿಕಲ್ ಕಾಲೇಜಿನಲ್ಲಿ ಎಂ.ಡಿ. ಕೋರ್ಸ್ ಸಹ ಪ್ರಾರಂಭವಾಗಿದೆ. ಈಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾದರೆ ಮತ್ತಷ್ಟು ಕೋರ್ಸ್ ಪ್ರಾರಂಭಿಸುವುದಕ್ಕೂ ಪೂರಕವಾಗಲಿದೆ.ಗುರುವಾರ ಬೆಂಗಳೂರಿನಲ್ಲಿ ನಡೆದ ಕ್ಯಾಬಿನೆಟ್‌ನಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆದು ಆಡಳಿತಾತ್ಮಕ ಮಂಜೂರಾತಿಗೆ ಅನುಮೋದನೆ ನೀಡಲಾಗಿದೆ. ಪೂರಕವಾಗಿ ಸರ್ಕಾರ ₹ 100 ಕೋಟಿ ಮಂಜೂರಾತಿ ನೀಡಿದೆ.
ಅಭಿಯಾನಕ್ಕೆ ಜಯ:ಕೊಪ್ಪಳದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭವಾಗಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಅಭಿಯಾನವನ್ನು ಕಳೆದ ಬಾರಿ ಬಜೆಟ್‌ಗೂ ಮುನ್ನ ಪ್ರಾರಂಭಿಸಲಾಗಿತ್ತು. ಈ ಕುರಿತು ಕನ್ನಡಪ್ರಭ ಸರಣಿ ವರದಿ ಪ್ರಕಟಿಸಿತ್ತು. ಇದಾದ ಮೇಲೆ ಶಾಸಕ ರಾಘವೇಂದ್ರ ಹಿಟ್ನಾಳ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭಿಸುವುದಕ್ಕೆ ಸರ್ಕಾರದ ಅನುಮೋದನೆ ಪಡೆಯಲಾಗುವುದು ಎಂದು ಹೇಳಿದ್ದರು. ಕೊಪ್ಪಳದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಭರವಸೆ ನೀಡಿದ್ದರು. ಇದೀಗ ಆಡಳಿತಾತ್ಮಕ ಮಂಜೂರಾತಿ ದೊರೆತಿರುವುದು ಜಿಲ್ಲೆಯ ಜನರ ಹರ್ಷಕ್ಕೆ ಸಾಕ್ಷಿಯಾಗಿದೆ.
ಕಾಂಗ್ರೆಸ್ ಕಚೇರಿಗಿಲ್ಲ ಭೂಮಿ:ಕೊಪ್ಪಳದಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಗುರುತು ಮಾಡಿ 3700 ಚದುರ ಅಡಿ ಸಿಎ ಜಾಗವನ್ನು ಉಚಿತವಾಗಿ ನೀಡುವಂತೆ ಕೊರಿವುದನ್ನು ಸರ್ಕಾರ ತಿರಸ್ಕರಿಸಿದೆ. ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಸಿಎ ಸೈಟ್ ಉಚಿತವಾಗಿ ನೀಡಲು ಅವಕಾಶವಿಲ್ಲವೆಂದು ಸ್ಪಷ್ಟವಾಗಿ ಹೇಳಿದೆ.
ಕೊಪ್ಪಳದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭಿಸಲು ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಮಂಜೂರಾತಿ ನೀಡಿ ₹ 100 ಕೋಟಿ ಬಿಡುಗಡೆ ಮಾಡಿದೆ. ಸಿಎಂ ಸಿದ್ದರಾಮಯ್ಯ ಅವರು ಕೊಟ್ಟ ಭರವಸೆ ಈಡೇರಿಸಿದ್ದಾರೆ. ಇದು ಕೊಪ್ಪಳ ಪಾಲಿಗೆ ಬಹುದೊಡ್ಡ ಕೊಡುಗೆಯಾಗಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.