ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ಸಂಸದ ಶ್ರೇಯಸ್ ಪಟೇಲ್ ನಡೆ ಸಕಲೇಸಪುರ ಶಾಸಕ ಸಿಮೆಂಟ್ ಮಂಜು ಆಕ್ರೋಶಕ್ಕೆ ಕಾರಣವಾಗಿದೆ.ಸಂಸದ ಶ್ರೇಯಸ್ ಪಟೇಲ್ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಶಾಸಕರ ಗೈರಿನಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಅಧೀಕೃತ ಸಭೆ ನಡೆಸಿರುವುದು ಶಾಸಕರ ಆಕ್ರೋಶಕ್ಕೆ ಕಾರಣವಾಗಿದ್ದು, ಸಭೆ ನಡೆಸಲು ಅನುವು ಮಾಡಿಕೊಟ್ಟ ಅಧಿಕಾರಿಗಳು ಹಾಗೂ ಸಂಸದರ ವಿರುದ್ಧ ಸರ್ಕಾರಕ್ಕೆ ದೂರು ನೀಡಲು ಶಾಸಕ ಮಂಜು ಸಜ್ಜಾಗಿದ್ದಾರೆ.
೧೯೮೯ರ ನಂತರದ ಮೂರೂವರೆ ದಶಕದ ಅವಧಿಯಲ್ಲಿ ತಾಲೂಕಿನಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲು ವಿಫಲವಾಗಿದ್ದು, ಕಳೆದ ಚುನಾವಣೆ ಗೆಲ್ಲಲೇಬೇಕು ಎಂಬ ದೃಷ್ಟಿಯಿಂದ ಶಕ್ತಿಮೀರಿ ಸಂಘಟನೆ ಮಾಡಿದರು. ಸರಾಸರಿಗಿಂತ ನಾಲ್ಕುಸಾವಿರ ಹೆಚ್ಚು ಮತಗಳಿಸಲಷ್ಟೆ ಪಕ್ಷ ಶಕ್ತವಾಗಿದೆ. ಆದ್ದರಿಂದ, ಮತ್ತಷ್ಟು ಸಂಘಟನೆ ನಡೆಸುವ ಮೂಲಕ ಜನರಿಗೆ ಹತ್ತಿರವಾಗಬೇಕು ಎಂಬ ಉದ್ದೇಶದಿಂದ ಸಂಸದರ ಮೂಲಕ ತಾಲೂಕು ಆಡಳಿತವನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳುವ ಯತ್ನವನ್ನು ತಾಲೂಕು ಕಾಂಗ್ರೆಸ್ ನಾಯಕರು ಹೊಂದಿದ್ದು, ಇದೇ ಉದ್ದೇಶಕ್ಕಾಗಿ ಜನವರಿ ೪ರಂದು ಸಂಸದರ ನೇತೃತ್ವದಲ್ಲಿ ಪಟ್ಟಣದಲ್ಲಿ ಸಭೆ ನಡೆಸಲು ಉದ್ದೇಶಿಸಿ ಕರಪತ್ರಗಳನ್ನು ಹಂಚಲಾಗಿತ್ತು. ಆದರೆ, ಸಂವಿಧಾನದಲ್ಲಿ ಸಂಸದರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದಲ್ಲಿ ಸಭೆ ನಡೆಸಲು ಅವಕಾಶವಿಲ್ಲ ಎಂಬುದನ್ನು ಅಧಿಕಾರಿಗಳಿಗೆ ಮನದಟ್ಟುಮಾಡಿದ ಶಾಸಕ ಸಿಮೆಂಟ್ ಮಂಜು ಸಭೆಯನ್ನು ರದ್ದುಪಡಿಸಿದ್ದರು.