ಶಿವಮೊಗ್ಗ: ಪರಿಸರ ಪೂಜೆ ಇಂದಿನ ತುರ್ತಾಗಿದೆ. ಕೆಲವರ ಸುಖಕ್ಕಾಗಿ ಕೋಟ್ಯಾಂತರ ಜನರ ಉಸಿರಿಗೆ ಧಕ್ಕೆಯಾಗುವ ಯೋಜನೆಗಳು ಸದ್ದಿಲ್ಲದೆ ನುಸುಳುತ್ತಿವೆ. ಉಸಿರು ಕೊಲ್ಲುವ ಮುನ್ನ ಹಸಿರು ಉಳಿಸಬೇಕಾಗಿದೆ ಎಂದು ಹಿರಿಯ ಪತ್ರಕರ್ತ ಆರುಂಡಿ ಶ್ರೀನಿವಾಸ ಮೂರ್ತಿ ಹೇಳಿದರು. ಶಿವಮೊಗ್ಗ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಮತ್ತು ಜಿಲ್ಲಾ ಜ್ಞಾನ-ವಿಜ್ಞಾನ ಸಮಿತಿ ಸಹಯೋಗದಲ್ಲಿ ಹೋಟೆಲ್ ಮಥುರಾ ಪ್ಯಾರಡೈಸ್‌ನಲ್ಲಿ ಶನಿವಾರ ಏರ್ಪಡಿಸಿದ್ದ ಪರಿಸರ ಸಂರಕ್ಷಣೆ ಕುರಿತ ಜಿಲ್ಲಾ ಮಟ್ಟದ ಚುಟುಕು ಕವಿಗೋಷ್ಠಿ ಹಾಗೂ ಪ್ರೊ. ಸತ್ಯನಾರಾಯಣ ಅವರ ''''''''ಕವಲುಗಳ ಸಿರಿ'''''''' ಕೃತಿಯ ಲೋಕಾರ್ಪಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮುಂದೊಂದು ದಿನ ಹಣದ ಬ್ಯಾಂಕ್ ಬದಲು ಆಮ್ಲಜನಕದ ಬ್ಯಾಂಕ್ ಬರುತ್ತದೆ. ಬ್ಯಾಂಕಿನ ಪಾಸ್‌ಬುಕ್‌ನಲ್ಲಿ ಹಣದ ಲೆಕ್ಕಕ್ಕಿಂತ ಉಸಿರಿನ ಬ್ಯಾಲೆನ್ಸ್ ಶೂನ್ಯವಾಗುತ್ತದೆ ಎಂದು ಎಚ್ಚರಿಸಿದರು.

ಪ್ರೊ. ಸತ್ಯನಾರಾಯಣ ಅವರ ಕವಲುಗಳ ಸಿರಿ ಕೃತಿ ಲೋಕಾರ್ಪಣೆ ಮಾಡಿದ ಮಾಜಿ ಕುವೆಂಪು ವಿವಿ ಸಿಂಡಿಕೇಟ್ ಸದಸ್ಯೆ ಡಾ. ಎಸ್.ಬಿ. ಭಾಗ್ಯಲಕ್ಷ್ಮಿ ಕೆ. ಆಚಾರ್ ಮಾತನಾಡಿ, ಚುಟುಕು ಪದ್ಯಗಳಲ್ಲಿ ಹಿರಿದಾದ ಅರ್ಥವಿರುತ್ತದೆ. ಸತ್ಯನಾರಾಯಣ ಅವರು ಚುಟುಕು ಕವಿತೆ ಬರೆಯುವುದರಲ್ಲಿ ಎತ್ತಿದ ಕೈ. ಇದು ಅವರ 27ನೇ ಕೃತಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಕವಿ ಪ್ರೊ. ಸತ್ಯನಾರಾಯಣ ಮಾತನಾಡಿ, ಕವಿತೆ ಬರೆಯಲು ಅಧ್ಯಯನ ಮುಖ್ಯ. ಸತತವಾಗಿ ಓದುವುದರಿಂದ ಹೀಗೆ ಬರೆಯಲು ಸಾಧ್ಯವಾಯಿತು. ನಾನು 27 ಕೃತಿಗಳನ್ನು ಹೊರತಂದಿದ್ದೇನೆ. ಆದರೆ ಯಾವುದನ್ನೂ ಮಾರಾಟ ಮಾಡಿಲ್ಲ, ಓದುಗರಿಗೆ ಉಚಿತವಾಗಿ ನೀಡುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕವಿತಾ ಉಂಬ್ಳೆಬೈಲು, ನಿವೃತ್ತ ಪ್ರಾಧ್ಯಾಪಕರುಗಳಾದ ಡಾ.ಆರುಂಡಿ ನಾಗರಾಜ್, ಡಾ.ರಾಜಶೇಖರ್, ಸಾವಿತ್ರಮ್ಮ ಪರುಶುರಾಮ್, ಸೇರಿದಂತೆ ಹಲವರಿದ್ದರು.

ನಂತರ ಜಿಲ್ಲೆಯ 30ಕ್ಕೂ ಹೆಚ್ಚು ಕವಿ-ಕವಯತ್ರಿಯರು ಪರಿಸರ ಕುರಿತು ಚುಟುಕು ಕವನ ವಾಚಿಸಿದರು.