ಗೃಹಜ್ಯೋತಿ ಯೋಜನೆ; ಶೇ.100 ಪ್ರಗತಿ ಸಾಧಿಸಲು ಸೂಚನೆ

| Published : Nov 26 2024, 12:47 AM IST

ಸಾರಾಂಶ

ಅರ್ಹ 3,02,892 ಗ್ರಾಹಕರುಗಳಲ್ಲಿ ಇಲ್ಲಿಯವರೆಗೆ 2,80,282 ಗ್ರಾಹಕರುಗಳು ಗೃಹಜ್ಯೋತಿಗೆ ನೋಂದಣಿಯಾಗಿದ್ದಾರೆ.

ಬಳ್ಳಾರಿ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯ ಅರ್ಹ ವಿದ್ಯುತ್ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳುವಂತಾಗಬೇಕು. ಬಳ್ಳಾರಿ ಜಿಲ್ಲೆ ಈ ಯೋಜನೆಯಡಿ ಶೇ.100 ಪ್ರಗತಿ ಸಾಧಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಕೆ.ಇ. ಚಿದಾನಂದಪ್ಪ ತಿಳಿಸಿದರು.ಗೃಹಜ್ಯೋತಿ ಯೋಜನೆಯ ಪರಿಣಾಮಕಾರಿ ಅನುಷ್ಠಾನದ ಕುರಿತು ನಗರದ ಬುಡಾ ಕಾಂಪ್ಲೆಕ್ಸ್ ಹಿಂಭಾಗದ ಜೆಸ್ಕಾಂ ವಲಯ ಕಚೇರಿಯ ಸಭಾಂಗಣದಲ್ಲಿ ಜರುಗಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಒಟ್ಟು ಅರ್ಹ 3,02,892 ಗ್ರಾಹಕರುಗಳಲ್ಲಿ ಇಲ್ಲಿಯವರೆಗೆ 2,80,282 ಗ್ರಾಹಕರುಗಳು ಗೃಹಜ್ಯೋತಿಗೆ ನೋಂದಣಿಯಾಗಿದ್ದಾರೆ. ಬಹುಸ್ಥಾವರಗಳು, ಖಾಲಿ ಮನೆಗಳು, ವಲಸೆ ಕಾರ್ಮಿಕರ ಸ್ಥಾವರಗಳು 12,410 ಗಳನ್ನು ಹೊರತುಪಡಿಸಿ ಶೇ.96 ನೋಂದಣಿಯಾಗಿರುವುದು ತೃಪ್ತಿಕರ ವಿಷಯವಾಗಿದೆ. ಮುಖ್ಯಮಂತ್ರಿಯವರ ಆಶಯದಂತೆ ಜಿಲ್ಲೆಯಲ್ಲಿ ಶೇ.100 ರಷ್ಟು ನೋಂದಣಿಯ ಪ್ರಗತಿ ಸಾಧಿಸಬೇಕಾಗಿದೆ. ಈ ದಿಸೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಸಮರ್ಪಕ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರು ಸಹ ಕೈ ಜೋಡಿಸಬೇಕು ಎಂದರು.

ಜಿಲ್ಲೆಯಲ್ಲಿ ಅರ್ಹತೆಯಿದ್ದು ನೋಂದಣಿ ಮಾಡಿಕೊಳ್ಳದ 10,200 ಗ್ರಾಹಕರುಗಳು ತಕ್ಷಣವೇ ತಮ್ಮ ಆಧಾರ್‌ಕಾರ್ಡ್ ಮತ್ತು ವಿದ್ಯುತ್ ಬಿಲ್‌ನೊಂದಿಗೆ ಹತ್ತಿರದ ಜೆಸ್ಕಾಂ ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳುವಂತೆ ತಿಳಿಸಬೇಕು ಎಂದು ಹೇಳಿದರು.

ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಬಡವರ ಪರವಾಗಿದ್ದು, ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಾರ್ವಜನಿಕರನ್ನು ಉತ್ತೇಜಿಸಬೇಕು, ಯೋಜನೆಯ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪರಿಸರ ಮಾಲಿನ್ಯ ರಹಿತ ವಿದ್ಯುತ್ ಉತ್ಪಾದನೆಗೆ ಸೋಲಾರ್ ಅಳವಡಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಬೇಕು. ಸೋಲಾರ್ ಬಳಕೆಯಿಂದಾಗುವ ಅನುಕೂಲಗಳ ಕುರಿತು ಜನರಿಗೆ ತಿಳಿಸಿಕೊಡಬೇಕು. ಆದಷ್ಟು ವಿದ್ಯುತ್ ಬಳಕೆಯನ್ನು ಕಡಿಮೆಗೊಳಿಸಿ, ಸೋಲಾರ್ ಬಳಕೆಗೆ ಉತ್ತೇಜಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಜೆಸ್ಕಾಂ ಬಳ್ಳಾರಿ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಂಗನಾಥ ಬಾಬು.ಜೆ., ಲೆಕ್ಕಾಧಿಕಾರಿ ಸುಕುಮಾರ್ ಮತ್ತು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷರುಗಳಾದ ಎನ್.ಕರಿಬಸಪ್ಪ, ಸಂಗನಕಲ್ಲು ವಿಜಯ್ ಕುಮಾರ್, ಆರ್.ಎಸ್ ಚಾಂದ್‌ಬಾಷ, ತಾಲೂಕು ಅಧ್ಯಕ್ಷ ಮಾರುತಿ ಪ್ರಸಾದ್ ರೆಡ್ಡಿ, ಶ್ರೀನಿವಾಸಲು ರಾವ್, ಗೋನಾಳ್ ನಾಗಭೂಷಣ ಗೌಡ ಮತ್ತು ಸದಸ್ಯರಾದ ಮಲ್ಲಿಕಾರ್ಜುನ, ಶೇಖರ್, ತಾಯಣ್ಣ, ಶಿವರಾಜ, ತಿಪ್ಪೇರುದ್ರ, ಯಾಳ್ಪಿ ಮೇಟಿ ದಿವಾಕರ್ ಗೌಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.