ಸಭೆ ರದ್ದಾದ ಹಿನ್ನೆಲೆಯಲ್ಲಿ ಸಂಸದರ ತಾಲೂಕು ಪ್ರವಾಸವೂ ಸಹ ರದ್ದಾಗಿತ್ತು. ಆದರೆ, ಏಕಾಏಕಿ ಜನವರಿ ೬ರಂದು ತಾಲೂಕು ಪ್ರವಾಸ ಕೈಗೊಂಡ ಸಂಸದರು, ಪಟ್ಟಣದ ಮಿನಿ ವಿಧಾನಸೌಧದಲ್ಲಿ ಮಧ್ಯಾಹ್ನ ೨ರಿಂದ ಐದು ಗಂಟೆವರಗೆ ಅಧಿಕಾರಿಗಳ ಸಭೆ ನಡೆಸಿ ಅಧಿಕಾರಿಗಳಿಂದ ಅಭಿವೃದ್ಧಿ ಕಾರ್ಯಗಳ ಮಾಹಿತಿ ಸಂಗ್ರಹಿಸಿ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆ ಸೇರಿದಂತೆ ಹಲವು ಕಚೇರಿಗಳ ಭೇಟಿ ನೀಡಿ ವಾಪಸ್ಸಾಗಿದ್ದಾರೆ. ಸಂಸದರ ಈ ನಡೆ ಶಾಸಕರ ಆಕ್ರೋಶಕ್ಕೆ ಕಾರಣವಾಗಿದ್ದು ಕ್ಷೇತ್ರದಲ್ಲಿ ನಾನಿಲ್ಲದ ವೇಳೆ ಅಧಿಕಾರಿಗಳ ಸಭೆ ನಡೆಸುವುದು ಎಂದರೆ ಏನಾರ್ಥ, ತಾಲೂಕು ಆಡಳಿತದ ಮೇಲೆ ಅಧಿಕಾರ ಸ್ಥಾಪನೆ ಮಾಡುವುದು ಇದರ ಹಿಂದಿರುವ ಉದ್ದೇಶವಾಗಿದೆ. ಅನಾವಶ್ಯಕವಾಗಿ ಸಂವಿಧಾನಕ್ಕೆ ಅಪಚಾರ ಮಾಡುತ್ತಿರುವ ಸಂಸದರ ನಡೆಯ ಬಗ್ಗೆ ಸದನದಲ್ಲಿ ಧ್ವನಿ ಎತ್ತಲಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಹಸೀಲ್ದಾರ್‌ಗೆ ಸಂಕಷ್ಟ; ಜನವರಿ ೪ರಂದು ಸಂಸದರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಭೆಯನ್ನು ಖುದ್ದು ಶಾಸಕ ಸಿಮೆಂಟ್ ಮಂಜು ರದ್ದುಪಡಿಸಿದ್ದರು. ಆದರೆ, ಜನವರಿ ಆರರಂದು ತಾಲೂಕು ಪ್ರವಾಸ ಎಂದು ತಾಲೂಕಿಗೆ ಭೇಟಿ ನೀಡಿದ ಸಂಸದರು ಅಧಿಕಾರಿಗಳ ಸಬೆ ನಡೆಸಿರುವುದು ಸದ್ಯ ಶಾಸಕರ ಮುನಿಸಿಗೆ ಕಾರಣವಾಗಿದ್ದು, ಸಭೆ ನಡೆಸಿರುವ ಬಗ್ಗೆ ಶಾಸಕರು ಸರ್ಕಾರಕ್ಕೆ ದೂರು ನಿಡಲು ಸಿದ್ಧತೆ ನಡೆಸಿದ್ದಾರೆ. ಆದರೆ ಸಂಸದರು ಹಾಗೂ ಶಾಸಕರ ನಡುವಿನ ತಿಕ್ಕಾಟದಿಂದ ತಪ್ಪಿಸಿಕೊಳ್ಳುವ ಬಗೆ ಹೇಗೆ ಎಂಬುದು ಸದ್ಯ ತಹಸೀಲ್ದಾರ್ ಅವರನ್ನು ಕಾಡುತ್ತಿದೆ. ವಾಗ್ವಾದ: