ಕಡೂರುಸರ್ಕಾರಕ್ಕೆ ಆರ್ಥಿಕ ಹೊರೆಯಾಗಬಾರದೆಂಬ ನಿಟ್ಟಿನಲ್ಲಿ ಗೃಹಜ್ಯೋತಿ ಪರಿಷ್ಕರಣೆ ಕಾರ್ಯ ನಡೆಸಲಾಗುತ್ತಿದೆ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ ಹೇಳಿದರು.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ, ಮೆಸ್ಕಾಂ ಅಧಿಕಾರಿಗಳಿಗೆ ಗೃಹಜ್ಯೊತಿ ಪರಿಷ್ಕರಣೆ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ, ಕಡೂರು

ಸರ್ಕಾರಕ್ಕೆ ಆರ್ಥಿಕ ಹೊರೆಯಾಗಬಾರದೆಂಬ ನಿಟ್ಟಿನಲ್ಲಿ ಗೃಹಜ್ಯೋತಿ ಪರಿಷ್ಕರಣೆ ಕಾರ್ಯ ನಡೆಸಲಾಗುತ್ತಿದೆ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ ಹೇಳಿದರು.

ಬುಧವಾರ ಪಟ್ಟಣದ ತಾಪಂ ಸಭಾಂಗಣದಲ್ಲಿ ಕಡೂರು, ತರೀಕೆರೆ ಹಾಗೂ ಅಜ್ಜಂಪುರ ತಾಲೂಕು ವ್ಯಾಪ್ತಿಯ ಗ್ಯಾರಂಟಿ ಅನುಷ್ಠಾನ ಸಮಿತಿ ಹಾಗೂ ಮೆಸ್ಕಾಂ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಗೃಹಜ್ಯೊತಿ ಪರಿಷ್ಕರಣೆ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಜ್ಯ, ಸರ್ಕಾರ ಜನಸಾಮಾನ್ಯರ ಬದುಕಿಗೆ ಸ್ಪಂದಿಸಲು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಯೋಜನೆ ಪಡೆಯುವ ಫಲಾನುಭವಿಗಳಲ್ಲಿ ಅರ್ಹರನ್ನು ಉಳಿಸಿಕೊಳ್ಳಬೇಕೆಂಬ ಉದ್ದೇಶ ದೊಂದಿಗೆ ಗೃಹಜ್ಯೋತಿ ಪರಿಷ್ಕರಣೆ ಕಾರ್ಯ ನಡೆಸಲಾಗುತ್ತದೆ ಎಂದರು.

ಈಗಾಗಲೇ ಗೃಹಜ್ಯೋತಿ ಪರಿಷ್ಕರಣೆ ಆರಂಭವಾಗಿದೆ. ಈ ಯೋಜನೆಯಲ್ಲಿ ಕೆಲ ದುರುಪಯೋಗ ತಡೆಗಟ್ಟುವ ನಿಟ್ಟಿನಲ್ಲಿ ಮೀಟರ್ ರೀಡರ್‌ಗಳ ಮೂಲಕ ಸ್ಥಳದಲ್ಲೇ ಪರಿಶೀಲಿಸಲಾಗುತ್ತದೆ. ಗ್ರಾಹಕರು ಮತ್ತು ಫಲಾನುಭವಿಗಳು ಮೀಟರ್ ರೀಡರ್‌ ಗಳಿಗೆ ಸಹಕಾರ ನೀಡಬೇಕಿದೆ. ಪರಿಷ್ಕರಣೆಯಲ್ಲಿ ಮೀಟರ್ ರೀಡರ್‌ಗಳು ಫಲಾನುಭವಿ ಮನೆಗಳಿಗೆ ತೆರಳಿ ಅಗತ್ಯ ದಾಖಲೆಯ ಮಾಹಿತಿಯೊಂದಿಗೆ ಪರಿಶೀಲಿಸಿ ಅರ್ಹರನ್ನು ಉಳಿಸಬೇಕು. ಸಾರ್ವಜನಿಕರಿಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವುದು ಆದ್ಯ ಕರ್ತವ್ಯ ಎಂದರು.

