ಹಸಿರು ನಕ್ಷತ್ರ ಪ್ರೊ.ನಂಜುಂಡಸ್ವಾಮಿ ರೈತ ಹೋರಾಟಕ್ಕೆ ಸ್ಫೂರ್ತಿ: ನಲ್ಲಹಳ್ಳಿ ಶ್ರೀನಿವಾಸ್

| Published : Feb 14 2025, 12:34 AM IST

ಸಾರಾಂಶ

ರೈತ ಕುಲದ ಉದ್ಧಾರಕ್ಕೆ ಎಂ.ಡಿ. ನಂಜುಂಡಸ್ವಾಮಿಯವರ ಕೊಡುಗೆ ಅಪಾರವಾದದ್ದು, ಎಂ.ಡಿ. ನಂಜುಂಡಸ್ವಾಮಿಯವರು ವಿಧಾನಸಭಾ ಸದಸ್ಯರಾಗಿದ್ದರೂ ಸಹ ಆಡಂಬರದ ಜೀವನಕ್ಕೆ ಮಾರುಹೋಗದೆ ರೈತ ಸಮುದಾಯದ ಹಿತೈಷಿಯಾಗಿದ್ದರು. ದಿಟ್ಟ ಮಾತು, ಗಾಂಭೀರ್ಯದ ನಡೆಯಿಂದ ಎಂ. ಡಿ. ನಂಜುಂಡಸ್ವಾಮಿಯವರು ಒಂದು ರೈತ ಸಂಘಟನೆಯನ್ನು ಕಟ್ಟದಿದ್ದರೆ ಇಂದು ರೈತರ ಬದುಕು ಶೋಚನೀಯ ಸ್ಥಿತಿಯಲ್ಲಿ ಇರಬೇಕಾಗಿತ್ತು .

ಕನ್ನಡಪ್ರಭ ವಾರ್ತೆ ಕನಕಪುರ

ರೈತ ಸಂಘದ ಹುಟ್ಟಿನ ಜೊತೆಗೆ ರೈತರ ಸ್ವಾಭಿಮಾನವನ್ನು ಉಳಿಸಿ, ಅಸಂಘಟಿತ ರೈತ ಸಮೂಹಕ್ಕೆ ಜ್ಞಾನದ ಧಾರೆ ಎರೆದ ಮಹಾ ಚೇತನ ಪ್ರೊ. ಎಂ.ಡಿ. ನಂಜುಂಡಸ್ವಾಮಿ ರೈತ ಹೋರಾಟಕ್ಕೆ ಸ್ಫೂರ್ತಿಯಾಗಿದ್ದಾರೆ ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಕಾರ್ಯದರ್ಶಿ ನಲ್ಲಹಳ್ಳಿ ಶ್ರೀನಿವಾಸ್ ತಿಳಿಸಿದರು.

ಮೈಸೂರು ರಸ್ತೆಯಲ್ಲಿರುವ ರೈತ ಸಂಘದ ಕಚೇರಿಯಲ್ಲಿ ರಾಜ್ಯ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ, ಹಸಿರು ನಕ್ಷತ್ರ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ವಿದೇಶದಲ್ಲಿ ವ್ಯಾಸಂಗ ಮಾಡಿ ಕಾನೂನು ಪದವಿಯಲ್ಲಿ ಪರಿಮಿತಿ ಪಡೆದಿದ್ದ ನಂಜುಂಡಸ್ವಾಮಿ ಅವರು ದೇಶದಲ್ಲಿ ರೈತರ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನು ತಡೆಯಲು ಹೋರಾಟಕ್ಕೆ ಇಳಿದರು. ತನ್ನ ಜಮೀನನ್ನು ಬಡಬಗ್ಗರಿಗೆ ದಾನ ಮಾಡಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಜೀವನ ಮಾಡುತ್ತಿದ್ದ ಮಹಾನ್ ತ್ಯಾಗಜೀವಿ ಹಾಗೂ ಮಹಾನ್ ಮಾನವತಾವಾದಿ ಎಂದರು.

