ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರಸಭೆ ವ್ಯಾಪ್ತಿಯ ಕರ್ಣಂಗೇರಿ ಗ್ರಾಮ ಬಳಿಯ ಉಕ್ಕುಡದಲ್ಲಿ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಮನೆ ನಿರ್ಮಾಣಕ್ಕೆ ಶಾಸಕ ಡಾ.ಮಂತರ್ ಗೌಡ ಬುಧವಾರ ಚಾಲನೆ ನೀಡಿದರು.ಗೃಹಭಾಗ್ಯ ಯೋಜನೆಯಡಿ ತಲಾ 7.50 ಲಕ್ಷ ರು. ವೆಚ್ಚದಲ್ಲಿ 12 ಮನೆಗಳಿಗೆ ಸುಮಾರು 90 ಲಕ್ಷ ರು. ವೆಚ್ಚದಲ್ಲಿ ನೆಲಮಹಡಿ ಸೇರಿ ಮೂರು ಅಂತಸ್ತಿನ 12 ಮನೆಗಳನ್ನು ಒಳಗೊಂಡ ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಗೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಸರ್ಕಾರ ಪೌರಕಾರ್ಮಿಕರಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ವಹಿಸಿದೆ ಎಂದರು.ಪೌರಕಾರ್ಮಿಕರು ಪ್ರತಿ ನಿತ್ಯ ನಗರ ಪಟ್ಟಣ ಪ್ರದೇಶದಲ್ಲಿ ಸ್ವಚ್ಛತೆಗೆ ದುಡಿಯುತ್ತಾರೆ. ಇವರಿಗೆ ಮೂಲಸೌಲಭ್ಯ ಕಲ್ಪಿಸುವುದು ಹೆಚ್ಚಿನ ಆದ್ಯತೆಯಾಗಿದೆ. ಆ ನಿಟ್ಟಿನಲ್ಲಿ ಶೀಘ್ರ ಮನೆ ನಿರ್ಮಾಣದ ಕಾಮಗಾರಿ ಆರಂಭಿಸಿ, ಪೂರ್ಣಗೊಳಿಸಬೇಕು ಎಂದರು.
ಉಕ್ಕುಡದಲ್ಲಿ ಅಂಬೇಡ್ಕರ್ ಭವನವನ್ನು ಸಹ ನಿರ್ಮಿಸಬೇಕಿದೆ. ಆ ನಿಟ್ಟಿನಲ್ಲಿ 2 ಎಕರೆ ಜಾಗವನ್ನು ಕಾಯ್ದಿರಿಸಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು. ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಭೇಟಿ ಮಾಡಿ ಹೆಚ್ಚಿನ ಅನುದಾನ ಬಿಡುಗಡೆಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.ಉಕ್ಕುಡ ಜಾಗಕ್ಕೆ ಬರುವ ರಸ್ತೆ ಅಗಲೀಕರಣ ಮಾಡಬೇಕು. ಈಗಾಗಲೇ ಪೈಸಾರಿ ಜಾಗದಲ್ಲಿ ವಾಸಿಸುತ್ತಿರುವವರಿಗೆ ಜಾಗ ಹಕ್ಕುಪತ್ರ ನೀಡುವಂತಾಗಬೇಕು. ನಿವೇಶನ ರಹಿತರಿಗೂ ನಿವೇಶನ ಒದಗಿಸುವಂತಾಗಬೇಕು ಎಂದು ಸಲಹೆ ನೀಡಿದರು.
