ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಕರ್ನಾಟಕ ರಾಜ್ಯದಲ್ಲಿ 15 ಪ್ರಯೋಗಾಲಯಗಳು ಮುಂಜೂರಾಗಿದ್ದು ಅದರಲ್ಲಿ ನಮ್ಮ ತಾಲೂಕು ಒಂದಾಗಿದೆ. ಶಿರಾ ತಾಲೂಕಿಗೆ ಅನುಕೂಲವಾಗುವ ಎಲ್ಲಾ ಸೌಲಭ್ಯಗಳನ್ನು ಮಂಜೂರು ಮಾಡಿಸಲು ನಾನು ಬದ್ಧನಾಗಿದ್ದು, ಆಸ್ಪತ್ರೆಗೆ ವೈದ್ಯರನ್ನು ನೇಮಕ ಮಾಡಿಕೊಳ್ಳುವ ಸಲುವಾಗಿ ಈಗಾಗಲೇ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಶಾಸಕಟಿ.ಬಿ ಜಯಚಂದ್ರ ಹೇಳಿದರು. ಅವರು ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸುಮಾರು 50 ಲಕ್ಷ ರು. ವೆಚ್ಚದ ಪ್ರಯೋಗಾಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಶಿರಾ ಸಾರ್ವಜನಿಕ ಆಸ್ಪತ್ರೆಗೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಶಿರಾ ತಾಲೂಕಿನ ಜನತೆ ಮಾತ್ರವಲ್ಲದೇ ಅಕ್ಕಪಕ್ಕದ ತಾಲೂಕು ಹಾಗೂ ಆಂದ್ರಪ್ರದೇಶದಿಂದಲೂ ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದು, ರೋಗಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಎರಡೂ ಆಸ್ಪತ್ರೆಗಳ ರೋಗಿಗಳಿಗೂ ಒಂದೇ ಸ್ಥಳದಲ್ಲಿ ರಕ್ತ ಪರೀಕ್ಷೆ ಮಾಡಲು ಅನುಕೂಲವಾಗುವಂತೆ ಪ್ರಯೋಗಾಲಯವನ್ನು ಸ್ಥಾಪಿಸಲಾಗುತ್ತಿದೆ. ಸಾರ್ವಜನಿಕರಿಗೆ ಸೇವೆ ಸಲ್ಲಿಸುವ ವೈದ್ಯರುಗಳು ಸರಿಯಾದ ವೇಳೆಯಲ್ಲಿ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ನೀಡಬೇಕು, ರೋಗಿಗಳಿಗೆ ತೊಂದರೆ ಆಗಬಾರದು ಇತ್ತೀಚಿಗೆ ಕಲುಷಿತ ನೀರು ಹಾಗೂ ಕಲಬೆರಕೆ ಆಹಾರದಿಂದ ಜನರು ರೋಗಕ್ಕೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಅರಿವು ಬಹಳ ಮುಖ್ಯ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿಯೇ ಇದೆ. ಈಗ ನಿರ್ಮಾಣ ಮಾಡುತ್ತಿರುವ ಪ್ರಯೋಗಾಲಯದ ಜಾಗ ನನಗೆ ಸೂಕ್ತ ಅನಿಸುತ್ತಿಲ್ಲ, ಆಸ್ಪತ್ರೆಯ ಮುಖ್ಯದ್ವಾರದಲ್ಲೇ ದ್ವಿಚಕ್ರ ವಾಹನ ಪಾರ್ಕಿಂಗ್ ಇರುವ ಜಾಗದಲ್ಲಿ ಪ್ರಯೋಗಾಲಯ ನಿರ್ಮಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಿಶಾನ್ ಮೊಹಮ್ಮದ್, ಸದಸ್ಯರಾದ ಉಮಾ ವಿಜಯರಾಜ್, ಬಿ.ಎಂ.ರಾಧಾಕೃಷ್ಣ, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಬಾಬುರಾಜೇಂದ್ರ ಪ್ರಸಾದ್, ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಡಿ.ಎಂ ಗೌಡ, ತಾಲೂಕು ಆರೋಗ್ಯಾಧಿಕಾರಿ ಡಾ. ಸಿದ್ದೇಶ್, ಡಾ. ಮಂಜುನಾಥ್, ಡಾ. ನರೇಶ್ ಬಾಬು, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್ ಬರಗೂರು, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಮಣಿಕಂಠ, ನಗರ ಅಧ್ಯಕ್ಷ ಅಂಜನ್ ಕುಮಾರ್, ಗ್ರಾಮಾಂತರ ಅಧ್ಯಕ್ಷ ಹೇಮಂತ್ ಗೌಡ, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಶೋಭಾ ನಾಗರಾಜ್, ಕಲ್ಲುಕೋಟೆ ದೇವರಾಜ್, ರಮೇಶ್, ಎಚ್ ಎಲ್ ರಂಗನಾಥ್ ಕಂಬಣ್ಣ, ಸೇರಿದಂತೆ ಹಲವರು ಹಾಜರಿದ್ದರು.