ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮಹಿಳೆಯರು ಆರ್ಥಿಕವಾಗಿ ಸದೃಢಗೊಂಡು ಸ್ವಾವಲಂಬಿ ಬದುಕು ಸಾಗಿಸಬೇಕೆಂಬ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಗೃಹಲಕ್ಷ್ಮಿ ಯೋಜನೆಯಲ್ಲಿ ಚಾಮರಾಜನಗರ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ.ಪಡಿತರ ಕಾರ್ಡ್ ಹೊಂದಿರುವ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2 ಸಾವಿರ ರು. ನೀಡುವ ಗೃಹಲಕ್ಷ್ಮಿ ಯೋಜನೆಗೆ 2023ರ ಜು.19 ರಂದು ಚಾಲನೆ ನೀಡಲಾಯಿತು. ಆ.2023ರಲ್ಲಿ ಫಲಾನುಭವಿಗಳಿಗೆ ಮೊದಲ ಕಂತಿನ ಹಣ ಜಮೆಯಾಯಿತು. ಚಾಮರಾಜನಗರ ಜಿಲ್ಲೆಯು ಗೃಹಲಕ್ಷ್ಮಿ ಯೋಜನೆ ಅನುಷ್ಠಾನದಲ್ಲಿ 2025ರ ಏಪ್ರಿಲ್ ಮಾಹೆಯ ಅಂತ್ಯಕ್ಕೆ ಶೇ.99.97ರಷ್ಟು ಪ್ರಗತಿ ಸಾಧಿಸಿ ಇಡೀ ರಾಜ್ಯದಲ್ಲಿಯೇ ಅಗ್ರ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಈವರೆಗೆ 2,77,464 ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿದ್ದಾರೆ. 2025ರ ಏಪ್ರಿಲ್ ಮಾಹೆಯ ಅಂತ್ಯಕ್ಕೆ ಫಲಾನುಭವಿಗಳ ಖಾತೆಗೆ ಒಟ್ಟು 39,49,50,000 ರು. ಜಮೆಯಾಗಿದೆ.
ಚಾಮರಾಜನಗರ ತಾಲೂಕಿನಲ್ಲಿ 97359, ಗುಂಡ್ಲುಪೇಟೆ ತಾಲೂಕಿನಲ್ಲಿ 62111, ಹನೂರು ತಾಲೂಕಿನಲ್ಲಿ 48562, ಕೊಳ್ಳೇಗಾಲ ತಾಲೂಕಿನಲ್ಲಿ 46933 ಹಾಗೂ ಯಳಂದೂರು ತಾಲೂಕಿನಲ್ಲಿ 22499 ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಗೆ ನೋಂದಣಿಯಾಗಿದ್ದಾರೆ.ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಿಂದ ಮಹಿಳೆಯರು ವೈಯಕ್ತಿಕ ಬದುಕಿನ ಸಬಲೀಕರಣದ ಜೊತೆ ಸಮಾಜದಲ್ಲಿ ಇತರರಿಗೂ ನೆರವಾಗುತ್ತಿದ್ದಾರೆ. ಅನೇಕರು ಗೃಹಲಕ್ಷ್ಮಿ ಹಣದಿಂದ ಬದುಕು ಕಟ್ಟಿಕೊಂಡಿದ್ದಾರೆ. ಆರ್ಥಿಕವಾಗಿ ಮುಂದೆ ಬರುವ ಸ್ವಯಂ ಉದ್ಯೋಗಕ್ಕೆ ಗೃಹಲಕ್ಷ್ಮಿ ಹಣವನ್ನು ಬಳಕೆ ಮಾಡಿಕೊಂಡಿರುವುದು ವಿಶೇಷವಾಗಿದೆ.
ನಮ್ಮ ಕುಟುಂಬದಲ್ಲಿ ಮೂರು ಹೆಣ್ಣು ಮಕ್ಕಳಿದ್ದು, ಇವರ ವಿದ್ಯಾಭ್ಯಾಸಕ್ಕೆ ನನ್ನ ಪತಿ ಕೂಲಿ ಮಾಡಿದ ಹಣದಿಂದಲೇ ವೆಚ್ಚ ಮಾಡಬೇಕಿತ್ತು. ಈ ಹಣ ಸಾಕಾಗದೆ ತೊಂದರೆಗೆ ಒಳಗಾಗಿದ್ದೆವು. ಗೃಹಲಕ್ಷ್ಮಿ ಯೋಜನೆ ಜಾರಿಯಾದ ಬಳಿಕ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದೆ. ಅಲ್ಲದೇ ಗೃಹಲಕ್ಷ್ಮಿಯಿಂದ ಬಂದ ಹಣವನ್ನು ಒಟ್ಟುಗೂಡಿಸಿ ಮನೆಯಲ್ಲಿಯೇ ಸೀರೆ ವ್ಯಾಪಾರ ಆರಂಭಿಸಿದೆ. ಇದರಿಂದ ಜೀವನೋಪಾಯಕ್ಕೆ ಅನುಕೂಲವಾಗಿದೆ.ವಿದ್ಯಾಂಬ, ಕುಣಗಳ್ಳಿ, ಕೊಳ್ಳೇಗಾಲ ತಾಲೂಕು
ನನ್ನ ಪತಿ ಅನಾರೋಗ್ಯದಿಂದ ಬಳಲುತ್ತಿದ್ದು ಕುಟುಂಬ ನಿರ್ವಹಣೆಗೆ ಕಷ್ಟವಾಗಿತ್ತು. ಈ ಸಮಯದಲ್ಲಿ ಗೃಹಲಕ್ಷಿ ಯೋಜನೆಯಿಂದ ಬಂದ ಹಣವನ್ನು ಉಳಿತಾಯ ಮಾಡಿ ಚಾಪೆ ತಯಾರಿಸಲು ಬೇಕಾದ ಕಚ್ಚಾ ಸಾಮಾಗ್ರಿಗಳನ್ನು ಖರೀದಿಸಿದೆ. ಚಾಪೆ ನೇಯ್ದು ಮಾರಾಟ ಮಾಡಿದ ಹಣದಿಂದ ನನ್ನ ಪತಿಗೆ ಔಷಧ ಕೊಡಿಸಲು ಸಾಧ್ಯವಾಗುತ್ತಿದೆ. ಮಕ್ಕಳ ಶೈಕ್ಷಣಿಕ ಅಗತ್ಯತೆ ಪೂರೈಸಲು ನೆರವಾಗುತ್ತಿದೆ. ಕಷ್ಟ ಕಾಲದಲ್ಲಿ ಗೃಹಲಕ್ಷ್ಮಿ ನಮ್ಮ ಬದುಕಿಗೆ ಸಹಾಯ ಮಾಡಿದೆ.ಶಾಂತಮ್ಮ, ಹೊಸ ಹಂಪಾಪುರ