ಸಾರಾಂಶ
ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಅಕ್ಕಾತಾಯಿ ಲಂಗೋಟಿ ವೃದ್ಧೆ ಗೃಹಲಕ್ಷ್ಮೀ ಯೋಜನೆಯಿಂದ ತನಗೆ ಬಂದ 10 ತಿಂಗಳ ಹಣ ಕೂಡಿಸಿ ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿ, ಸಿಎಂ ಸಿದ್ದರಾಮಯ್ಯ ಅವರಿಗೆ ಒಳಿತಾಗಲೆಂದು ಹರಿಸಿದ್ದಾರೆ.
ಬೆಳಗಾವಿ : ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಟಿವಿ, ಫ್ರಿಡ್ಜ್, ಮೊಬೈಲ್ ಸೇರಿದಂತೆ ಮತ್ತಿತರೆ ವಸ್ತುಗಳನ್ನು ಖರೀದಿ ಮಾಡಿ ಸುದ್ದಿಯಾಗಿರುವುದು ಎಲ್ಲರಿಗೂ ಗೊತ್ತು. ಆದರೆ, ಈ ಫಲಾನುಭವಿ ವೃದ್ಧೆಯು ಗೃಹಲಕ್ಷ್ಮೀ ಯೋಜನೆಯಿಂದ ತನಗೆ ಬಂದ 10 ತಿಂಗಳ ಹಣ ಕೂಡಿಸಿ ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿ, ಸಿಎಂ ಸಿದ್ದರಾಮಯ್ಯ ಅವರಿಗೆ ಒಳಿತಾಗಲೆಂದು ಹರಿಸಿದ್ದಾರೆ.
ಜಿಲ್ಲೆಯ ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಅಕ್ಕಾತಾಯಿ ಲಂಗೋಟಿ ಊರಿಗೆ ಹೋಳಿಗೆ ಊಟ ಹಾಕಿಸಿದ ವೃದ್ಧೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರತಿ ತಿಂಗಳು ಕುಟುಂಬ ಯಜಮಾನಿಗೆ ₹2 ಸಾವಿರ ನೀಡುತ್ತಿದೆ. ರಾಜಕೀಯವಾಗಿ ಸಿದ್ದರಾಮಯ್ಯ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂಬ ಸದುದ್ದೇಶದಿಂದ ಊರಿಗೆ ಹೋಳಿಗೆ ಊಟ ಹಾಕಿಸಿ, ಗ್ರಾಮದ ದೇವತೆಗೂ ಪೂಜೆ ಸಲ್ಲಿಸಲಾಗಿದೆ. ಅಲ್ಲದೆ, ಐವರು ಮುತ್ತೈದೆಯರಿಗೆ ಉಡಿ ತುಂಬಿ ಅಜ್ಜಿ ಹರಿಸಿದ್ದಾರೆ. ಈ ಅಜ್ಜಿಯ ಕಾರ್ಯಕ್ಕೆ ಎಲ್ಲೆಡೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಸ್ವತಃ ಅಜ್ಜಿಯೇ ಹೋಳಿಗೆ ಮಾಡಿ, ಗ್ರಾಮಸ್ಥರಿಗೆ ಊಟ ಉಣ ಬಡಿಸಿದ್ದಾರೆ. ಈ ಅಜ್ಜಿಗೆ ಗ್ರಾಮದ ಮಹಿಳೆಯರು ಕೂಡ ಸಾಥ್ ನೀಡಿದ್ದಾರೆ. ಗೃಹಲಕ್ಷ್ಮೀ ಯೋಜನೆಯಡಿ ರಾಜ್ಯದ ಬಡವರ್ಗದವರಿಗೆ ತುಂಬಾ ಅನುಕೂಲವಾಗಿದೆ. ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ರಾಜ್ಯಸರ್ಕಾರ ಸ್ಥಗಿತಗೊಳಿಸಬಾರದು ಎಂದು ಲಕ್ಕವ್ವ ಹಟ್ಟಿಹೊಳಿ ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಇಡೀ ರಾಜ್ಯಕ್ಕೆ ಅನ್ನಭಾಗ್ಯ, ಗೃಹಲಕ್ಷ್ಮೀಯೋಜನೆಗಳ ಮೂಲಕ ಅನ್ನ ಹಾಕಿದ್ದಾರೆ. ಹಾಗಾಗಿ,ಅವರಿಗೆ ಯಾವಾಗಲೂ ಒಳ್ಳೆಯದೇ ಆಗಬೇಕು. ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂದು ಹರಕೆ ಹೊತ್ತು ನನಗೆ ಬಂದ 10 ತಿಂಗಳ ಗೃಹಲಕ್ಷ್ಮೀ ಹಣದಿಂದ ಗ್ರಾಮದ ಜನತೆಗೆ ಹೋಳಿಗೆ ಊಟ ಹಾಕಿಸಿದ್ದೇನೆ.
-ಅಕ್ಕಾತಾಯಿ ಲಂಗೋಟಿ, ಊಟ ಹಾಕಿಸಿದ ವೃದ್ಧೆ