₹115 ಕೋಟಿ ವೆಚ್ಚದಲ್ಲಿ 137 ಕೆರೆ ತುಂಬಿಸುವ ಯೋಜನೆಗೆ ಗ್ರಿನ್‌ ಸಿಗ್ನಲ್‌

| Published : Sep 06 2025, 01:01 AM IST

₹115 ಕೋಟಿ ವೆಚ್ಚದಲ್ಲಿ 137 ಕೆರೆ ತುಂಬಿಸುವ ಯೋಜನೆಗೆ ಗ್ರಿನ್‌ ಸಿಗ್ನಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಬ್ಯಾಡಗಿ ಮತಕ್ಷೇತ್ರದಲ್ಲಿ ಯಾವುದೇ ಪ್ರಮುಖ ನದಿಗಳು ಹರಿದಿಲ್ಲ. ಹೀಗಾಗಿ ಏತ ನೀರಾವರಿ ಯೋಜನೆಗಳನ್ನು ನೆಚ್ಚಿಕೊಂಡು ಇಲ್ಲಿನ ರೈತರು ಕೃಷಿ ನಡೆಸಬೇಕಾಗಿದೆ.

ಬ್ಯಾಡಗಿ: ಗುಡ್ಡದ ಮಲ್ಲಾಪುರ ಯೋಜನೆಯಡಿ ತಾಲೂಕಿನ 137 ಕೆರೆಗಳಿಗೆ ಪೈಪ್‌ಲೈನ್ ಮೂಲಕ ನೀರು ತುಂಬಿಸುವ ₹115 ಕೋಟಿ ವೆಚ್ಚದ ಯೋಜನೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದ್ದನ್ನು ಶಾಸಕ ಬಸವರಾಜ ಶಿವಣ್ಣನವರ ಸ್ವಾಗತಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬ್ಯಾಡಗಿ ಮತಕ್ಷೇತ್ರದಲ್ಲಿ ಯಾವುದೇ ಪ್ರಮುಖ ನದಿಗಳು ಹರಿದಿಲ್ಲ. ಹೀಗಾಗಿ ಏತ ನೀರಾವರಿ ಯೋಜನೆಗಳನ್ನು ನೆಚ್ಚಿಕೊಂಡು ಇಲ್ಲಿನ ರೈತರು ಕೃಷಿ ನಡೆಸಬೇಕಾಗಿದೆ. ಅದರಲ್ಲೂ ಅರೆ ಮಲೆನಾಡು ಪ್ರದೇಶವಾಗಿದ್ದರಿಂದ ಮಳೆಯಾಧರಿತ ಕೃಷಿ ಚಟುವಟಿಕೆಗಳು ನಡೆಯುತ್ತಿದ್ದು, ಕೆರೆಗಳನ್ನು ತುಂಬಿಸುವುದರಿಂದ ಅಂತರ್ಜಲ ಮಟ್ಟ ಸುಧಾರಣೆಯಾಗಲಿದ್ದು, ಕನಿಷ್ಠ ಕೊಳವೆ ಬಾವಿಗಳ ಮೂಲಕವಾದರೂ ಕೃಷಿ ನಡೆಸಬಹುದು ಎಂದಿದ್ದಾರೆ.

ನನೆಗುದಿಗೆ ಬಿದ್ದಿದ್ದ ಯೋಜನೆ: ಕಳೆದ 2002ರಲ್ಲಿ ಗುಡ್ಡದ ಮಲ್ಲಾಪುರ ಏತ ನೀರಾವರಿ ಅನುಷ್ಠಾನಗೊಂಡಿತ್ತು. ಈ ಯೋಜನೆ ಕಾಲುವೆಗಳ ಮೂಲಕ ನೀರು ಹರಿಸುವ ಯೋಜನೆ ಇದಾಗಿದ್ದರಿಂದ ಭೂಸ್ವಾಧೀನ ಸೇರಿದಂತೆ ಸಾಕಷ್ಟು ವಿವಾದಗಳಿಗೆ ಕಾರಣವಾಗಿದ್ದಲ್ಲದೇ ಬಹುತೇಕ ಸರ್ಕಾರಗಳು ಪ್ರಯತ್ನಿಸಿದರೂ ರೈತರ ಉಪಯೋಗಕ್ಕೆ ಬರಲಿಲ್ಲ. ಆದರೆ ಪ್ರಸ್ತುತ ಯೋಜನೆಯಡಿ ಪೈಪ್ ಲೈನ್ ಮೂಲಕ ನೀರು ಹರಿಸುತ್ತಿರುವುದರಿಂದ ರೈತರ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದಿದ್ದಾರೆ.

ಬ್ಯಾರೇಜ್ ನಿರ್ಮಾಣಕ್ಕೆ ಮುನ್ನುಡಿ: ಈ ಯೋಜನೆಯಲ್ಲಿ ಕೆರೆಗಳಿಗೆ ವರದಾ ನದಿಯಿಂದ ನೀರು ಹರಿಸಲಾಗುತ್ತಿದ್ದು, ಇದರ ಒಳಹರಿವು ಅತ್ಯಂತ ಕಡಿಮೆ. ಹೀಗಾಗಿ ಹಾನಗಲ್ಲ ತಾಲೂಕು ಬ್ಯಾತನಾಳ ಗ್ರಾಮದಲ್ಲಿರುವ ಜಾಕ್‌ವೆಲ್ ಬಳಿ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣ ಕೂಡ ಯೋಜನೆಯಲ್ಲಿ ಸೇರ್ಪಡೆಯಾಗಿದೆ.

ಕೆರೆಗಳ ಭರ್ತಿ: ಬಹುತೇಕ ಯೋಜನೆಗಳಲ್ಲಿ ಭೂಮಿ ಗುರುತ್ವಾಕರ್ಷಣ ಶಕ್ತಿ(ಗ್ರ್ಯಾವಿಟಿ ಪ್ರೆಶರ್‌) ಮೂಲಕ ನೀರು ಹರಿಸಲಾಗುತ್ತದೆ. ಆದರೆ ಈ ಯೋಜನೆಯಲ್ಲಿ ಯಂತ್ರಗಳ ಶಕ್ತಿ(ಮಿಷನ್ ಪ್ರೆಶರ್‌) ಮೂಲಕ ನೀರು ಹರಿಸಲಾಗುತ್ತಿದ್ದು, ಯಾವುದೇ ಕಾರಣಕ್ಕೂ ಒಂದೂ ಕೆರೆಯನ್ನು ಬಿಡದಂತೆ ತುಂಬಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.