ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯ್ತಿ ಕಚೇರಿಗಳಲ್ಲಿ ಪ್ರತಿ ಸೋಮವಾರ ಸಾರ್ವಜನಿಕರ ಕುಂದುಕೊರತೆ ಸಭೆಗಳನ್ನು ಆಯೋಜಿಸುವಂತೆ ಜಿಪಂ ಸಿಇಒ ಕೆ.ಆರ್.ನಂದಿನಿ ಸೂಚಿಸಿದರು.ಸಾರ್ವಜನಿಕರು ಸರ್ಕಾರಿ ಕೆಲಸಗಳಿಗೆ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಹಾಗೂ ನಿಗದಿತ ಅವಧಿಯೊಳಗೆ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರತಿ ಸೋಮವಾರ ಸಾರ್ವಜನಿಕ ಕುಂದುಕೊರತೆ ಸಭೆ ಆಯೋಜಿಸುವಂತೆ ಜಿಲ್ಲೆಯ ಎಲ್ಲಾ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಕುಡಿಯುವ ನೀರು, ರಸ್ತೆ, ಬೀದಿ ದೀಪ, ಸ್ವಚ್ಛತೆ ಸೇರಿದಂತೆ ಗ್ರಾಪಂ ವ್ಯಾಪ್ತಿಗೆ ಬರುವ ಇತರೆ ಎಲ್ಲಾ ವಿಷಯಗಳ ಬಗ್ಗೆ ಅಧಿಕಾರಿಗಳಿಗೆ ಮನವಿ ಅಥವಾ ದೂರು ಸಲ್ಲಿಸಬಹುದು. ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಈ ಕುರಿತು ನಿಗದಿತ ಕಾಲಮಿತಿಯೊಳಗೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.ಕುಂದುಕೊರತೆ ಸಭೆಗಳ ಕುರಿತು ಮೇಲ್ವಿಚಾರಣೆ ನಡೆಸಲು ಜಿಲ್ಲಾ ಪಂಚಾಯ್ತಿ ಕಚೇರಿಯ ಅಧಿಕಾರಿಗಳನ್ನು ತಾಲೂಕು ನೋಡಲ್ ಅಧಿಕಾರಿಗಳನ್ನಾಗಿ ಮಾಡಲಾಗಿದ್ದು, ಈ ಅಧಿಕಾರಿಗಳು ತಮ್ಮ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯ್ತಿಗಳಲ್ಲಿ ಸಾರ್ವಜನಿಕ ಕುಂದು ಕೊರತೆ ಸಭೆ ಆಯೋಜಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳಲಿದ್ದಾರೆ ಎಂದು ನುಡಿದರು.
ಜಿಪಂ-ತಾಪಂ ಕಚೇರಿಗಳಲ್ಲಿಯೂ ಯೋಜನೆ:ಗ್ರಾಮ ಪಂಚಾಯ್ತಿಗಳ ಮಾದರಿಯಲ್ಲೇ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಕಚೇರಿಗಳಲ್ಲಿಯೂ ಪ್ರತಿ ಸೋಮವಾರ ಮಧ್ಯಾಹ್ನ ೩ ಗಂಟೆಯಿಂದ ೬ ಗಂಟೆಯವರೆಗೂ ಸಾರ್ವಜನಿಕರ ಕುಂದುಕೊರತೆ ಆಲಿಸಲು ಸಭೆ ಆಯೋಜಿಸಲಾಗುತ್ತಿದೆ. ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ಜರುಗುವ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಕಚೇರಿಯ ಎಲ್ಲಾ ಅಧಿಕಾರಿಗಳು ಹಾಜರಿರಲಿದ್ದಾರೆ ಎಂದರು.
ಹೊಡಾಘಟ್ಟ ಗ್ರಾಪಂನಲ್ಲಿ ಸ್ವಾತಂತ್ರ್ಯ ದಿನಾಚರಣೆಮಂಡ್ಯ: ತಾಲೂಕಿನ ಹೊಡಾಘಟ್ಟ ಗ್ರಾಪಂನಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ನೂತನ ಅಧ್ಯಕ್ಷ ಎ.ಚಂದ್ರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಇದೇ ವೇಳೆ 10 ತರಗತಿಯ ಹೆಣ್ಣು ಮಕ್ಕಳಿಗೆ ಮುಟ್ಟಿನ ಕಪ್ ವಿತರಿಸಲಾಯಿತು. ಜತೆಗೆ ಸರ್ಕಾರದಿಂದ ಪ್ರತಿ ಗ್ರಾಪಂಗೆ 2ನೇ ಡಿಜಿಟಲ್ ಗ್ರಂಥಾಲಯವನ್ನು ಹೊನ್ನಾಯಕನಹಳ್ಳಿ ಗ್ರಾಮದಲ್ಲಿ ಹೊಸದಾಗಿ ಉದ್ಘಾಟನೆ ಮಾಡಲಾಯಿತು.ಈ ವೇಳೆ ಗ್ರಾಪಂ ಉಪಾಧ್ಯಕ್ಷೆ ದೇವಮ್ಮ, ಮಾಜಿ ಅಧ್ಯಕ್ಷರಾದ ಎಚ್.ಬಿ.ಆನಂದ, ಬಿ.ಎಸ್.ಮಹೇಶ್, ಪ್ರತಿಮಾ ಚಲುವರಾಜು, ಮಾಜಿ ಉಪಾಧ್ಯಕ್ಷರಾದ ಎಚ್.ಎಸ್.ನಿತ್ಯಶ್ರೀ, ಮಂಜುಳಾ, ಸದಸ್ಯರಾದ ನಾರಾಯಣ, ಗಣೇಶ, ಪಿಡಿಒ ಎಲ್.ಪಿ.ಕೋಮಲ, ಮುಖಂಡರಾದ ಮನುಕುಮಾರ್, ಎಚ್.ಎಲ್.ಶಂಕರೇಗೌಡ, ಎನ್.ಎಸ್.ಚಲುವರಾಜು, ವಕೀಲ ರವಿಶಂಕರ್, ಪಂಚಾಯ್ತಿ ಸಿಬ್ಬಂದಿ, ಶಾಲಾ ಮಕ್ಕಳು, ಶಿಕ್ಷಕರು ಹಾಜರಿದ್ದರು.