ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ರಬಕವಿ ನೂತನ ಬಸ್ ನಿಲ್ದಾಣದ ಪಕ್ಕದ ಜಿಎಲ್‌ಬಿಸಿ ಪ್ರವಾಸಿಮಂದಿರ ಬಳಿಯ ಸಿಟಿಎಸ್ ನಂ.80ರ ಕರ್ನಾಟಕ ನೀರಾವರಿ ನಿಗಮದ ಹೆಸರಿನಲ್ಲಿರುವ 3 ಎಕರೆ 18ಗುಂಟೆ ಕ್ಷೇತ್ರವನ್ನು ತಾಲೂಕು ಪ್ರಜಾಸೌಧ ನಿರ್ಮಿಸಲು ಕಂದಾಯ ಇಲಾಖೆಗೆ ಉಚಿತ ಹಾಗೂ ಶಾಶ್ವತವಾಗಿ ಹಸ್ತಾಂತರಿಸಲು ಅನುಮತಿ ನೀಡಿ ರಾಜ್ಯ ಸರ್ಕಾರ ಕಳೆದ ಜುಲೈ 31ರಂದು ಆದೇಶಿಸಿದೆ.ತಾಲೂಕಿನ ಪ್ರಮುಖ ಯೋಜನೆಯಾಗಿರುವ ಪ್ರಜಾಸೌಧ ನಿರ್ಮಾಣಕ್ಕೆ ತಾಲೂಕಿನ ಕೇಂದ್ರ ಸ್ಥಾನ ಹಾಗೂ ಎಲ್ಲ ಜನತೆಗೆ ಅನುವಾಗುವತ್ತ ಸ್ಥಳ ಗುರುತಿಸುವಲ್ಲಿ ಸರ್ಕಾರ ಮುತುವರ್ಜಿ ವಹಿಸಿದೆ. ಪ್ರಜಾಸೌಧ ನಿರ್ಮಾಣದ ಬೇಡಿಕೆ ಕಳೆದ 5 ವರ್ಷಗಳಿಂದ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ಪ್ರಮುಖ ಆಗ್ರಹವಾಗಿತ್ತು. ತಾಲೂಕು ಕೇಂದ್ರ ಸ್ಥಾನದಲ್ಲಿನ ಜಾಗೆಯಲ್ಲಿ ಬಸ್ ನಿಲ್ದಾಣದ ಪಕ್ಕದ ಭೂಮಿ ಹಸ್ತಾಂತರದ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಯೋಜನೆ ಅನುಷ್ಠಾನ ವಿಳಂಬವಾಗಿತ್ತು. ನೂತನ ಬಸ್ ನಿಲ್ದಾಣದ ಪಕ್ಕದಲ್ಲೇ ಪ್ರಜಾಸೌಧ ನಿರ್ಮಾಣ ಖಚಿತವಾದ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲ ಜನತೆಗೆ ವಿವಿಧ ಸರ್ಕಾರಿ ಕಚೇರಿಗಳು ಒಂದೇ ಸೂರಿನಡಿ ಸಿಗುವಂತಾಗಿದೆ. ಈಗ ಸರ್ಕಾರದ ಆದೇಶದನ್ವಯ ಕಟ್ಟಡ ನಿರ್ಮಾಣ ಕಾಮಗಾರಿ ಶೀಘ್ರವೇ ಆರಂಭಗೊಳ್ಳಲಿದೆ.
ಶನಿವಾರದಂದು ಬನಹಟ್ಟಿ ಬಂದ್ ಗೆ ಕರೆ
ರಬಕವಿ ಬನಹಟ್ಟಿ ಅವಳಿ ನಗರದಲ್ಲಿ ಎಲ್ಲಿಯೇ ಪ್ರಜಾಸೌಧ ನಿರ್ಮಾಣವಾದರೂ ಬೆಂಬಲಿಸುವ ಕರೆ ನೀಡಿದ್ದ ಅವಳಿ ನಗರದ ಹಿರಿಯರ ಪೈಕಿ ಇಂದು ಬನಹಟ್ಟಿ ನಗರದ ಭದ್ರಣ್ಣವರ್ ಕಲ್ಯಾಣ ಮಂಟಪದಲ್ಲಿ ನಡೆದ ಬನಹಟ್ಟಿ ನಗರದ ಹಿರಿಯರ ಸಮ್ಮುಖದ ನಾಗರೀಕರ ಸಭೆಯಲ್ಲಿ ಬನಹಟ್ಟಿಯಲ್ಲಿಯೇ ಪ್ರಜಾಸೌಧ ಕಟ್ಟಡ ನಿರ್ಮಾಣವಾಗಬೇಕೆಂದು ಆಗ್ರಹಿಸಿ ಶನಿವಾರದಂದು ಬನಹಟ್ಟಿ ಬಂದ್ ಗೆ ಕರೆ ನೀಡುವ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ. ವೇದಿಕೆಯಲ್ಲಿ ಶಂಕರ್ ಸೋರಗಾವಿ, ಸೋಮು ಗೊಂಬಿ, ರಾಜೇಂದ್ರ ಭದ್ರಣ್ಣವರ್, ಭೀಮಶಿ ಮಗದುಮ್ ಸೇರಿದಂತೆ ಅನೇಕ ಹಿರಿಯರು ಮಾತನಾಡಿದರು. ಬನಹಟ್ಟಿಯ ಹಿರಿಯರು ಪ್ರಜಾಸೌಧ ನಿರ್ಮಾಣಕ್ಕೆ ಆಗ್ರಹಿಸಿ ಮಾತುಕತೆ ನಡೆಸಲು ಬಾಗಲಕೋಟ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದಾಗ ಅಲ್ಲಿ ಅನಾದರಣೆಗೆ ಒಳಗಾಗಿದ್ದನ್ನು ಸಭೆ ಸರ್ವಾನುಮತದಿಂದ ಡಿಸಿ ನಡೆಯನ್ನು ಖಂಡಿಸಿತು.