ಬಳಿಕ ನಗರೋತ್ಥಾನ 4ನೇ ಹಂತದಡಿ ಪಿಕೆಜಿಬಿ ನಿವೇಶನಕ್ಕೆ ಸಂಪರ್ಕ ಕಲ್ಪಿಸುವ ಸಿಸಿರಸ್ತೆ 218 ಮೀ. ಉದ್ದ 12 ಲಕ್ಷ ರು.. ಪಿಕೆಜಿಬಿ ಜಾಗಕ್ಕೆ ಸಂಪರ್ಕ ಕಲ್ಪಿಸುವ ಸಿಸಿಉಪರಸ್ತೆ 120 ಮೀ. ಉದ್ದ 6.75 ಲಕ್ಷ ರು. ಪಿಕೆಜಿಬಿ ಸೈಟ್ ವ್ಯಾಪ್ತಿಯಲ್ಲಿ ಮಳೆ ನೀರು ಚರಂಡಿ ನಿರ್ಮಾಣ ಕಾಮಗಾರಿ 200 ಮೀ., 10 ಲಕ್ಷ ರೂ. ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ 5 ಲಕ್ಷ ರು. ಗೃಹಭಾಗ್ಯ ಸೇರಿದಂತೆ ಒಟ್ಟು 123.75 ಲಕ್ಷ ರು. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದರು.ನಗರದ ಗೌಳಿಬೀದಿಯಲ್ಲಿರುವ ಚೆರಿಯಮನೆ ಪೊನ್ನಪ್ಪ ಅವರ ಆಟದ ಮೈದಾನ/ ಉದ್ಯಾನವನ ಅಭಿವೃದ್ಧಿಗೆ ಶಾಸಕರು ಚಾಲನೆ ನೀಡಿದರು.
ನಗರಸಭೆ ವತಿಯಿಂದ 2.50 ಲಕ್ಷ ರು.ಗೆ ಅನುಮೋದನೆ ದೊರೆತಿದೆ. ಹಾಗೆಯೇ ಶಾಸಕರ ನಿಧಿಯಡಿ 5 ಲಕ್ಷ ರು. ಬಿಡುಗಡೆ ಮಾಡಲಾಗುವುದು. ಚೆರಿಯಮನೆ ಪೊನ್ನಪ್ಪ ಆಟದ ಮೈದಾನಕ್ಕೆ ಜಾಗ ನೀಡಿದ್ದಾರೆ. ಆ ನಿಟ್ಟಿನಲ್ಲಿ ಈ ಉದ್ಯಾನ ಅಭಿವೃದ್ಧಿಪಡಿಸಲಾಗುವುದು. ಸ್ಥಳೀಯರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.ಮಲ್ಲಳ್ಳಿ ಜಲಪಾತ ಅಭಿವೃದ್ಧಿ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಾ.ಮಂತರ್ ಗೌಡ, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀ ಜತೆ ಈಗಾಗಲೇ ಚರ್ಚಿಸಲಾಗಿದೆ. ಕೇಬಲ್ ಕಾರ್ ಅಳವಡಿಕೆಗೆ ಅವಕಾಶವಿದ್ದು, ಪಿಪಿಟಿ ಮಾದರಿಯಲ್ಲಿ ಅನುಷ್ಠಾನಗೊಳಿಸಬೇಕಿದೆ ಎಂದರು.
ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ವಿಧಾನಪರಿಷತ್ ಮಾಜಿ ಸದಸ್ಯ ವೀಣಾ ಅಚ್ಚಯ್ಯ, ನಗರಸಭಾ ಸದಸ್ಯ ಅರುಣ್ ಶೆಟ್ಟಿ, ಸತೀಶ್, ಸಬಿತಾ, ಜಗದೀಶ್, ಸದಾ, ಮುಡಾ ಸದಸ್ಯರಾದ ಚಂದ್ರಶೇಖರ್, ನಗರಸಭೆ ಮಾಜಿ ಅಧ್ಯಕ್ಷ ಕಾವೇರಮ್ಮ ಸೋಮಣ್ಣ, ಜುಲೈಕಾಬಿ, ಪ್ರಮುಖರಾದ ಟಿ.ಪಿ.ರಮೇಶ್, ಸುರಯ್ಯ ಅಬ್ರಾರ್, ನವೀನ್ ಅಂಬೆಕಲ್ಲು, ಪೌರಾಯುಕ್ತರಾದ ಎಚ್.ಆರ್.ರಮೇಶ್, ನಗರಸಭೆ ಎಂಜಿನಿಯರ್ ಸತೀಶ್, ಹೇಮಂತ್ ಮತ್ತಿತರರಿದ್ದರು.;Resize=(128,128))
;Resize=(128,128))