ಮಳೆಯಿಂದ ಜನರಿಗೆ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಿ

| Published : May 22 2025, 01:29 AM IST

ಮಳೆಯಿಂದ ಜನರಿಗೆ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಪೂರ್ವ ಕ್ಷೇತ್ರದ ಅಭಿವೃದ್ಧಿಗೆ ವಿವಿಧ ಇಲಾಖೆಗಳಿಂದ ಶೇ.70ರಷ್ಟು ಅನುದಾನ ತಂದು ಪಾಲಿಕೆ ಹೊರೆ ಕಡಿಮೆ ಮಾಡಿದ್ದೇನೆ

ಹುಬ್ಬಳ್ಳಿ: ಮುಂಗಾರು ಆರಂಭವಾಗಿದ್ದು, ಎಲ್ಲೆಡೆ ಮಳೆ ಸುರಿಯುತ್ತಿದೆ. ಅಧಿಕಾರಿಗಳು ಸಮನ್ವಯದಿಂದ ಪರಿಸ್ಥಿತಿ ನಿರ್ವಹಣೆಗೆ ಸಕಲ ಸಿದ್ಧತೆ ಕೈಗೊಳ್ಳಬೇಕು. ಜನರಿಗೆ ಯಾವುದೇ ಸಮಸ್ಯೆ ತಲೆದೂರದಂತೆ ಅಚ್ಚುಕಟ್ಟಾಗಿ ಕ್ರಮ ನಿರ್ವಹಿಸುವಂತೆ ಶಾಸಕ ಪ್ರಸಾದ ಅಬ್ಬಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಹಾನಗರ ಪಾಲಿಕೆ ಆವರಣದಲ್ಲಿರುವ ತಮ್ಮ ಶಾಸಕರ ಕಚೇರಿಯಲ್ಲಿ ಬುಧವಾರ ಮುಂಗಾರು ಮಳೆಗೆ ಮುನ್ನ ತೆಗೆದುಕೊಳ್ಳಬೇಕಾದ ಕ್ರಮ ಮತ್ತು ಮಳೆ ಸಂಬಂಧಿತ ಹಾನಿ ತಡೆಗಟ್ಟುವ ಕುರಿತು ಸಭೆ ನಡೆಸಿ ಮಾತನಾಡಿದರು.

ಪೂರ್ವ ಕ್ಷೇತ್ರದ ಅಭಿವೃದ್ಧಿಗೆ ವಿವಿಧ ಇಲಾಖೆಗಳಿಂದ ಶೇ.70ರಷ್ಟು ಅನುದಾನ ತಂದು ಪಾಲಿಕೆ ಹೊರೆ ಕಡಿಮೆ ಮಾಡಿದ್ದೇನೆ. ಶೇ. 30ರಷ್ಟು ಅಭಿವೃದ್ಧಿ ಕಾರ್ಯ ಪಾಲಿಕೆ ಮಾಡದೇ ಇದ್ದರೆ ಹೇಗೆ ಎಂದು ಪಾಲಿಕೆ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು.

ರಾಜ ನಾಲೆಗಳಿಗೆ ತಡೆಗೋಡೆ ನಿರ್ಮಿಸಿದ್ದರಿಂದ ಅನಾಹುತ ತಪ್ಪಿಸಲಾಗಿದೆ. ಇನ್ನು ರಾಜಕಾಲುವೆ ಮೇಲಿರುವ ಇಲ್ಲಿನ ಕಮರಿಪೇಟೆ ಪೊಲೀಸ್‌ ಠಾಣೆ ಶೀಘ್ರವೇ ಸ್ಥಳಾಂತರ ಮಾಡಬೇಕು. ಹೂಳು ತುಂಬಿರುವ ಬಗ್ಗೆ ದೂರುಗಳಿದ್ದು, ದೊಡ್ಡ ಹಾನಿಯಾಗುವ ಮೊದಲೇ ಪೊಲೀಸ್‌ ಠಾಣೆ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವಂತೆ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು.

ಮನೆಗಳಿಗೆ ಹಾನಿಯಾದ ಸಂದರ್ಭದಲ್ಲಿ ಪರಿಹಾರವನ್ನು ಸಕಾಲಿಕವಾಗಿ ವಿತರಿಸಲು ಅನುಕೂಲವಾಗುವಂತೆ ವಾಸ್ತವಿಕ, ಉತ್ತಮವಾಗಿ ದಾಖಲಿಸಲಾದ ವರದಿ ಸಲ್ಲಿಸಬೇಕು. ಮಳೆಯಿಂದ ಹಾನಿಯಾದ ಮನೆಗಳಿಗೆ ಶೀಘ್ರ ಪರಿಹಾರ ನೀಡುವ ಕಾರ್ಯವಾಗಬೇಕು.

