ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಸಮಾಜಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆಗಳ ಪಾಲಿಟೆಕ್ನಿಕ್ ಕಾಲೇಜು, ಇತರೆ ವಿದ್ಯಾರ್ಥಿಗಳ ವಸತಿ ನಿಲಯಗಳಿಗೆ ನಿಗದಿ ಪಡಿಸಿದ ಅವಧಿಗೆ ಪಡಿತರ ಪದಾರ್ಥಗಳು ಸರಬರಾಜು ಮಾಡದೇ ಗುತ್ತಿಗೆದಾರ ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಈ ಹಿಂದೆ ತಾಲೂಕಿಗೆ ಒಬ್ಬರಂತೆ ಟೆಂಡರ್ ನೀಡಲಾಗುತ್ತಿತ್ತು. ಆದರೆ ಕಳೆದ ತಿಂಗಳು ರಾಜ್ಯದ ಎಲ್ಲಾ ಜಿಲ್ಲೆಗಳ ಟೆಂಡರ್ ಅನ್ನು ಒಬ್ಬರಿಗೇ ನೀಡಲಾಗಿದೆ. ಒಬ್ಬರಿಗೆ ದಿನಸಿ, ಹಾಲು, ಮೊಟ್ಟೆ, ಮಾಂಸ, ತರಕಾರಿ ಸೇರಿದಂತೆ ಎಲ್ಲಾ ಆಹಾರ ಪದಾರ್ಥಗಳ ಸರಬರಾಜಿಗೆ ಟೆಂಡರ್ ನೀಡಿದ್ದು ಹೊಸದಾಗಿ ಟೆಂಡರ್ ಪಡೆದ ವ್ಯಕ್ತಿ ೧೦ ದಿನವಾಗುತ್ತಾ ಬಂದರೂ ಪಡಿತರ ಪದಾರ್ಥಗಳ ಸರಬರಾಜು ಮಾಡಿಲ್ಲ. ಪರಿಣಾಮ ವಾರ್ಡನ್‌ಗಳು ಸ್ಥಳೀಯ ಅಂಗಡಿಗಳಲ್ಲಿ ಪಡಿತರವನ್ನು ಸಾಲವಾಗಿ ತಂದು ವಿದ್ಯಾರ್ಥಿಗಳಿಗೆ ಊಟ, ತಿಂಡಿ ನೀಡುತ್ತಿದ್ದಾರೆ. ಕೆಲವು ಹಾಸ್ಟೆಲ್‌ಗಳಲ್ಲಿ ಅಲ್ಪಸ್ವಲ್ಪ ಉಳಿದಿದ್ದ ದಿನಸಿ ವಸ್ತುಗಳ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಈ ಹಿಂದೆ ರಾಜ್ಯದಲ್ಲಿ ವಿಭಾಗವಾರು ಇಲ್ಲವೆ ಜಿಲ್ಲಾವಾರು ಟೆಂಡರ್ ನೀಡುವ ಪದ್ಧತಿಯಿತ್ತು. ಇದೀಗ ಸರಕಾರದ ನಿಯಮವೋ, ಅಥವಾ ಇನ್ನೇನು ಒಳ ಒಪ್ಪಂದವೊ ಒಬ್ಬರಿಗೇ ಟೆಂಡರ್ ನೀಡಲಾಗಿದೆ. ಹೊಸ ಟೆಂಡರ್‌ದಾರ ಪಡಿತರ ಪದಾರ್ಥಗಳ ಸರಬರಾಜು ಮಾಡದಿದ್ದರೂ ಸಮಾಜಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಮೌನವಾಗಿರುವುದಕ್ಕೆ ಕಾರಣ ತಿಳಿಯುತ್ತಿಲ್ಲ. ಹಾಸ್ಟೆಲ್‌ಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿ ಆಹಾರ ಪದಾರ್ಥಗಳ ವ್ಯತ್ಯಾಸ ಕಂಡುಬಂದಲ್ಲಿ ಶಿಸ್ತುಕ್ರಮಕ್ಕೆ ಮುಂದಾಗುವ ಅಧಿಕಾರಿಗಳು ಇಡಿ ಜಿಲ್ಲೆಯ ಹಾಸ್ಟೆಲ್‌ಗಳಿಗೆ ಪಡಿತರ ಸರಬರಾಜು ಆಗದೆ ೧೦ ದಿನ ಕಳೆದರೂ ಸುಮ್ಮನಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.ಈ ಬಗ್ಗೆ ಹಾಸ್ಟೆಲ್ ವಾರ್ಡನ್ ಅವರನ್ನು ಸಂಪರ್ಕಿಸಿದಾಗ, ಪಡಿತರ ಸರಬರಾಜು ಆಗಿಲ್ಲ, ಆದರೆ ಅಂಗಡಿಗಳಲ್ಲಿ ಸಾಲ ತಂದು ವ್ಯವಸ್ಥೆ ಮಾಡುತ್ತಿದ್ದೇವೆ. ಅಂಗಡಿಗೆ ಟೆಂಡರ್‌ದಾರರು ಹಣ ಜಮೆ ಮಾಡುತ್ತಾರೆಂದು ಹೇಳುತ್ತಾರೆ. ಹಾಗಾದರೆ ೧೦ ದಿನದ ಹಿಂದೆಯಷ್ಟೇ ರಾಜ್ಯಾದ್ಯಂತ ಪಡಿತರ ಸರಬರಾಜಿಗೆ ಟೆಂಡರ್ ಪಡೆದಿರುವ ಹೊಸ ಟೆಂಡರ್‌ದಾರರು ಸ್ಥಳೀಯ ಅಂಗಡಿಗೆ ತೆರಳಿ ಸಾಲ ನೀಡುವಂತೆ ಮನವಿ ಮಾಡಿ ಹೋಗಿದ್ದಾರೆಯೆ ಎಂಬ ಸಂಶಶ ಸಾರ್ವಜನಿಕರನ್ನು ಕಾಡುತ್ತಿದೆ.
ವಿದ್ಯಾಭ್ಯಾಸಕ್ಕಾಗಿ ಮನೆ, ಕುಟುಂಬವನ್ನು ತೊರೆದು ವಿದ್ಯಾರ್ಥಿ ನಿಲಯಕ್ಕೆ ಬರುತ್ತಾರೆ. ಆದರೆ ಈ ರೀತಿ ಸರಿಯಾಗಿ ಪಡಿತರ ವ್ಯವಸ್ಥೆ ಮಾಡದೇ ಮಕ್ಕಳ ಜೊತೆ ಚಲ್ಲಾಟವಾಡುವುದು ಸರಿಯಲ್ಲ. ಕೂಡಲೇ ಪಡಿತರ ಸರಬರಾಜು ಮಾಡುವ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕಿದೆ. ಇಲ್ಲದಿದ್ದಲ್ಲಿ ಸೂಕ್ತ ಶಿಸ್ತುಕ್ರಮಕ್ಕೆ ಮೇಲಾಧಿಕಾರಿಗಳು ಮುಂದಾಗಬೇಕಿದೆ ಎನ್ನುವುದು ಪೋಷಕರ ಒತ್ತಾಯವಾಗಿದೆ.