ಕುಂದುಕೊರತೆ ಸಭೆಯೋ, ನಗರಸಭೆ ಆಯವ್ಯಯ ಚರ್ಚೆ ಸಭೆಯೋ?!

| Published : Feb 11 2025, 12:46 AM IST

ಕುಂದುಕೊರತೆ ಸಭೆಯೋ, ನಗರಸಭೆ ಆಯವ್ಯಯ ಚರ್ಚೆ ಸಭೆಯೋ?!
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ನಗರಸಭೆ ಸಭಾಂಗಣದಲ್ಲಿ ಸೋಮವಾರ ನಗರಸಭಾ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ 2025-26ನೇ ಸಾಲಿನ ಅಯವ್ಯಯ ಸಭೆಯು ಸಂಪೂರ್ಣ ಕುಂದುಕೊರತೆ ಸಭೆಯಂತಾದ ಘಟನೆ ಹರಿಹರದಲ್ಲಿ ನಡೆಯಿತು.

- ಹರಿಹರ ನಗರಸಭೆ ಅಧ್ಯಕ್ಷೆ ಕವಿತಾ ಬೇಡರ್ ಅಧ್ಯಕ್ಷತೆ ಸಭೆಯಲ್ಲಿ ಸಮಸ್ಯೆಗಳ ಸುರಿಮಳೆ ಸುರಿಸಿದ ಸಾರ್ವಜನಿಕರು

- - - ಕನ್ನಡಪ್ರಭ ವಾರ್ತೆ ಹರಿಹರ

ನಗರದ ನಗರಸಭೆ ಸಭಾಂಗಣದಲ್ಲಿ ಸೋಮವಾರ ನಗರಸಭಾ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ 2025-26ನೇ ಸಾಲಿನ ಅಯವ್ಯಯ ಸಭೆಯು ಸಂಪೂರ್ಣ ಕುಂದುಕೊರತೆ ಸಭೆಯಂತಾದ ಘಟನೆ ನಡೆಯಿತು.

ನಗರಸಭೆಗೆ ಅನುದಾನ, ಆದಾಯ ಹೇಗೆ ತರಬೇಕು, ಹಣ ಹೇಗೆ ಖರ್ಚು ಮಾಡಬೇಕು ಎಂಬ ಚರ್ಚಿಸಲು ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ವಿವಿಧ ಸಂಘಗಳ ಮುಖಂಡರು ಸಾರ್ವಜನಿಕರು ಅಗತ್ಯ ಬೇಡಿಕೆಗಳನ್ನು ಈಡೇರಿಸದಿದ್ದರೆ ಪ್ರತಿಭಟನೆ ಮಾಡಬೇಕಾದೀತು ಎಂದು ಎಚ್ಚರಿಸಿದರು.