ಹೆಸ್ಕಾಂ ಅಧಿಕಾರಿಗಳು ಜಗರೂಕರಾಗಿರಲು ಮತ್ತು ವಿದ್ಯುತ್‌ ಕಡಿತದ ಸಂದರ್ಭದಲ್ಲಿ ತಕ್ಷಣ ಮರುಸ್ಥಾಪನೆ ಮಾಡುವಂತೆ ಸೂಚನೆ ನೀಡಿದ ಶಾಸಕರು, ‘ಜೋರು ಮಳೆ ಬಂದಾಗ, ತಗ್ಗು ಪ್ರದೇಶದ ಮನೆಗಳಲ್ಲಿ ವಾಸಿಸುವವರಿಗೆ ಎಚ್ಚರಿಕೆ ಸಂದೇಶ ನೀಡಬೇಕು. ಚರಂಡಿ ಮತ್ತು ಕಾಲುವೆ ನೀರು ಮನೆಗಳಿಗೆ ನುಗ್ಗದಂತೆ ನೋಡಿಕೊಳ್ಳಬೇಕು. ಎಲ್ಲಿಯಾದರೂ ಸಮಸ್ಯೆ ಇದ್ದರೆ ತಕ್ಷಣ ದುರಸ್ತಿ ಕಾರ್ಯ ನಡೆಸಬೇಕು. ತುರ್ತು ಬಳಕೆಗೆ ಮಣ್ಣು ತೆಗೆಯುವ ಯಂತ್ರಗಳನ್ನು ಸಿದ್ಧವಾಗಿಡಬೇಕು ಮತ್ತು ಅಪಾಯಕಾರಿಯಾಗಿ ವಾಲುತ್ತಿರುವ ಮರಗಳನ್ನು ತೆಗೆದುಹಾಕಲು ಅಧಿಕಾರಿಗಳಿಗೆ ಸೂಚಿಸಲಾಯಿತು.

ಮಳೆಗಾಲದಲ್ಲಿ ಹರಡುವ ರೋಗಗಳ ತಡೆಗಟ್ಟುವ ಕುರಿತು ಜಾಗೃತಿ ಮೂಡಿಸಬೇಕು. ಮನೆ ಮನೆಗೆ ತೆರಳಿ ಡೆಂಘೀ ಮತ್ತು ಚಿಕೂನ್‌ಗುನ್ಯಾ ತಡೆ ಕುರಿತು ತಿಳಿಸಬೇಕು. ಲಾರ್ವಾ ಸರ್ವೇ ಕಾರ್ಯ ತೀವ್ರಗೊಳಿಸಿ ಪಾಲಿಕೆಯಿಂದ ಹೆಚ್ಚಿನ ಆರೋಗ್ಯ ಸಿಬ್ಬಂದಿ ನಿಯೋಜಿಸಿ. ವಾಹನಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದು ಜಿಲ್ಲಾ ಆರೋಗ್ಯಾಧಕಾರಿ ಹೊನಕೇರಿ ಮತ್ತು ಪಾಲಿಕೆ ಆರೋಗ್ಯಾಧಿಕಾರಿ ಡಾ. ದಂಡಪ್ಪನವರಿಗೆ ಸೂಚನೆ ನೀಡಿದರು.

ಸುರಕ್ಷಾ ಪರಿಕರ ನೀಡಿ:ಪೌರಕಾರ್ಮಿಕರಿಗೆ ನಿಗದಿತ ಅವಧಿಯಲ್ಲಿ ವೇತನ ಪಾವತಿಗೆ ಕ್ರಮವಹಿಸಬೇಕು.ಸುರಕ್ಷಾ ಪರಿಕರಗಳನ್ನು ತಪ್ಪದೇ ನೀಡಬೇಕು. ಈಗಾಗಲೇ ಶೇ. 80ರಷ್ಟು ಪೌರಕಾರ್ಮಿಕರಿಗೆ ಸುರಕ್ಷಾ ಪರಿಕರ ನೀಡಿರುವುದು ಸಂತಸದ ವಿಷಯ. ಇನ್ನುಳಿದವರಿಗೂ ಎರಡು ದಿನದಲ್ಲಿ ಪೂರೈಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ರುದ್ರೇಶ ಗಾಳಿ, ಜಿಲ್ಲಾ ಆರೋಗ್ಯಾಧಿಕಾರಿ ಹೊನಕೇರಿ, ತಹಸೀಲ್ದಾರ್ ಆರ್.ಕೆ. ಪಾಟೀಲ, ಪಾಲಿಕೆ ಆರೋಗ್ಯ ಅಧಿಕಾರಿ ಶ್ರೀಧರ ದಂಡಪ್ಪನವರ, ತಾಲೂಕು ಆರೋಗ್ಯಾಧಿಕಾರಿ ಡಾ. ಹುಲಗೇಶ ಇಂಜಗನರಿ, ಪಾಲಿಕೆ ಅಧೀಕ್ಷಕ ಅಭಿಯಂತ ವಿಜಯಕುಮಾರ್, ಪಾಲಿಕೆ ವಲಯ ಆಯುಕ್ತರು, ಎಂಜಿನಿಯರ್‌ಗಳು ಸೇರಿದಂತೆ ವಿವಿಧ ಇಲಾಖೆ ಸಿಬ್ಬಂದಿ ಇದ್ದರು.