ಶಿವಾನಂದ ಗೊಂಬಿ
ಹುಬ್ಬಳ್ಳಿ:ಮೃತಪಟ್ಟವರ ಹೆಸರಿಗೂ ಜಮೆಯಾಗಿರುವ "ಗೃಹಲಕ್ಷ್ಮಿ " ಹಣದ ಮಾಹಿತಿ ಕಲೆಹಾಕುವ ಜವಾಬ್ದಾರಿ ಇದೀಗ ಅಂಗನವಾಡಿ ಕಾರ್ಯಕರ್ತೆಯರ ಹೆಗಲಿಗೇರಿದೆ. "ಫ್ರಾಡ್ ಕಾಲ್ " ಇರಬಹುದೆಂಬ ಶಂಕೆಯಿಂದ ಮೃತಪಟ್ಟ ಗೃಹಲಕ್ಷ್ಮಿಯರ ಸಂಬಂಧಿಕರಿಂದ ಸರಿಯಾಗಿ ಸ್ಪಂದನೆ ಸಿಗುತ್ತಲೇ ಇಲ್ಲ.
ಗೃಹಲಕ್ಷ್ಮಿ ಯೋಜನೆಯಡಿ ಮೃತಪಟ್ಟವರ ಖಾತೆಗೂ ಹಣ ಜಮೆಯಾಗಿದೆ. ಅದನ್ನು ವಸೂಲಿ ಮಾಡಿ ಎಂದು ಸರ್ಕಾರ ತಿಳಿಸಿದೆ. ರಾಜ್ಯದಲ್ಲಿ ಸರಿಸುಮಾರು 4 ಲಕ್ಷಕ್ಕೂ ಅಧಿಕ ಮೃತಪಟ್ಟವರ ಖಾತೆಗೆ ಗೃಹಲಕ್ಷ್ಮಿ ಹಣ ಜಮೆಯಾಗಿದ್ದು ಎಷ್ಟು ತಿಂಗಳಿಂದ ಮೃತಪಟ್ಟವರ ಖಾತೆಗಳಿಗೆ ಜಮೆಯಾಗಿದೆ. ಸರ್ಕಾರಕ್ಕೆ ಎಷ್ಟು ಕೋಟಿ ನಷ್ಟವಾಗಿದೆ? ಎಂಬ ಬಗ್ಗೆ ಮಾಹಿತಿ ಇಲ್ಲ. ಮೃತಪಟ್ಟವರ ಹೆಸರು ಹಾಗೂ ರೇಷನ್ ಕಾರ್ಡ್ ನಂಬರ್‌ನ ಪಟ್ಟಿಯಷ್ಟೇ ರಾಜ್ಯ ಸರ್ಕಾರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ರವಾನಿಸಿದೆ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೂ ಬ್ಯಾಂಕ್‌ವಾರು ಮಾಹಿತಿ ಪಡೆಯಲು ಲೀಡ್ ಬ್ಯಾಂಕಿಗೆ ಮಾಹಿತಿ ಕಳುಹಿಸಿದೆ. ಬ್ಯಾಂಕ್‌ವಾರು ಮಾಹಿತಿ ಪಡೆಯುವುದಕ್ಕೂ ಹೆಜ್ಜೆ ಇಟ್ಟಿರುವ ಜತೆ-ಜತೆಗೆ ಮೃತಪಟ್ಟ ಗೃಹಲಕ್ಷ್ಮಿಯರು ಕೊಟ್ಟಿರುವ ನಂಬರ್‌ಗೆ ಕರೆ ಮಾಡಿ ಮಾಹಿತಿ ಪಡೆಯುವಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚಿಸಿದ್ದಾರೆ.
ಸ್ಪಂದನೆ ಇಲ್ಲ:
ಕಳೆದ ಏಳೆಂಟು ದಿನಗಳಿಂದ ಅಂಗನವಾಡಿ ಕಾರ್ಯಕರ್ತೆಯರು ಈ ಕೆಲಸದಲ್ಲಿ ನಿರತರಾಗಿದ್ದು, ಯಾರೂ ಸರಿಯಾಗಿ ಮಾಹಿತಿ ನೀಡುತ್ತಿಲ್ಲವಂತೆ. ಗ್ರಾಮೀಣ ಪ್ರದೇಶದಲ್ಲಿ ಅಷ್ಟೊಂದು ಸಮಸ್ಯೆಯಾಗುತ್ತಿಲ್ಲ. ಆದರೆ, ನಗರ ಪ್ರದೇಶಗಳಲ್ಲಿನ ಫಲಾನುಭವಿಗಳ ಸಂಬಂಧಿಕರು ಮಾತ್ರ ಮಾಹಿತಿ ನೀಡುತ್ತಿಲ್ಲ. ಆನ್‌ಲೈನ್ ವಂಚನೆಯ (ಸೈಬರ್ ಕ್ರೈಂ) ಕರೆಗಳಿರಬಹುದೆಂದುಂ ಮಾಹಿತಿ ನೀಡಲು ಹಿಂಜರಿಯುತ್ತಿದ್ದಾರೆ. ನಿಮಗೆ ಯಾರು ನಮಗೆ ಕರೆ ಮಾಡಲು ಹೇಳಿದ್ದು, ನಿಮ್ಮ ಅಧಿಕಾರಿ ಯಾರು? ಯಾವುದೇ ವೈಯಕ್ತಿಕ ಮಾಹಿತಿ ನೀಡಬಾರದೆಂದು ಸರ್ಕಾರವೇ ಜಾಗೃತಿ ಮಾಡುತ್ತಿದೆಯಲ್ಲ. ಮತ್ಹೇಗೆ ನಾವು ಮಾಹಿತಿ ನೀಡಬೇಕು ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರಂತೆ. ಅವರಿಗೆ ಹೇಗೆ ಹೇಳಬೇಕೋ ತಿಳಿಯದೇ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಅಧಿಕಾರಿಯ ನಂಬರ್ ಕೊಟ್ಟು ಸುಮ್ಮನಾಗುತ್ತಿದ್ದಾರೆ.
