ಸೋಮವಾರಪೇಟೆ: ಪರಿಶಿಷ್ಟ ಜಾತಿ ವಿಭಾಗದ ಕುಂದುಕೊರತೆ ಸಭೆ

| Published : Jul 27 2025, 12:05 AM IST

ಸಾರಾಂಶ

ಕಾಂಗ್ರೆಸ್‌ನ ಸೋಮವಾರಪೇಟೆ ಬ್ಲಾಕ್‌ ಪರಿಶಿಷ್ಟ ಜಾತಿ ಇಲಾಖೆ ವತಿಯಿಂದ ಅಂಬೇಡ್ಕರ್‌ ಭವನದಲ್ಲಿ ಪರಿಶಿಷ್ಟ ಜಾತಿ ವಿಭಾಗದ ಕುಂದು ಕೊರತೆ ಸಭೆ ನಡೆಯಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಕಾಂಗ್ರೆಸ್‌ನ ಸೋಮವಾರಪೇಟೆ ಬ್ಲಾಕ್ ಪರಿಶಿಷ್ಟ ಜಾತಿ ಇಲಾಖೆ ವತಿಯಿಂದ ಅಂಬೇಡ್ಕರ್ ಭವನದಲ್ಲಿ ಪರಿಶಿಷ್ಟ ಜಾತಿ ವಿಭಾಗದ ಕುಂದುಕೊರತೆ ಸಭೆ ನಡೆಯಿತು.ಶಾಸಕ ಡಾ. ಮಂತರ್ ಗೌಡ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಹಲವಷ್ಟು ವಿಚಾರಗಳು ಚರ್ಚೆಗೆ ಬಂದವು. ಕೊಡ್ಲಿಪೇಟೆ ಹೋಬಳಿಯ ಕಿರಿಕೊಡ್ಲಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ರಾಧಾ ಅವರ ಮನೆಯನ್ನು ಅರಣ್ಯ ಇಲಾಖೆಯವರು ಕೆಡವಿ ತೊಂದರೆ ನೀಡಿದ್ದಾರೆ ಎಂದು ಸಭೆಯಲ್ಲಿದ್ದವರು ಶಾಸಕರ ಗಮನಕ್ಕೆ ತಂದರು.ಶಾಸಕ ಮಂತರ್ ಅವರು, ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ ತರಾಟೆಗೆ ತೆಗದುಕೊಂಡು, ಈ ಬಗ್ಗೆ ಪುನರ್ ಪರಿಶೀಲನೆ ಮಾಡುವಂತೆ ಸೂಚಿಸಿದರು. ಪಟ್ಟಣ ಪಂಚಾಯಿತಿಯಿಂದ ಪೌರಕಾರ್ಮಿಕರಿಗೆ ನಿವೇಶನ ನೀಡುವ ಸಂದರ್ಭ ಹಿರಿತನ ಆಧಾರದ ಮೇಲೆ ನೀಡಬೇಕು ಎಂದು ಪೌರಕಾರ್ಮಿಕರು ಒತ್ತಾಯಿಸಿದರು.ಕೊಡ್ಲಿಪೇಟೆ, ನೀರುಗುಂದ ವ್ಯಾಪ್ತಿಯಲ್ಲಿ ರಸ್ತೆಗಳು ಹದಗೆಟ್ಟಿವೆ. ಹೊನ್ನವಳ್ಳಿಯಲ್ಲಿ ರಸ್ತೆ ಹಾಗೂ ತಡೆಗೋಡೆ ಅವಶ್ಯಕತೆಯಿದೆ. ಶಿರಹ, ಕೂಗೇಕೋಡಿ ಗ್ರಾಮಕ್ಕೆ ನೂತನವಾಗಿ ಅಂಬೇಡ್ಕರ್ ಭವನ ಆಗಬೇಕಿದೆ. ಪರಿಶಿಷ್ಟ ಜಾತಿಗೆ ಸೇರಿದ ಮಂದಿಯ ಜಾಗದ ಹದ್ದುಬಸ್ತು ಆಗುತ್ತಿಲ್ಲ ಎಂಬ ದೂರುಗಳು ಸಭೆಯಲ್ಲಿ ಕೇಳಿಬಂದವು. ಎಲ್ಲಾ ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಆಲಿಸಿದ ಶಾಸಕರು, ಆದ್ಯತೆಯ ಮೇರೆ ಕ್ರಮ ವಹಿಸುವುದಾಗಿ ಭರವಸೆಯಿತ್ತರು.ಪರಿಶಿಷ್ಟ ಜಾತಿ ವಿಭಾಗದ ಬ್ಲಾಕ್ ಅಧ್ಯಕ್ಷ ಹೆಚ್.ಬಿ. ರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಇಲಾಖೆಯ ಅಧ್ಯಕ್ಷ ಬಿ.ಈ. ಜಯೇಂದ್ರ, ರಾಜ್ಯ ಸಮಿತಿ ಸದಸ್ಯ ಮಂಜುನಾಥ್, ವಕ್ತಾರ ಟಿ.ಈ. ಸುರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.