ರೈತರಿಗೆ ಗುಂಡಿಟ್ಟ ಗುಂಡುರಾವ್ ಗೆ ನಮ್ಮ ಮತವಿಲ್ಲ ಎಂದು ನವಲಗುಂದ, ನರಗುಂದದ ಗೋಲಿಬಾರ್ ಸಂದರ್ಭದಲ್ಲಿ ರೈತ ಪರಿವರ್ತನೆಗೆ ಕರೆಕೊಟ್ಟರು. ಈ ಮಹಾನ್ ಚೇತನದ ಮಾತಿಗೆ ಅಂದಿನ ಗುಂಡೂರಾವ್ ಸರ್ಕಾರ ಪತನವಾಯಿತು, 1982ರಲ್ಲಿ ರೈತರಿಗೆ ಭೂತವಾಗಿ ಕಾಡುತ್ತಿದ್ದ ರೈತರ ಮನೆ ಮತ್ತು ಜಮೀನಿನ ಜಪ್ತಿಯನ್ನು ಕಾನೂನಾತ್ಮಕವಾಗಿ ಹೋರಾಟ ನಡೆಸಿ ಜಪ್ತಿ ಚಳುವಳಿಯನ್ನು ನಡೆಸಿ, ರೈತರ ಮನೆ, ಹೊಲ, ಗದ್ದೆಗಳನ್ನು ಜಪ್ತಿ ಮಾಡದಂತೆ ತಡೆದ ಕೀರ್ತಿ ಎಂ.ಡಿ. ನಂಜುಂಡಸ್ವಾಮಿ ಅವರಿಗೆ ಸಲ್ಲುತ್ತದೆ ಎಂದರು.

ಕನಕಪುರದಲ್ಲಿ ಗ್ರಾನೈಟ್ ಚಳುವಳಿಯನ್ನು ಆರಂಭಿಸಿ ನಮ್ಮ ಸಂಪತ್ತು ನಮಗೆ ಎಂದು ತಿಳಿಸಿ ಸರ್ಕಾರಕ್ಕೆ ವಂಚಿತವಾಗುತ್ತಿದ್ದ ಕೋಟ್ಯಾಂತರ ರುಪಾಯಿಗಳನ್ನು ಉಳಿಸಿದ್ದರು, ನೀರಾ ಚಳುವಳಿ, ಬಾರುಕೋಲು ಚಳುವಳಿ, ಅಂತಾರಾಷ್ಟ್ರೀಯ ಕಂಪನಿಗಳ ವಿರುದ್ಧ ನಡೆಸಿದ ಚಳುವಳಿ, ಜಾತಿ ಪದ್ಧತಿ ನಿರ್ಮೂಲನೆಗೆ ನಡೆಸಿದ ಚಳುವಳಿ, ಕಬ್ಬು ಬೆಳೆಗಾರರ ಚಳುವಳಿಯಂಥ ಅನೇಕ ಚಳುವಳಿಗಳ ಮೂಲಕ ರೈತ ಕುಲವನ್ನು ಉಳಿಸಲು ಹೋರಾಡಿದ್ದಾರೆ ಎಂದರು.

ಭಾರತೀಯ ನಾಗರಿಕ ಸಮಾನತೆ ಹೋರಾಟ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ. ರೈತ ಕುಲದ ಉದ್ಧಾರಕ್ಕೆ ಎಂ.ಡಿ. ನಂಜುಂಡಸ್ವಾಮಿಯವರ ಕೊಡುಗೆ ಅಪಾರವಾದದ್ದು, ಎಂ.ಡಿ. ನಂಜುಂಡಸ್ವಾಮಿಯವರು ವಿಧಾನಸಭಾ ಸದಸ್ಯರಾಗಿದ್ದರೂ ಸಹ ಆಡಂಬರದ ಜೀವನಕ್ಕೆ ಮಾರುಹೋಗದೆ ರೈತ ಸಮುದಾಯದ ಹಿತೈಷಿಯಾಗಿದ್ದರು. ದಿಟ್ಟ ಮಾತು, ಗಾಂಭೀರ್ಯದ ನಡೆಯಿಂದ ಎಂ. ಡಿ. ನಂಜುಂಡಸ್ವಾಮಿಯವರು ಒಂದು ರೈತ ಸಂಘಟನೆಯನ್ನು ಕಟ್ಟದಿದ್ದರೆ ಇಂದು ರೈತರ ಬದುಕು ಶೋಚನೀಯ ಸ್ಥಿತಿಯಲ್ಲಿ ಇರಬೇಕಾಗಿತ್ತು ಎಂದು ತಿಳಿಸಿದರು.

ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಬಿ.ಸಿ .ನಾರಾಯಣ ಸ್ವಾಮಿ, ತಾಲೂಕು ಅಧ್ಯಕ್ಷ ಕೆಬ್ಬೆಹಳ್ಳಿ ಶಿವರಾಜು, ತಾಲೂಕು ಕಾರ್ಯದರ್ಶಿ ಕೋಡಿಹಳ್ಳಿ ಶಿವರಾಜು, ಭಾರತೀಯ ನಾಗರಿಕ ಸಮಾನತೆ ಹೋರಾಟದ ಸಮಿತಿ ಕಾರ್ಯದರ್ಶಿ ಸುರೇಶ್, ಮಲ್ಲಿಕಾರ್ಜುನ್, ನಾಗರಾಜು, ಸಿದ್ದರಾಜು, ಸುರೇಶ್, ಶೋಭಾ, ನವೀನ್, ಭರತ್ ಸೇರಿ ಹಲವರು ಉಪಸ್ಥಿತರಿದ್ದರು.