ಇನ್ನು ಹಲವೆಡೆ ಮೊಬೈಲ್ ನಂಬರ್ ವರ್ಕ್ ಆಗುತ್ತಿಲ್ಲ. ಮತ್ತೆ ಕೆಲ ಅನಕ್ಷರಸ್ಥ ಮಹಿಳೆಯರು ತಮ್ಮ ನಂಬರ್ ಕೊಟ್ಟೇ ಇಲ್ಲ. ಕರ್ನಾಟಕ ಒನ್, ಗ್ರಾಮ ಒನ್‌ಗಳಲ್ಲಿನ ಆಪರೇಟರ್‌ಗಳ ನಂಬರ್‌ಗಳೇ ನಮೂದಾಗಿವೆ. ಅವರಿಗೆ ಫೋನ್ ಮಾಡಿದರೆ ಕರ್ನಾಟಕ ಒನ್ ಆಪರೇಟರ್‌ಗಳಿಗೆ ಹೋಗುತ್ತಿದೆ. ಹೀಗಾಗಿ ವಸೂಲಿ ಮಾಡುವುದು ಒಂದೆಡೆಯಾದರೆ, ಮಾಹಿತಿ ಕಲೆ ಹಾಕುವುದೇ ದೊಡ್ಡ ಸವಾಲಿನ ಕೆಲಸವಾಗಿದೆ.ಮನೆ-ಮನೆಗೆ ತೆರಳುವ ಸಾಧ್ಯತೆ:
ಫೋನ್ ಮೂಲಕ ಸರಿಯಾದ ಮಾಹಿತಿ ಸಿಗದ ಕಾರಣ ಮೃತಪಟ್ಟವರ ಮನೆಗೆ ತೆರಳಿ ಮಾಹಿತಿ ಕಲೆ ಹಾಕುವಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಅಧಿಕಾರಿಗಳು ತಿಳಿಸಲು ಮುಂದಾಗಿದ್ದಾರೆ. ಮುಂದೆ ನಡೆಯುವ ಜಿಲ್ಲಾವಾರು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸಭೆಯಲ್ಲಿ ಈ ಕುರಿತು ನಿರ್ಣಯಕೈಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಒಟ್ಟಿನಲ್ಲಿ ಮೃತಪಟ್ಟ ಗೃಹಲಕ್ಷ್ಮಿಯರ ಖಾತೆಗೆ ಹಣ ಜಮೆಯಾಗಿರುವುದು ಸರ್ಕಾರಕ್ಕೆ ಪಿಕಲಾಟ ತಂದಿಟ್ಟಿರುವುದಂತೂ ಸತ್ಯ.ಧಾರವಾಡ ಜಿಲ್ಲೆಯಲ್ಲಿ ಕೆಲ ಮೃತಪಟ್ಟ ಫಲಾನುಭವಿಗಳ ಖಾತೆಗೂ ಹಣ ಜಮೆಯಾಗಿದ್ದು ಅದನ್ನು ವಸೂಲಿ ಮಾಡುವಂತೆ ಸೂಚಿಸಲಾಗಿದೆ. ಕಳೆದ ಹಲವು ದಿನಗಳಿಂದ ಈ ಪ್ರಕ್ರಿಯೆ ನಡೆಯುತ್ತಿದೆ.
ಎಸ್.ಆರ್. ಪಾಟೀಲ ಜಿಲ್ಲಾಧ್ಯಕ್ಷ, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರಮೃತಪಟ್ಟ ಫಲಾನುಭವಿಗಳ ನಂಬರ್‌ಗೆ ಅಂಗನವಾಡಿ ಕಾರ್ಯಕರ್ತೆಯರಿಂದ ಕರೆ ಮಾಡಿಸಿದರೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಫ್ರಾಡ್ ಕಾಲ್ ಇರಬಹುದೆಂಬ ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಎಲ್ಲಿ ದುಡ್ಡು ಬರುವುದು ನಿಂತು ಹೋಗುತ್ತದೆ ಎಂದು ಮಾಹಿತಿ ನೀಡಲು ಹಿಂಜರಿಯುತ್ತಿದ್ದಾರೆ. ಇದೊಂದು ಸವಾಲಿನ ಕೆಲಸ.ಸುನಿತಾ ಪಾಟೀಲ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಹುಬ್ಬಳ್ಳಿ- ಧಾರವಾಡ