ಕುಷ್ಟಗಿ: ಪಟ್ಟಣದ ತೆಗ್ಗಿನ ಓಣಿಯಲ್ಲಿರುವ ಗೃಹಲಕ್ಷ್ಮಿ ಯೋಜನೆ ಫಲಾನುಭವಿ ಮೂರು ಜನ ಮಹಿಳೆಯರು ಸೇರಿಕೊಂಡು ಯೋಜನೆಯಿಂದ ದೊರೆತ ಹಣ ಉಳಿತಾಯ ಮಾಡಿ ರೊಟ್ಟಿ ಮಿಷನ್ ಖರೀದಿಸಿ ಆರಂಭಿಸಿರುವ ರೊಟ್ಟಿ ಕೇಂದ್ರಕ್ಕೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ಇಲಾಖೆ ನೋಡಲ್ ಅಧಿಕಾರಿ ಅಕ್ಕಮಹಾದೇವಿ ಕೆ.ಎಚ್ ಭೇಟಿ ನೀಡಿ ರೊಟ್ಟಿ ಕೇಂದ್ರದಲ್ಲಿ ತಯಾರಾಗುತ್ತಿರುವ ರೊಟ್ಟಿಗಳ ಗುಣಮಟ್ಟ, ಉತ್ಪಾದನಾ ವಿಧಾನ ಹಾಗೂ ವ್ಯಾಪಾರದ ಬಗ್ಗೆ ಮಾಹಿತಿ ಪಡೆದು ಮಹಿಳೆಯ ಸಾಧನೆ ಶ್ಲಾಘಿಸಿದರು.

ನಂತರ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಯ ನೆರವಿನಿಂದ ಸ್ವಯಂ ಉದ್ಯೋಗ ಆರಂಭಿಸಿರುವುದು ಇತರ ಮಹಿಳೆಯರಿಗೂ ಮಾದರಿಯಾಗಿದೆ. ಸರ್ಕಾರದ ಯೋಜನೆ ಸಮರ್ಪಕವಾಗಿ ಬಳಸಿಕೊಂಡರೆ ಕುಟುಂಬದ ಆದಾಯ ಹೆಚ್ಚಿಸಿಕೊಳ್ಳುವುದರ ಜತೆಗೆ ಆರ್ಥಿಕವಾಗಿ ಸದೃಢರಾಗಬಹುದು ಎಂದ ಅವರು, ರೊಟ್ಟಿ ಕೇಂದ್ರ ಇನ್ನಷ್ಟು ವಿಸ್ತರಿಸಿ ಹೆಚ್ಚಿನ ಆದಾಯ ಗಳಿಸುವಂತೆ ಸಲಹೆ ನೀಡಿದ ಅವರು, ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಇಲಾಖೆಯ ವಿವಿಧ ಸ್ವಯಂ ಉದ್ಯೋಗ ಯೋಜನೆ, ತರಬೇತಿ ಮತ್ತು ಆರ್ಥಿಕ ನೆರವು ಸೇರಿದಂತೆ ಲಭ್ಯವಿರುವ ಸೌಲಭ್ಯ ಒದಗಿಸಲು ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಅಂಗನವಾಡಿ ಕೇಂದ್ರಕ್ಕೆ ಭೇಟಿ: ತಾಲೂಕಿನ ಗುಮಗೇರಾ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಕೇಂದ್ರದಲ್ಲಿ ಮಕ್ಕಳಿಗೆ ಒದಗಿಸಲಾಗುತ್ತಿರುವ ಸೇವೆಗಳು, ಪೌಷ್ಟಿಕ ಆಹಾರ ವಿತರಣೆ, ದಾಖಲಾತಿ ನಿರ್ವಹಣೆ, ಮೂಲಸೌಕರ್ಯ ಪರಿಶೀಲಿಸಿದರು. ಮಕ್ಕಳ ಆರೈಕೆ ಮತ್ತು ಪೌಷ್ಟಿಕಾಂಶದ ವಿಷಯದಲ್ಲಿ ಯಾವುದೇ ನಿರ್ಲಕ್ಷ್ಯ ವಹಿಸದೇ ಗುಣಮಟ್ಟದ ಸೇವೆ ನೀಡುವಂತೆ ಅಂಗನವಾಡಿ ಸಿಬ್ಬಂದಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಅಮರೇಶ ಹಾವಿನ್, ಸಿಡಿಪಿಒ ಇಲಾಖೆಯ ಅಧಿಕಾರಿ, ಮೇಲ್ವಿಚಾರಕಿಯರು ಸೇರಿದಂತೆ ಅನೇಕರು ಇದ್ದರು.