ತಾಲೂಕಿನಲ್ಲಿ ಯಾವುದೇ ಕಾರ್ಯಗಳು ನಡೆಯಬೇಕಿದ್ದರೂ ತನ್ನ ಗಣನೆಗೆ ತರಬೇಕು ಎಂಬ ಪರಾಜಿತ ಅಭ್ಯರ್ಥಿ ಮುರಳಿಮೋಹನ್ ನಡವಳಿಕೆ ಸದ್ಯ ಇತರೆ ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಜನವರಿ ಆರರಂದು ತಾಲೂಕು ಪ್ರವಾಸಿಮಂದಿರಕ್ಕೆ ಸಂಸದರು ಭೇಟಿ ನೀಡಿದ್ದ ವೇಳೆ ಜಿಪಂ ಮಾಜಿ ಸದಸ್ಯ ಸಣ್ಣಸ್ವಾಮಿ ಹಾಸ್ಟೆಲ್ ಪ್ರವೇಶಕ್ಕಾಗಿ ಬೇಕಿರುವ ಅರ್ಜಿಗೆ ಸಂಸದರ ಸಹಿಪಡೆದಿದ್ದರು. ಇದರಿಂದ ಕೋಪಗೊಂಡ ಮುರಳಿ ಮೋಹನ್ ನನ್ನ ಕೇಳದೆ ಯಾವುದೆ ಲೇಟರ್‌ಗೂ ಸಹಿ ಮಾಡಬೇಡಿ ಎಂದು ಸಂಸದರಿಗೆ ಹೇಳಿದರು. ಇದರಿಂದ ಸಿಟ್ಟಾದ ಸಣ್ಣಸ್ವಾಮಿ ತಳಮಟ್ಟದಿಂದ ಪಕ್ಷ ನಾವು ಸಂಘಟಿಸಿದ್ದು ನೀವು ಬಂದು ಅಧಿಕಾರ ಸ್ಥಾಪಿಸುವುದು ಬೇಡ, ನಮಗೂ ಬೆಂಬಲಿಗರಿದ್ದಾರೆ ಎಂದರು. ಇದರಿಂದ ಇಬ್ಬರೂ ಮುಖಂಡರ ನಡುವೆ ಕೆಲಕಾಲ ಮಾತಿನ ಚಕಮಕಿಗೆ ಪ್ರವಾಸಿಮಂದಿರ ಸಾಕ್ಷಿಯಾಗಿತ್ತು.--------------------------------------------------------------------*ಹೇಳಿಕೆ-1
ಸುತ್ತೋಲೆಯಲ್ಲಿ ತಾಲೂಕು ಪ್ರವಾಸ ಎಂದಿದೆ. ಆದರೆ ಏಕಾಏಕಿ ಅಧಿಕಾರಿಗಳ ಸಭೆ ನಡೆಸಿದರೆ ನಾವೇನು ಮಾಡುವುದು.-ಮೇಘನಾ, ತಹಸೀಲ್ದಾರ್ (8ಎಚ್ಎಸ್ಎನ್3ಎ)*ಹೇಳಿಕೆ-2
ಸಂವಿಧಾನದಲ್ಲಿ ತಾಲೂಕು ಪ್ರಗತಿ ಪರಿಶೀಲನಾ ಸಭೆಯನ್ನು ಶಾಸಕರ ನೇತೃತ್ವದಲ್ಲಿ ನಡೆಸಬೇಕು ಎಂದಿದೆ. ಈ ಸಭೆಗೆ ಅತಿಥಿಯಾಗಿ ಸಂಸದರು ಭಾಗವಹಿಸಬಹುದೇ ಹೊರತು ಅವರೇ ಸಭೆ ನಡೆಸುವಂತಿಲ್ಲ. ಸಭೆಗೆ ಅವಕಾಶ ಕೊಟ್ಟ ತಹಸೀಲ್ದಾರ್ ಹಾಗೂ ಸಂಸದರ ವಿರುದ್ಧ ಸರ್ಕಾರಕ್ಕೆ ದೂರು ನೀಡಲಿದ್ದೇನೆ.- ಸಿಮೆಂಟ್ ಮಂಜು, ಶಾಸಕ
----------------------------------------------------------------------