ನಗರದಲ್ಲಿ ನೇಕಾರ ಬಡಾವಣೆಯಾಗಿ 15ಕ್ಕೂ ಹೆಚ್ಚು ವರ್ಷಗಳೆ ಕಳೆದಿವೆ. ಇದುವರೆಗೂ ಚರಂಡಿ, ರಸ್ತೆ, ನೀರಿನ ವ್ಯವಸ್ಥೆ ಬೀದಿದೀಪ ಇರಲಿ, ಮನೆಗಳಿಗೂ ವಿದ್ಯುತ್ ವ್ಯವಸ್ಥೆ ಮಾಡಿಲ್ಲ. ಪಕ್ಕದ ಬಡಾವಣೆಗಳಿಂದ ವಿದ್ಯುತ್ ವ್ಯವಸ್ಥೇ ಮಾಡಿಕೊಂಡರೆ, ಅದನ್ನೂ ತಿಂಗಳಿಗೆರಡು ಬಾರಿ ಬರುವ ತನಿಖಾ ದಳದವರು ಕಿತ್ತು ಹಾಕುತ್ತಾರೆ. ಎಂದು ನೇಕಾರ ಸಂಘದ ಪದಾಧಿಕಾರಿಗಳಾದ ಕೊಟ್ರಪ್ಪ ಕೊಟಿಗಿ, ಅಗಡಿ ಮಂಜುನಾಥ ಸೇರಿದಂತೆ ಇತರರು ನಗರಸಭೆ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಸಂಪೂರ್ಣ ಬಡಾವಣೆಗೆ ವಿದ್ಯುತ್ ವ್ಯವಸ್ಥೆ ಮಾಡಲು ₹40ರಿಂದ ₹50 ಲಕ್ಷ ಹಣ ಕಟ್ಟಬೇಕು. ಅಷ್ಟೊಂದು ಹಣ ಇಲ್ಲ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು. ತಾತ್ಕಾಲಿಕ ವ್ಯವಸ್ಥೆಗೆ ₹10 ಲಕ್ಷವನ್ನಾದರೂ ನಗರಸಭೆಯಿಂದ ಕಟ್ಟಿದಲ್ಲಿ ವಿದ್ಯುತ್ ನೀಡುವುದಾಗಿ ಬೆಸ್ಕಾಂನವರು ಹೇಳುತ್ತಿದ್ದಾರೆ. ಗ್ರಾಮದೇವತಾ ಹಬ್ಬ ಇದೆ ಬೀಗರು ಹಬ್ಬಕ್ಕೆ ಬರುತ್ತಾರೆ ತಕ್ಷಣ ಹಣ ಕಟ್ಟಿ ತಾತ್ಕಾಲಿಕ ವ್ಯವಸ್ಥೆ ಮಾಡಿ ಎಂದು ಬಡಾವಣೆಯ ಶಂಕ್ರಪ್ಪ ದೂಳಾ, ನಾಗರಾಜ್ ಇಂಡಿ, ಪತ್ರಿನಾಥ, ತಿಪ್ಪೇಶ್ ಸೇರಿದಂತೆ ಅನೇಕರು ಮನವಿ ಮಾಡಿದರು.

ಪ್ರತಿಯೊಂದು ನಗರಗಳಲ್ಲಿ ವ್ಯವಸ್ಥಿತ ತರಕಾರಿ ಮಾರುಕಟ್ಟೆ ಇವೆ. ಆದರೆ, ಹರಿಹರದಲ್ಲಿ ಮಾತ್ರ ರಸ್ತೆಯಲ್ಲಿ ಕುಳಿತು ತರಕಾರಿ ಮಾರಬೇಕಾದ ಪರಿಸ್ಥಿತಿ ಇದೆ. ಹಳೇ ಕೋರ್ಟ್ ಸ್ಥಳಾಂತರ ನಂತರ ಸುಸಜ್ಜಿತ ತರಕಾರಿ ಮಾರುಕಟ್ಟೆ ನಿರ್ಮಿಸಿ ಕೊಡುವ ಭರವಸೆ ಈಡೇರಿಲ್ಲ. ತರಕಾರಿ ಮಾರುವ ಮಹಿಳೆಯರು ಶೌಚಾಲಯಕ್ಕೆ ಹೋಗಲು ಪರದಾಡಬೇಕಾದ ಪರಿಸ್ಥಿತಿ ಇದೆ. ಹಳೇ ಕೋರ್ಟ್ ಜಾಗದಲ್ಲಿ ಮಳಿಗೆ ಬೇಡ, ಕೇವಲ ಪ್ಲಾಟ್‍ಫಾರ್ಮ್‌ ಮಾಡಿ, ತರಕಾರಿ ಮಾರುವವರಿಗೆ ನೀಡಿ ಲಕ್ಷಗಟ್ಟಲೇ ಆದಾಯ ಬರುತ್ತದೆ ಎಂದು ಮಾರಾಟದಾರರು ಮನವಿ ಮಾಡಿದರು.

ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಶೇಖರಗೌಡ ಮಾತನಾಡಿ, ನಗರದಲ್ಲಿ ನಡೆಯುವ ಅತಿ ದೊಡ್ಡ ಜಾತ್ರೆ ಊರಮ್ಮನ ಹಬ್ಬ ಬರುತ್ತಿದೆ. ರಸ್ತೆಗಳು ಬಹುತೇಕ ಹಾಳಾಗಿದ್ದು, ಸರಿಪಡಿಸಬೇಕು. ಹಬ್ಬದಲ್ಲಿ ವಿದ್ಯುತ್ ತೆಗೆದರು ಅನ್ನುವ ಕಾರಣಕ್ಕೆ ನಗರದ ಬಹುತೇಕ ಜನರು ಬೆಸ್ಕಾಂ ಬಳಿ ಪ್ರತಿಭಟನೆ ಮಾಡಿದ್ದರು. ನಗರಕ್ಕೆ ನೀರು ನೀಡಲು ಒಂದೇ ಮೋಟಾರ್ ಇದೆ. ಅದೇನಾದರು ಹಬ್ಬದಲ್ಲಿ ಕೈ ಕೊಟ್ಟರೆ, ಇಡೀ ಊರ ಜನರೆಲ್ಲ ಬಂದು ನಗರಸಭೆಗೆ ಘೇರಾವ್ ಮಾಡುತ್ತಾರೆ ಎಂದು ಎಚ್ಚರಿಸಿದರು.

ಸಾರ್ವಜನಿಕರಿಂದ ಸರ್ಕಾರಿ ಶಾಲೆ ಕೊಠಡಿ, ಶೌಚಾಲಯ ವ್ಯವಸ್ಥೆ, ಸಿ.ಸಿ. ಕ್ಯಾಮರಾ, ಕಳವು ಪ್ರಕರಣ, ನೀರಿನ ಕಂದಾಯ- ಮೀಟರ್‌ ಅಳವಡಿಕೆ, ರಸ್ತೆ, ರಸ್ತೆ ತಿರುವುಗಳಿಗೆ ನಾಮಫಲಕ, ಟ್ಯಾಕ್ಸಿ ಸ್ಟ್ಯಾಂಡ್‌, ನಿವೇಶನಗಳ ಹಂಚಿಕೆ, ಮನೆ ನಿರ್ಮಿಸಲು ಅನುಮತಿ, ಇಸ್ವತ್ತು, ಹೈಮಾಸ್ಟ್‌ ದೀಪ ವ್ಯವಸ್ಥೆ, ಸಾರ್ವಜನಿಕ ಗ್ರಂಥಾಲಯ ಮುಂತಾದ ಸಮಸ್ಯೆಗಳ ಮಹಾಪೂರವೇ ಹರಿದುಬಂದಿತು.

ನಗರಸಭೆ ಉಪಾಧ್ಯಕ್ಷ ಎಚ್. ಜಂಬಣ್ಣ, ಪೌರಾಯುಕ್ತ ಸುಬ್ರಮಣ್ಯ ಶ್ರೇಷ್ಠಿ, ದಾದಾ ಖಲಂದರ್, ಆಟೋ ಹನುಮಂತಪ್ಪ, ಆರ್.ಸಿ. ಜಾವಿದ್, ಪಕ್ಕೀರಮ್ಮ, ಕೆ.ಬಿ. ರಾಜಶೇಖರ್, ಪರ್ತಕತ್ರರಾದ ಆರ್. ಮಂಜಣ್ಣ, ಜಿ.ಕೆ. ಪಂಚಾಕ್ಷರಿ, ವಿಶ್ವನಾಥ ಮೈಲಾಳ್ ಕ್ರೀಡಾಪಟು ಎಚ್.ನಿಜಗುಣ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಜರಿದ್ದರು.

- - - -10ಎಚ್‌ಆರ್‌01- 02:

ಹರಿಹರದ ನಗರಸಭೆ ಸಭಾಂಗಣದಲ್ಲಿ ಕವಿತಾ ಮಾರುತಿ ಬೇಡರ್ ಅವರ ಅಧ್ಯಕ್ಷತೆಯಲ್ಲಿ 2025-26ನೇ ಸಾಲಿನ ಅಯವ್ಯಯ ಸಭೆ ನಡೆಯಿತು.