ಮೆಸ್ಕಾಂ ಸೂಪರಿಂಟೆಂಡೆಂಟ್ಸೆ ಎಂಜಿನಿಯರ್ ಮಂಜುನಾಥ್ ಮಾತನಾಡಿ ಜಿಲ್ಲೆಯಲ್ಲಿ 3.15 ಲಕ್ಷ ಮನೆಗಳ ಮೀಟರ್‌ ಗಳು ಗೃಹಜ್ಯೋತಿ ಯೋಜನೆಯಡಿ ನೋಂದಾಯಿಸಿದ್ದು, ಈಗಾಗಲೇ ಕಡೂರು-ತರೀಕೆರೆ ಹಾಗೂ ಅಜ್ಜಂಪುರ ತಾಲೂಕು ಗಳಲ್ಲಿ 1.40.387 ಮನೆಗಳಲ್ಲಿ, ಕಡೂರು(15405), ತರೀಕೆರೆ(7869), ಅಜ್ಜಂಪುರ(5129) ಒಟ್ಟು 28403 ಮೀಟರ್‌ಗಳ ಪರಿಷ್ಕರಣೆಯಾಗಿದೆ. ಜು.31ರವರೆಗೆ ಪರಿಷ್ಕರಣೆ ನಡೆಯಲಿದೆ ಎಂದರು.

ಗೃಹಜ್ಯೋತಿ ಯೋಜನೆ ಫಲಾನುಭವಿಗಳು ವಿದ್ಯುತ್ ಸಂಪರ್ಕದ ವಿದ್ಯುತ್ ಬಿಲ್, ಆಧಾರ್ ಕಾರ್ಡ್, ಪಡಿತರ ಕಾರ್ಡ್ ವೋಟರ್ ಐಡಿ, ಅಗತ್ಯವಿದ್ದವರು ಮನೆ ಬಾಡಿಗೆ ಕರಾರು ನಕಲುಗಳನ್ನು ಮೊದಲೇ ಸಂಗ್ರಹಿಸಿ ಪರಿಷ್ಕರಣೆದಾರರು ಮನೆ ಬಳಿ ಬಂದಾಗ ಸೂಕ್ತ ಮಾಹಿತಿ ನೀಡಿದಲ್ಲಿ ಕೆಲವೇ ನಿಮಿಷಗಳಲ್ಲಿ ಫಲಾನುಭವಿಗಳ ಪರಿಷ್ಕರಣೆ ನಡೆಯಲಿದೆ ಇದು ಕರ್ನಾಟಕ ರಾಜ್ಯದ ಮತದಾರರಿಗೆ ಅನ್ವಯವಾಗಲಿದೆ ಎಂದರು..

ತಾಲೂಕು ಗ್ಯಾರಂಟಿ ಸಮಿತಿ ಸದಸ್ಯ ಸಪ್ತಕೋಟಿ ಧನಂಜಯ್ ಮಾತನಾಡಿ ಕೆಲವೆಡೆ ಮೀಟರ್ ರೀಡರ್‌ಗಳು ಮನೆ ಮನೆಗೆ ತೆರಳದೆ ಕೂತಲ್ಲೇ ಪರಿಷ್ಕರಣೆ ಕಾರ್ಯಕ್ಕೆ ಮುಂದಾಗುತ್ತಿದ್ದು, ಒಟಿಪಿ ಬಾರದ ಫಲಾನುಭವಿಗಳು ಮೆಸ್ಕಾಂ ಕಚೇರಿಗೆ ಬಂದು ಸರಿಪಡಿಸಿಕೊಳ್ಳುವಂತೆ ಸಬೂಬು ಹೇಳಿ ಹೋಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ಬರುತ್ತಿರುವ ದೂರುಗಳಿಂದ ಕೆಲ ಗೊಂದಲಗಳಿಗೆ ಕಾರಣವಾಗುತ್ತಿದೆ. ಸರಕಾರದ ಗೃಹಜ್ಯೋತಿ ಪರಿಷ್ಕರಣೆ ಬಗ್ಗೆ ಮೀಟರ್ ರೀಡರ್‌ಗಳು ಸಮರ್ಪಕವಾಗಿ ಜನರಿಗೆ ತಿಳಿಸುವ ಕಾರ್ಯವಾಗುತ್ತಿಲ್ಲ. ಮೊದಲು ಯೋಜನೆ ಪರಿಷ್ಕರಣೆ ಕುರಿತು ರೀಡರ್ ಗಳಿಗೆ ಮಾಹಿತಿ ಒದಗಿಸಿ ಕೊಡಬೇಕು ಎಂದು ಸೂಚಿಸಿದರು.

ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಆಸಂದಿ ಕಲ್ಲೇಶ್ ಮಾತನಾಡಿ ಸರಕಾರ ಗ್ಯಾರಂಟಿ ಯೋಜನೆಗಳನ್ನು ಪ್ರಾಮಾಣಿಕ ವಾಗಿ ಜನರಿಗೆ ತಲುಪಿಸುವ ಕಾರ್ಯವು ಅನುಷ್ಠಾನ ಸಮಿತಿ ಉದ್ದೇಶ. ಮೆಸ್ಕಾಂ ಅಧಿಕಾರಿಗಳು ಪರಿಷ್ಕರಣೆ ಕಾರ್ಯದಲ್ಲಿ ಸದಸ್ಯರು ಹೆಚ್ಚು ಒತ್ತು ಕೊಡುವ ಮೂಲಕ ಅರ್ಹರನ್ನು ಉಳಿಸಿಕೊಳ್ಳಲು ಆದ್ಯತೆ ನೀಡಿ ಎಂದರು.

ಅಜ್ಜಂಪುರ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಕುಮಾರ್ ಮಾತನಾಡಿ ಕೆಲ ಸಣ್ಣಪುಟ್ಟ ಗೊಂದಲಗಳನ್ನು ನಿವಾರಿಸಿ ಕೊಳ್ಳುವ ಉದ್ದೇಶದಿಂದ ಪರಿಷ್ಕರಣೆ ಕಾರ್ಯ ನಡೆಸಲಾಗುತ್ತಿದೆ. ಇದಕ್ಕೆ ನಾವೆಲ್ಲರೂ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಗೃಹಜ್ಯೋತಿ ಪರಿಷ್ಕರಣೆ ಕಾರ್ಯ ಯಶಸ್ವಿಗೊಳಿಸಬೇಕು ಎಂದರು.

ಈ ಸಂದರ್ಭದಲ್ಲಿ ಮೀಟರ್ ರೀಡರ್‌ಗಳು ತಮ್ಮ ವ್ಯಾಪ್ತಿಯಲ್ಲಿ ಎದುರಾಗುವ ಕೆಲ ಗೊಂದಲಗಳನ್ನು ಪರಿಹರಿಸಿ ಕೊಂಡರು. ಜಿಲ್ಲಾ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಬಾಸೂರು ಚಂದ್ರಮೌಳಿ, ಸಮೀವುಲ್ಲಾ ಷರೀಪ್, ಗುಜ್ಜೇನಹಳ್ಳಿ ತಿಪ್ಪೇಶ್, ತರೀಕೆರೆ ತಾಲೂಕು ಅಧ್ಯಕ್ಷೆ ಹೇಮಲತಾ, ಮೆಸ್ಕಾಂ ಇಇ ರವಿಕಿರಣ್, ಎಇಇಗಳಾದ ರಮೇಶ್, ವೀಣಾ, ರಾಜಪ್ಪ, ಮಂಜುನಾಥ್, ತಾಪಂ ಇಒ ಸಿ.ಆರ್. ಪ್ರವೀಣ್, ಸಿಡಿಪಿಒ ದೇವರಾಜ್ ಸೇರಿದಂತೆ ಮೀಟರ್ ರೀಡರ್‌ಗಳು ಹಾಗೂ ಸಿಬ್ಬಂದಿಗಳು ಇದ್ದರು.

15ಕೆಕೆಡಿಯು1.

ಕಡೂರಿನ ತಾಪಂ ಸಭಾಂಗಣದಲ್ಲಿ ಕಡೂರು,ತರೀಕೆರೆ ಹಾಗೂ ಅಜ್ಜಂಪುರ ತಾಲ್ಲೂಕುಗಳ ವ್ಯಾಪ್ತಿಗೆ ಒಳಪಟ್ಟ ಗೃಹಜ್ಯೊತಿ ಪರಿಷ್ಕರಣೆ ಕಾರ್ಯಗಾರದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಂಜುನಾಥ್, ರವಿಕಿರಣ್, ಚಂದ್ರಮೌಳಿ, ಆಸಂಧಿಕಲ್ಲೇಶ್, ಹೇಮಲತಾ, ಕುಮಾರ್, ಷರೀಪ್, ಸಿ.ಆರ್. ಪ್ರವೀಣ್ ಮತ್ತಿತರಿದ್ದರು.